ಖ್ಯಾತ ಜಾನಪದ ಗಾಯಕಿ ಟೀಜನ್ ಬಾಯಿ ವಿಧಿವಶ; ಭಾರತೀಯ ಕಲೆ, ಸಂಸ್ಕೃತಿಗೆ ದೊಡ್ಡ ನಷ್ಟ: ಪ್ರಧಾನಿ ಸಂತಾಪ

ಹಿರಿಯ ಜಾನಪದ ಕಲಾವಿದೆ ತೀಜನ್ ಬಾಯಿ ವಿಧಿವಶ
ಹಿರಿಯ ಜಾನಪದ ಕಲಾವಿದೆ ತೀಜನ್ ಬಾಯಿ ವಿಧಿವಶ
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಜಾನಪದ ಕಲಾ ಕ್ಷೇತ್ರಕ್ಕೆ ತಮ್ಮ ಕಂಠದಿಂದಲೇ ಅಪಾರ ಸೇವೆ
  • ಪದ್ಮಶ್ರೀ, ಪದ್ಮವಿಭೂಷಣ ಪ್ರಶ್ತಸಿ ಪುರಸ್ಕೃತೆ ಪಾಂಡವಾನಿ ಗಾಯಕಿ ಟೀಜನ್​ ಬಾಯಿ ನಿಧನ
  • ಹಿರಿಯ ಕಲಾವಿದೆಯ ಅಗಲಿಕೆ ನೆನೆದು ಪ್ರಧಾನಿ ಮೋದಿ ಸಂತಾಪ
Teejan Bai: ಭಾರತೀಯ ಜಾನಪದ ಕಲಾ ಕ್ಷೇತ್ರಕ್ಕೆ ತಮ್ಮ ಕಂಠದಿಂದಲೇ ಅಪಾರ ಸೇವೆ, ಕೊಡುಗೆಗಳನ್ನು ಸಲ್ಲಿಸಿ, ಜನರ ಮನಸಿನಲ್ಲಿ ಬೇರೂರಿರುವ ಪದ್ಮಶ್ರೀ, ಪದ್ಮವಿಭೂಷಣ ಪ್ರಶ್ತಸಿ ಪುರಸ್ಕೃತೆ ಪಾಂಡವಾನಿ ಗಾಯಕಿ ತೀಜನ್​ ಬಾಯಿ ಭಾನುವಾರ ಕೊನೆಯುಸಿರೆಳೆದರು.  
ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ರಾಯ್​ಪುರದ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಶನಿವಾರ (ಜು.04) ಬೆಳಗ್ಗೆ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಕೊನೆಯುಸಿರೆಳೆದರು ಎಂದು ಕುಟುಂಬಸ್ಥರು ದೃಢಪಡಿಸಿದ್ದಾರೆ. ಆದರೆ, ಅವರ ನಿಧನದ ಸುದ್ದಿ ಒಂದು ದಿನ ತಡವಾಗಿ ಹೊರಬಂದಿದೆ. ತಮ್ಮ ಧ್ವನಿಯಿಂದಲೇ ಜಾನಪದ ಕಲೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದ ಹಿರಿಯ ಗಾಯಕಿಯನ್ನು ನೆನೆದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದರು.

ಪ್ರಧಾನಿ ಮೋದಿ ಸಂತಾಪ

"ಖ್ಯಾತ ಪಾಂಡವಾನಿ ಗಾಯಕಿ ತೀಜನ್ ಬಾಯಿ ಜೀ ಅವರ ನಿಧನದಿಂದ ತುಂಬ ದುಃಖವಾಗಿದೆ. ತಮ್ಮ ಅಮೋಘ ಪ್ರದರ್ಶನಗಳ ಮೂಲಕ ಅವರು ಛತ್ತೀಸ್‌ಗಢದ ಈ ಜಾನಪದ ಕಲಾ ಪ್ರಕಾರಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿದ್ದಾರೆ. ಅವರ ಅಗಲಿಕೆ ಕಲೆ ಮತ್ತು ಸಂಸ್ಕೃತಿ ಜಗತ್ತಿಗೆ ಭರಿಸಲಾಗದ ನಷ್ಟವನ್ನು ಉಂಟುಮಾಡಿದೆ. ಈ ದುಃಖದ ಸಮಯದಲ್ಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು" ಎಂದು ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಬರೆದು ಹಂಚಿಕೊಂಡಿದ್ದಾರೆ. 

ಕಲಾ ಕ್ಷೇತ್ರದ ರತ್ನ

ತಮ್ಮ ವಿಶಿಷ್ಟ ಧ್ವನಿಯಿಂದ ಭಾರತೀಯ ಜಾನಪದ ಕಲಾ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿರುವ ತೀಜನ್ ಬಾಯಿ, ಛತ್ತೀಸ್‌ಗಢದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜಗತ್ತಿಗೆ ಹರಡಿದ ಅಪರೂಪದ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದಿಗೂ ಅವರ ಹೆಸರು ಜಾನಪದ ಕಲೆಯ ಇತಿಹಾಸದಲ್ಲಿ ದಾಖಲಾಗಿದೆ. ತೀಜನ್ ಬಾಯಿ ಅವರ ಹೆಸರು ಕೇಳಿದೊಡನೆ ಮೊದಲಿಗೆ ನೆನಪಾಗುವುದೇ ಪಾಂಡವಾಣಿ. ಇದು ಛತ್ತೀಸ್‌ಗಢದ ಅತ್ಯಂತ ಪ್ರಾಚೀನ ಜಾನಪದ ಸಂಪ್ರದಾಯ ಎಂಬುದು ಅನೇಕರಿಗೆ ತಿಳಿದಿಲ್ಲ.
ಇದರ ವಿಶೇಷತೆಯೆಂದರೆ ಇದು ಮಹಾಭಾರತದ ಪಾತ್ರಗಳ ಕಥೆಗಳು, ವೀರಗಾಥೆಗಳು, ಭಾವನೆಗಳನ್ನು ಪ್ರೇಕ್ಷಕರಿಗೆ ಸಂಗೀತ ನಿರೂಪಣೆ ಮತ್ತು ನೃತ್ಯವನ್ನು ಸಂಯೋಜಿಸುವ ಮೂಲಕ ತಲುಪಿಸಲಾಗುತ್ತದೆ. ತೀಜನ್ ಬಾಯಿ ತಮ್ಮ ಧ್ವನಿ, ಭಾವನೆಗಳು ಮತ್ತು ವೇದಿಕೆಯಲ್ಲಿನ ಕಲೆಯ ಅಮೋಘ ಪ್ರದರ್ಶನದಿಂದಲೇ ಪಾಂಡವಾಣಿಗೆ ಹೊಸ ಜೀವ ತುಂಬಿದರು.

ತೀಜನ್ ಬಾಯಿ ಅವರ ವೃತ್ತಿಜೀವನ...

ಏಪ್ರಿಲ್ 24, 1956ರಂದು ಛತ್ತೀಸ್‌ಗಢದ ಭಿಲಾಯಿ ಬಳಿಯ ಗನಿಯಾರಿ ಗ್ರಾಮದಲ್ಲಿ ಜನಿಸಿದರು. ಅವರ ತಾಯಿ ಸುಖ್ ವತಿ ಮತ್ತು ತಂದೆ ಚಿನುಕ್ ಲಾಲ್ ಪಾರ್ಥಿ. ತಮ್ಮ ಬಾಲ್ಯದಿಂದಲೂ ಜಾನಪದ ಕಲೆಗಳಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡಿದ್ದ ದಿಗ್ಗಜ ಕಲಾವಿದೆ, ತಮ್ಮ ಮೊದಲ ಗುರು ಅವರ ಅಜ್ಜ ಬ್ರಿಜ್ ಲಾಲ್ ಪಾರ್ಥಿ ಅವರ ಅಪ್ಪಟ ಶಿಷ್ಯೆ. ತೀಜನ್​ ಪ್ರತಿಭೆಯನ್ನು ಅವರ ಕುಟುಂಬ ಸದಸ್ಯರು ಗುರುತಿಸಿ, ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಪ್ರೋತ್ಸಾಹಿಸಿದರು. 
ಸಾಮಾಜಿಕ ಅಡೆತಡೆಗಳನ್ನು ಎದುರಿಸಿ, ಪಾಂಡವಾಣಿ ಸಂಸ್ಕೃತಿಗೆ ತಮ್ಮ ವಿಶಿಷ್ಟ ಶೈಲಿಯ ಪ್ರದರ್ಶನದೊಂದಿಗೆ ಹೊಸ ಆಯಾಮವನ್ನು ತಂದ ಏಕೈಕ ಮಹಿಳೆಯಾಗಿ ತೀಜನ್​ ಹೊಸ ಇತಿಹಾಸ ಬರೆದಿದ್ದಾರೆ, ಮಹಿಳೆಯರು ಸಹ ಈ ಕಲೆಯಲ್ಲಿ ಶ್ರೇಷ್ಠತೆ ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಜಾನಪದ ಸಂಗೀತ ಕ್ಷೇತ್ರದಲ್ಲಿನ ಅವರ ವಿಶಿಷ್ಟ ಸೇವೆಗಳಿಗಾಗಿ ಅವರು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net