ಪ್ರಧಾನ ಮಂತ್ರಿಯನ್ನು ಉಳಿಸಲು 'ಪ್ರಧಾನ್'ಗೆ ಕೊಕ್: ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಅಖಿಲೇಶ್ ಯಾದವ್ | Akhilesh Yadav

Akhilesh Yadav > ಪ್ರಧಾನ ಮಂತ್ರಿಯನ್ನು ಉಳಿಸಲು 'ಪ್ರಧಾನ್'ಗೆ ಕೊಕ್: ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಅಖಿಲೇಶ್ ಯಾದವ್
Akhilesh Yadav > ಪ್ರಧಾನ ಮಂತ್ರಿಯನ್ನು ಉಳಿಸಲು 'ಪ್ರಧಾನ್'ಗೆ ಕೊಕ್: ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಅಖಿಲೇಶ್ ಯಾದವ್
Published on
ನವದೆಹಲಿ: ಪೇಪರ್ ಲೀಕ್ ತಡೆ ಕಾಯ್ದೆ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯ ವೇಳೆ ಸಮಾಜವಾದಿ ಪಾರ್ಟಿ ಅಧ್ಯಕ್ಷ, ಸಂಸದ ಅಖಿಲೇಶ್ ಯಾದವ್ (Akhilesh Yadav) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಸರ್ಕಾರವು ಪ್ರಧಾನ ಮಂತ್ರಿಯನ್ನು ಉಳಿಸಲು ಪ್ರಧಾನ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಬಗ್ಗೆ ಪ್ರಸ್ತಾಪಿಸಿದ ಅಖಿಲೇಶ್​, ಸರ್ಕಾರವು ಮಣಿಯುತ್ತದೆ, ಆದರೆ ಅದನ್ನು ಮಣಿಸುವವರು ಬೇಕು ಅಷ್ಟೇ ಎಂದು ಹೇಳಿದರು.

10 ವರ್ಷಗಳಲ್ಲಿ 20 ಪೇಪರ್​ ಲೀಕ್ ಆಗಿದ್ದು ಹೇಗೆ..?

ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಪೇಪರ್ ಲೀಕ್ ಪ್ರಕರಣಗಳನ್ನು ಉಲ್ಲೇಖಿಸಿದ ಅಖಿಲೇಶ್, ಈಗಿರುವ ಕಾನೂನು ಪರಿಣಾಮಕಾರಿಯಾಗಿದ್ದರೆ, ಬಿಜೆಪಿಯ 10 ವರ್ಷಗಳ ಆಡಳಿತದಲ್ಲಿ 20 ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಹೇಗೆ ಲೀಕ್ ಆದವು..? ಕಳ್ಳತನವನ್ನು ತಡೆಯಲು ವಿಫಲರಾದವರನ್ನು ಜನ ಹೇಗೆ ತಾನೇ ನಂಬಲು ಸಾಧ್ಯ..? ಈ ಹೊಸ ಮಸೂದೆಯು ಕೇವಲ ಹಾಲಿ ಇರುವ ಕಾನೂನಿನ ತಿದ್ದುಪಡಿಯಷ್ಟೇ. ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದೀರಿ..? ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವ ಕಿರಣ್ ರಿಜಿಜು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿ, ಅಂದಿನ ಸರ್ಕಾರ ಪ್ರತಿಭಟನೆಗಳನ್ನು ಹತೋಟಿಗೆ ತಂದಿದ್ದನ್ನು ಪ್ರಸ್ತಾಪಿಸಿದಾಗ, ಅಖಿಲೇಶ್ ಯಾದವ್ ಸೂಕ್ತ ತಿರುಗೇಟು ನೀಡಿದರು. ನಾನು ತುರ್ತು ಪರಿಸ್ಥಿತಿಯನ್ನು ನೋಡಿಲ್ಲ. ಆದರೆ ದೆಹಲಿಯಲ್ಲಿ ವಿದ್ಯಾರ್ಥಿ ಪ್ರತಿಭಟನೆಯನ್ನು ಹತೋಟಿಗೆ ತರಲು ಸರ್ಕಾರ ಏನು ಮಾಡಿದೆ ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಕೆಡಿಸಲು ಸರ್ಕಾರ ಅಶ್ರುವಾಯು, ಮೊಳೆಗಳನ್ನು ಜೋಡಿಸಿದ ಲಾಠಿಗಳು ಮತ್ತು ಇತರ ಆಯುಧಗಳನ್ನು ಬಳಸಿದೆ ಎಂದು ಆರೋಪಿಸಿದರು.

ಲೋಕಸಭೆಯಲ್ಲಿ ಮಸೂದೆ ಮಂಡನೆ ಮತ್ತು ವಿಪಕ್ಷಗಳ ಗದ್ದಲ

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿದ್ದುಪಡಿ ಮಸೂದೆಯನ್ನು ಮಂಡಿಸುವುದರೊಂದಿಗೆ ಲೋಕಸಭೆಯಲ್ಲಿ ಚರ್ಚೆ ಆರಂಭವಾಯಿತು. ನೀಟ್​ ಅಕ್ರಮದ ಬೆನ್ನಲ್ಲೇ ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾದ ಕಾರಣ, ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಪೇಪರ್ ಲೀಕ್ ತಡೆ ಕಾನೂನಿಗೆ ಕಠಿಣ ತಿದ್ದುಪಡಿ ತರಲು ಮುಂದಾಗಿದ್ದು, ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರೂಪಾಯಿ ದಂಡ ವಿಧಿಸುವ ನಿಬಂಧನೆಗಳನ್ನು ಸೇರಿಸಿದೆ.
ಜುಲೈ 20 ರಂದು ಸಂಸತ್​ ಚಲೋ ನಡೆಸಿದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್‌ಗೆ ಸರ್ಕಾರ ಜವಾಬ್ದಾರಿ ವಹಿಸಬೇಕೆಂದು ಆಗ್ರಹಿಸಿ ವಿರೋಧ ಪಕ್ಷಗಳು ಸದನದ ಬಾವಿಗಿಳಿದು ಧರಣಿ ನಡೆಸಿದವು. ವಿಪಕ್ಷಗಳ ತೀವ್ರ ಗದ್ದಲ ಮತ್ತು ಸಭಾತ್ಯಾಗದ ನಡುವೆಯೂ ಸಚಿವ ಜಿತೇಂದ್ರ ಸಿಂಗ್ ಮಸೂದೆಯನ್ನು ಮಂಡಿಸಿದರು. ಮಳೆಗಾಲದ ಅಧಿವೇಶನ ಆರಂಭವಾದಂದಿನಿಂದಲೂ ನೀಟ್​ ವಿಚಾರವೇ ಮುನ್ನೆಲೆಯಲ್ಲಿದ್ದು, ಸಂಸತ್ತಿನ ಕಲಾಪಗಳು ನಿರಂತರವಾಗಿ ಕಂಗೆಡುತ್ತಲೇ ಇವೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net