ಸಿಎಂ ವಿಜಯ್ ಸರ್ಕಾರಕ್ಕೆ ರಿಲೀಫ್​: ವಿಶ್ವಾಸಮತಯಾಚನೆಯ ಬಗ್ಗೆ ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ | Supreme Court

ಸಿಎಂ ವಿಜಯ್
ಸಿಎಂ ವಿಜಯ್
Published on
ನವದೆಹಲಿ: ತಮಿಳುನಾಡಿನ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ವಿಶ್ವಾಸಮತಯಾಚನೆಯಲ್ಲಿನ ಗೆಲುವಿನ ಬಗ್ಗೆ ಸಿಬಿಐ ತನಿಖೆ ನಡೆಸಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ(ಜೂ. 19) ಸುಪ್ರೀಂಕೋರ್ಟ್(Supreme Court) ವಜಾಗೊಳಿಸಿದೆ.
ಕೆ.ಕೆ. ರಮೇಶ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾ. ವಿ. ಮೋಹನ ನೇತೃತ್ವದ ದ್ವಿಸದಸ್ಯ ಪೀಠ, ಅರ್ಜಿಯಲ್ಲಿ ಉಲ್ಲೇಖಿಸಲಾದ ಆರೋಪಗಳು ಅಸ್ಪಷ್ಟವಾಗಿವೆ. ಆರೋಪಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿತು.
ಮತ್ತು ಸರ್ಕಾರದ ವಿರುದ್ಧ ಮಾಡಿರುವ ಅಸ್ಪಷ್ಟ ಮತ್ತು ಆಧಾರರಹಿತ ಆರೋಪಗಳನ್ನು ಹೊಂದಿರುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿದೆ.
ಮೇ 13ರಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತಯಾಚನೆಯಲ್ಲಿ ಸಿಎಂ ವಿಜಯ್ ಸರ್ಕಾರ ರಚಿಸಲು ತಮ್ಮ ಸಂಖ್ಯಾ ಬಲವನ್ನು ಸಾಬೀತುಪಡಿಸಿದರು. ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಐಯುಎಂಎಲ್ ಪಕ್ಷಗಳು ಟಿವಿಕೆ ನಾಯಕ ವಿಜಯ್ ಅವರನ್ನು ಬೆಂಬಲಿಸಿದವು. 25 ಎಐಎಡಿಎಂಕೆ ಬಂಡಾಯ ಶಾಸಕರು ಹೆಚ್ಚುವರಿಯಾಗಿ ಸರ್ಕಾರಕ್ಕೆ ಬೆಂಬಲ ನೀಡಿದರು. ಹೆಚ್ಚುವರಿ ವಿಪಕ್ಷ ಶಾಸಕರ ಬೆಂಬಲ ಹಿನ್ನಲೆ ಸರ್ಕಾರ ಕುದುರೆ ವ್ಯಾಪಾರ ನಡೆಸಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net