ಬಂಗಾಳದಲ್ಲಿ ಡೀಸೆಲ್ ಮಾರಾಟದ ನಿಯಮ ಸಡಿಲಿಕೆ: ರೈತರು, ಆಸ್ಪತ್ರೆ, ಚಹಾ ತೋಟಗಳಿಗೆ ಸಿಎಂ ಸುವೇಂದು ಭರ್ಜರಿ ಗಿಫ್ಟ್! CM Suvendu Adhikari Diesel Decision

ಬಂಗಾಳದಲ್ಲಿ ಡೀಸೆಲ್ ಮಾರಾಟದ ನಿಯಮ ಸಡಿಲಿಕೆ: ರೈತರು, ಆಸ್ಪತ್ರೆ, ಚಹಾ ತೋಟಗಳಿಗೆ ಸಿಎಂ ಸುವೇಂದು ಭರ್ಜರಿ ಗಿಫ್ಟ್!
ಬಂಗಾಳದಲ್ಲಿ ಡೀಸೆಲ್ ಮಾರಾಟದ ನಿಯಮ ಸಡಿಲಿಕೆ: ರೈತರು, ಆಸ್ಪತ್ರೆ, ಚಹಾ ತೋಟಗಳಿಗೆ ಸಿಎಂ ಸುವೇಂದು ಭರ್ಜರಿ ಗಿಫ್ಟ್!
Published on
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಕೃಷಿ, ಆರೋಗ್ಯ ಮತ್ತು ಕೈಗಾರಿಕಾ ವಲಯದ ಪ್ರಗತಿಗೆ ವೇಗ ನೀಡುವ ನಿಟ್ಟಿನಲ್ಲಿ ನೂತನ ಸಿಎಂ ಸುವೇಂದು ಅಧಿಕಾರಿ(CM Suvendu Adhikari Diesel Decision) ನೇತೃತ್ವದ ಸರ್ಕಾರ ಭಾನುವಾರ ಒಂದು ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದ ಅತ್ಯಂತ ಪ್ರಮುಖ ತುರ್ತು ಸೇವೆಗಳು ಹಾಗೂ ಅಗತ್ಯ ವಲಯಗಳಿಗೆ ಕಂಟೈನರ್ ಮತ್ತು ಬ್ಯಾರೆಲ್‌ಗಳ ಮೂಲಕ ಮುಕ್ತವಾಗಿ ಡೀಸೆಲ್ ಖರೀದಿಸಲು ಇದ್ದ ಕಠಿಣ ನಿರ್ಬಂಧಗಳನ್ನು ಸರ್ಕಾರ ಸಂಪೂರ್ಣವಾಗಿ ಸಡಿಲಗೊಳಿಸಿದೆ. ಈ ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರ ಹೇರಿದ್ದ ಈ ನಿಯಮದಿಂದಾಗಿ ಸಾರ್ವಜನಿಕ ಸೇವೆಗಳು ಮತ್ತು ಕೃಷಿ ಚಟುವಟಿಕೆಗಳಿಗೆ ತೀವ್ರ ಅಡ್ಡಿಯಾಗುತ್ತಿತ್ತು. ಇದನ್ನು ಸರಿಪಡಿಸಲು ಪ್ರಸ್ತುತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಭಾನುವಾರ ತಮ್ಮ Xನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಸಿಎಂ ಸುವೇಂದು, ರಾಜ್ಯದ ಸಾಮಾನ್ಯ ಜನರ ದೈನಂದಿನ ಬದುಕು, ತುರ್ತು ಸೇವೆಗಳು ಮತ್ತು ಒಟ್ಟಾರೆ ಆರ್ಥಿಕತೆಯು ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ಸಾಗಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಹೇಳಿದ್ದಾರೆ.
ರೈತರು ಮತ್ತು ಆಸ್ಪತ್ರೆಗಳ ಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಸರ್ಕಾರ
ಇತ್ತೀಚಿನ ದಿನಗಳಲ್ಲಿ ಡೀಸೆಲ್ ಅನ್ನು ಕಂಟೈನರ್ ಅಥವಾ ಕ್ಯಾನ್‌ಗಳಲ್ಲಿ ಸರಬರಾಜು ಮಾಡುವುದಕ್ಕೆ ಹೇರಲಾಗಿದ್ದ ನಿಷೇಧದಿಂದಾಗಿ ರಾಜ್ಯದ ಶ್ರಮಜೀವಿಗಳಾದ ರೈತ ಬಾಂಧವರು, ನೂರಾರು ಆಸ್ಪತ್ರೆಗಳು ಮತ್ತು ತುರ್ತು ಸೇವೆ ಒದಗಿಸುವ ಸಂಸ್ಥೆಗಳು ದೈನಂದಿನ ಕಾರ್ಯಚಟುವಟಿಕೆ ನಡೆಸಲು ತೀವ್ರ ತೊಂದರೆ ಅನುಭವಿಸುತ್ತಿದ್ದವು. ಕೃಷಿ ಪಂಪ್‌ಸೆಟ್‌ಗಳು, ಟ್ರ್ಯಾಕ್ಟರ್‌ಗಳು ಮತ್ತು ಆಸ್ಪತ್ರೆಗಳ ತುರ್ತು ಜನರೇಟರ್‌ಗಳಿಗೆ ಡೀಸೆಲ್ ತರಲು ಬ್ಯಾರೆಲ್‌ಗಳನ್ನು ಕೊಂಡೊಯ್ಯಲು ಸಾಧ್ಯವಾಗುತ್ತಿರಲಿಲ್ಲ. ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿದೆ ಎಂದು ಸಿಎಂ ಸುವೇಂದು ವಿವರಿಸಿದ್ದಾರೆ.

ತೈಲ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ

ರಾಜ್ಯ ಸರ್ಕಾರದ ನಿರ್ದೇಶನದ ಬೆನ್ನಲ್ಲೇ ಮುಖ್ಯಮಂತ್ರಿಗಳು ದೇಶದ ಪ್ರಮುಖ ತೈಲ ಕಂಪನಿಗಳಿಗೆ ಸ್ಪಷ್ಟ ಆದೇಶ ನೀಡಿದ್ದಾರೆ. ಆರೋಗ್ಯ ರಕ್ಷಣೆ (ಆಸ್ಪತ್ರೆಗಳು), ಕೃಷಿ ಕ್ಷೇತ್ರ, ಆಹಾರ ಪೂರೈಕೆ ವ್ಯವಸ್ಥೆ, ಸಾರ್ವಜನಿಕ ಬಳಕೆಯ ಸೇವೆಗಳು ಮತ್ತು ಉತ್ತರ ಬಂಗಾಳದ ಆರ್ಥಿಕ ಬೆನ್ನೆಲುಬಾಗಿರುವ ಚಹಾ ತೋಟಗಳನ್ನು ಇಂಧನ ನಿಯಂತ್ರಣ ನಿಯಮಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಹೊಸ ಆದೇಶದ ಪ್ರಕಾರ, ಈ ಪ್ರಮುಖ ವಲಯಗಳಿಗೆ ಸಂಬಂಧಿಸಿದ ವ್ಯಕ್ತಿಗಳು, ರೈತರು, ಕೈಗಾರಿಕೋದ್ಯಮಿಗಳು ಮತ್ತು ಗ್ರಾಹಕರು ಇನ್ನು ಮುಂದೆ ಯಾವುದೇ ಅಂಜಿಕೆಯಿಲ್ಲದೆ ಇಂಧನ ಕೇಂದ್ರಗಳಿಂದ ಕಂಟೈನರ್ ಅಥವಾ ಬ್ಯಾರೆಲ್‌ಗಳಲ್ಲಿ ಡೀಸೆಲ್ ಅನ್ನು ಸುಲಭವಾಗಿ ಖರೀದಿಸಬಹುದು ಮತ್ತು ಸಾಗಿಸಬಹುದು.

ಗುರುತಿನ ಚೀಟಿ ತೋರಿಸಿದರೆ ಸಾಕು: ಮಿತಿಯೂ ಸಡಿಲಿಕೆ

ಇದರೊಂದಿಗೆ, ಅಗತ್ಯ ಸೇವೆಗಳ ಸುಗಮ ನಿರ್ವಹಣೆಗಾಗಿ ಗ್ರಾಹಕರಿಗೆ ಪ್ರತಿದಿನ ವಿಧಿಸಲಾಗುತ್ತಿದ್ದ ಡೀಸೆಲ್ ಸರಬರಾಜಿನ ಗರಿಷ್ಠ ಮಿತಿಯನ್ನು ಕೂಡ ಸಡಿಲಗೊಳಿಸಲಾಗಿದೆ. ಗ್ರಾಹಕರು ಇಂಧನ ಕೇಂದ್ರಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಡೀಸೆಲ್ ಪಡೆಯಲು ತಮ್ಮ ಮೂಲಭೂತ ಗುರುತಿನ ದಾಖಲೆಗಳನ್ನು ಪ್ರದರ್ಶಿಸಿದರೆ ಸಾಕು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಬೃಹತ್ ಪ್ರಮಾಣದಲ್ಲಿ ಡೀಸೆಲ್ ಖರೀದಿಸುವ ಕೃಷಿ ಮತ್ತು ಕೈಗಾರಿಕಾ ವಲಯದ ಹಿತರಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ರಾಜ್ಯದ ಆರ್ಥಿಕತೆಗೆ ದೊಡ್ಡ ಬಲ ಸಿಕ್ಕಂತಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net