ನೇಣು ಹಾಕಿದ್ರೆ ನರಕಯಾತನೆ... ವಿಷಕಾರಿ ಇಂಜೆಕ್ಷನ್​ಗೆ ಕೋರಿ 'ಸುಪ್ರೀಂ'ಗೆ ಸಲ್ಲಿಸಿದ್ದ ಅರ್ಜಿ ವಜಾ| Execution Method

ವಿಷಕಾರಿ ಇಂಜೆಕ್ಷನ್​ಗೆ ಅಸ್ತು ಎನ್ನುವಂತೆ 'ಸುಪ್ರೀಂ'ಗೆ ಸಲ್ಲಿಸಿದ ಅರ್ಜಿ ವಜಾ
ವಿಷಕಾರಿ ಇಂಜೆಕ್ಷನ್​ಗೆ ಅಸ್ತು ಎನ್ನುವಂತೆ 'ಸುಪ್ರೀಂ'ಗೆ ಸಲ್ಲಿಸಿದ ಅರ್ಜಿ ವಜಾ
Published on

ಪ್ರಮುಖ ಮುಖ್ಯಾಂಶಗಳು

  • ಮರಣದಂಡನೆಗೆ (Execution Method) ಶಿಕ್ಷೆಯಡಿ ನೇಣಿಗೆ ಹಾಕುವ ಪ್ರಕ್ರಿಯೆಯು ಅತ್ಯಂತ ಭೀಕರ ಹಾಗೂ ಅಮಾನವೀಯ
  • ಇದನ್ನು ಬಿಟ್ಟು ಕನಿಷ್ಠ ನೋವಿರುವ ಲೀಥಲ್​ ಅಥವಾ ಕಡಿಮೆ ನೋವು ಕೊಡುವ ಇಂಜೆಕ್ಷನ್​ಗೆ ಮನವಿ
  • ಪರ್ಯಾಯ ಮಾರ್ಗಗಳನ್ನು ಜಾರಿಗೆ ತರಬೇಕು ಎಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ
ನವದೆಹಲಿ: ಮರಣದಂಡನೆಗೆ (Execution Method) ಶಿಕ್ಷೆಯಡಿ ನೇಣಿಗೆ ಹಾಕುವ ಪ್ರಕ್ರಿಯೆಯು ಅತ್ಯಂತ ಭೀಕರ ಹಾಗೂ ಅಮಾನವೀಯ. ಹೀಗಾಗಿ, ಇದನ್ನು ತೆಗೆದು ಕನಿಷ್ಠ ನೋವಿರುವ ಲೀಥಲ್​ ಅಥವಾ ಕಡಿಮೆ ನೋವು ನೋಡಿರುವ ಇಂಜೆಕ್ಷನ್' (Lethal Injection) ನಂತಹ ಪರ್ಯಾಯ ಮಾರ್ಗಗಳನ್ನು ಜಾರಿಗೆ ತರಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ವಜಾಗೂ ಮುನ್ನ ಕಾರಣ ನೀಡಿದ ಸುಪ್ರೀಂ ಕೋರ್ಟ್​, ನೇಣಿಗೆ ಹಾಕುವ ಕಠಿಣ ಶಿಕ್ಷೆಯೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಪ್ರಕರಣವನ್ನು ಹೆಚ್ಚಿನ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಬೇಕು ಎಂಬ ಮನವಿಯನ್ನೂ ತಿರಸ್ಕರಿಸಿದೆ.

ಅರ್ಜಿದಾರರ ವಾದವೇನು?

ಹಿರಿಯ ವಕೀಲ ರಿಷಿ ಮಲ್ಹೋತ್ರಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (PIL) ಗಲ್ಲು ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆ ವಿಪರೀತ ಕ್ರೂರ. ನೇಣು ಹಾಕಿದಾಗ ಒಬ್ಬ ವ್ಯಕ್ತಿ ಸಾವಿಗೀಡಾಗಲು ಹಲವು ನಿಮಿಷಗಳ ಕಾಲ ತೀವ್ರ ನೋವು ಅನುಭವಿಸಬೇಕು. ಆದರೆ, ಅದೇ ಒಂದು ವಿಷಕಾರಿ ಇಂಜೆಕ್ಷನ್, ಗುಂಡಿಕ್ಕುವುದು, ವಿದ್ಯುತ್ ಸ್ಪರ್ಶ ಅಥವಾ ಅನಿಲ ಕೊಠಡಿ (Gas Chamber) ಅಂತಹ ಪರ್ಯಾಯ ಮಾರ್ಗಗಳಲ್ಲಿ ಕೇವಲ 5 ನಿಮಿಷಗಳಲ್ಲಿ ನೋವಿಲ್ಲದೆ ಸಾವು ಸಂಭವಿಸುತ್ತದೆ ಎಂದು ತಿಳಿಸಲಾಗಿದೆ.

ಗೌರವಯುತವಾಗಿ ಸಾಯಲು ಹಕ್ಕಿದೆ

ಗಲ್ಲು ಶಿಕ್ಷೆ ಸಿಆರ್‌ಪಿಸಿ ಕಾಯ್ದೆಯಡಿ ಅತ್ಯಂತ ದಯೆ ಇಲ್ಲದ ಹಾಗೂ ಕ್ರೂರ ವಿಧಾನವಾಗಿದ್ದು, ಸಂವಿಧಾನದಲ್ಲೇ ಉಲ್ಲೇಖವಾಗಿರುವಂತೆ ಪ್ರತಿಯೊಬ್ಬ ಮನುಷ್ಯನು ಗೌರವಯುತವಾಗಿ ಸಾಯುವ ಹಕ್ಕಿದೆ (Right to die with dignity). ಹೀಗಿರುವಾಗ, ಮರಣದಂಡನೆ ವಿಧಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಭಂಗ ತರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಹಳೆಯ ತೀರ್ಪು ಎತ್ತಿಹಿಡಿದ ಪೀಠವು, 1983ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಮಹತ್ವದ ತೀರ್ಪಿನಲ್ಲಿ ಗಲ್ಲುಶಿಕ್ಷೆಯನ್ನು ಸಂವಿಧಾನಾತ್ಮಕವಾಗಿ ಸಿಂಧು ಎಂದು ಘೋಷಿಸಲಾಯಿತು. ಅದನ್ನು ಮರುಪರಿಶೀಲಿಸುವ ಅಗತ್ಯವಿಲ್ಲ. ಆದರೆ, ಭವಿಷ್ಯದಲ್ಲಿ ವೈಜ್ಞಾನಿಕ, ವೈದ್ಯಕೀಯ ಅಥವಾ ನರವಿಜ್ಞಾನದ ಆಧಾರದ ಮೇಲೆ ಕನಿಷ್ಠ ನೋವಿನ ಪರ್ಯಾಯ ಮಾರ್ಗಗಳ ಬಗ್ಗೆ ಬಲವಾದ ಸಾಕ್ಷ್ಯಾಧಾರಗಳು ದೊರೆತರೆ, ಈ ವಿಷಯವನ್ನು ಮರುಪರಿಶೀಲಿಸಲು ಯಾವುದೇ ಅಡ್ಡಿಯಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು.

'ಕೇಂದ್ರ'ಕ್ಕೆ ಕಿವಿಮಾತು

ಇನ್ನು, ಈ ಅರ್ಜಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ ಕೋರ್ಟ್​, ನೀವು ಬಯಸಿದರೆ, ಈ ವಿಷಯವಾಗಿ ಕಾನೂನು, ವಿಧಿವಿಜ್ಞಾನ ಮತ್ತು ವೈದ್ಯಕೀಯ ತಜ್ಞರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ವಿಸ್ತೃತ ಪರಾಮರ್ಶೆ ನಡೆಸಬಹುದು ಎಂದು ಹೇಳಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net