ಜನರ ನಂಬಿಕೆ ಉಳಿಸಲು ಸಾವನ್ನು ಎದುರಿಸಲು ಸಿದ್ಧ; ತಮ್ಮ ವಿರುದ್ಧದ ಎಫ್‌ಐಆರ್ ಬಗ್ಗೆ ಪಪ್ಪು ಯಾದವ್ ವಾಗ್ದಾಳಿ | Pappu Yadav
ಸಂಸದ ಪಪ್ಪು ಯಾದವ್
Published on:
Copied
Follow Us
ನವದೆಹಲಿ: ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮ ಆರೋಪವನ್ನು ಖಂಡಿಸಿ ಶುಕ್ರವಾರ ಸಂಸತ್ತಿನ ಆವರಣದಲ್ಲಿ ಪ್ರತಿಪಕ್ಷಗಳು ನಡೆಸಿದ ಅಣಕು ಪ್ರದರ್ಶನ ಸಂಬಂಧ ರಾಹುಲ್ ಗಾಂಧಿ ಸೇರಿ ತಮ್ಮ ವಿರುದ್ಧ ವಾರಾಣಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಭಾನುವಾರ(ಆ. 02) ಸಂಸದ ಪಪ್ಪು ಯಾದವ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸನಾತನ ಧರ್ಮ ಮತ್ತು ದೇವರಿಗೆ ದ್ರೋಹ ಬಗೆಯುವವರ ವಿರುದ್ಧ, ಸನಾತನ ಹಾಗೂ ಜನರ ನಂಬಿಕೆಯನ್ನು ರಕ್ಷಿಸಲು ಪಪ್ಪು ಯಾದವ್ ಪ್ರಾಣವನ್ನೇ ಅರ್ಪಿಸಬೇಕಾದರೂ ಸರಿ, ನಾನು ಪ್ರತಿದಿನವೂ ಸಾವನ್ನು ಎದುರಿಸಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ಕೇಸರಿ ಬಣ್ಣದ ವಸ್ತ್ರ ಧರಿಸುವ ಹಕ್ಕು ನನಗಿಲ್ಲವೇ?, ರಾಹುಲ್ ಗಾಂಧಿ ಎಂದಿಗೂ ಎಫ್‌ಐಆರ್‌ಗೆ ಹೆದರಲಿಲ್ಲ, ಪ್ರಿಯಾಂಕಾ ಗಾಂಧಿಯೂ ಹೆದರಲಿಲ್ಲ. ಹಾಗಿದ್ದಲ್ಲಿ ಪಪ್ಪು ಯಾದವ್ ಹೇಗೆ ಹೆದರಲು ಸಾಧ್ಯ? ಎಂದು ತಮ್ಮ ವಿರುದ್ಧದ ಎಫ್‌ಐಆರ್‌ಗೆ ಯಾವುದೇ ಕಾರಣಕ್ಕೂ ಎದುರುವುದಿಲ್ಲ ಎಂದು ತಿಳಿಸಿದ್ದಾರೆ.
ಲೋಕಸಭಾ ಸಂಸದರಾದ ರಾಹುಲ್ ಗಾಂಧಿ, ಪಪ್ಪು ಯಾದವ್ ಹಾಗೂ ಅವಧೇಶ್ ಪ್ರಸಾದ್ ಅವರು ಸಂಸತ್ತಿನಲ್ಲಿ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕೆಲವು ಸನ್ಯಾಸಿಗಳು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ಔಪಚಾರಿಕ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಸಂಸತ್ನಲ್ಲಿ ಆವರಣದಲ್ಲಿ ನಡೆದಿದ್ದೇನು..?
ಶುಕ್ರವಾರ ಸಂಸತ್ ಭವನದ ಆವರಣವು ವಿಶಿಷ್ಟ ಪ್ರತಿಭಟನೆಗೆ ಸಾಕ್ಷಿಯಾಯಿತು. ವಿರೋಧ ಪಕ್ಷದ ಸಂಸದರು ರಾಮಮಂದಿರದ ದೇಣಿಗೆ ಕಳ್ಳತನ ಆರೋಪವನ್ನು ಪ್ರತಿಬಿಂಬಿಸುವ ಬೀದಿ ನಾಟಕ ಮಾದರಿಯನ್ನು ಬಳಸಿಕೊಂಡರು. ಚಂದಾ ಚೋರ, ಗದ್ದಿ ಚೋಡ್, ಜವಾಬ್ ತುಮ್ಕೋ ದೇನಾ ಹೋಗಾ ಮತ್ತು ಅಮಿತ್ ಷಾ, ಸದನಕ್ಕೆ ಬನ್ನಿ! ಎಂಬ ಘೋಷಣೆಗಳು ಕೂಗಿದರು.
ಈ ಬೀದಿ ನಾಟಕದಲ್ಲಿ ಪೂರ್ಣಿಯಾ ಸಂಸದ ಪಪ್ಪು ಯಾದವ್ ಅರ್ಚಕನಂತೆ ಕೇಸರಿ ವಸ್ತ್ರ ಧರಿಸಿ, ಶ್ರೀರಾಮನ ಚಿತ್ರವನ್ನು ಹಿಡಿದು ಭಕ್ತರಿಂದ ಕಾಣಿಕೆ ಸ್ವೀಕರಿಸುವ ಪಾತ್ರ ವಹಿಸಿದ್ದರು. ನಾಟಕದ ಭಾಗವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಸಂಸದರು ಕಾಣಿಕೆ ಪೆಟ್ಟಿಗೆಗೆ ಹಣ ಹಾಕಿದರು. ಆದರೆ ಅರ್ಚಕನ ಪಾತ್ರದಲ್ಲಿದ್ದ ಪಪ್ಪು ಯಾದವ್, ಆ ಹಣವನ್ನು ಕಾಣಿಕೆ ಪೆಟ್ಟಿಗೆಗೆ ಹಾಕುವ ಬದಲು ತಮ್ಮ ಜೇಬಿಗೆ ಇಳಿಸಿಕೊಳ್ಳುವ ಮೂಲಕ ದೇಣಿಗೆ ಅಕ್ರಮವನ್ನು ಸಾಂಕೇತಿಕವಾಗಿ ಪ್ರದರ್ಶಿಸಿದರು. ಇದನ್ನು ಕಂಡ ಸಮಾಜವಾದಿ ಪಕ್ಷದ ಸಂಸದರೊಬ್ಬರು ಭಕ್ತನಾಗಿ ನಟಿಸಿ, ಆ ಅಕ್ರಮವನ್ನು ಪ್ರಶ್ನಿಸುವ ಸನ್ನಿವೇಶವನ್ನು ಮೂಡಿಸಿದ್ದರು (ಏಜೆನ್ಸೀಸ್).