ಚುನಾವಣೆಯಲ್ಲಿ ಮರು ಆಯ್ಕೆ; ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ: ಎಲ್​ಓಪಿಯಾಗಿಯೂ ನೇಮಕ | Mallikarjun Kharge

ರಾಜ್ಯಸಭಾ ಸದಸ್ಯರಾಗಿ ಮಲ್ಲಿಕಾರ್ಜುನ ಖರ್ಗೆ ಪ್ರಮಾಣವಚನ ಸ್ವೀಕಾರ
ರಾಜ್ಯಸಭಾ ಸದಸ್ಯರಾಗಿ ಮಲ್ಲಿಕಾರ್ಜುನ ಖರ್ಗೆ ಪ್ರಮಾಣವಚನ ಸ್ವೀಕಾರ
Published on
ನವದೆಹಲಿ: ಚುನಾವಣೆಯಲ್ಲಿ ಮರು ಆಯ್ಕೆಯಾದ ಬಳಿಕ ಇಂದು(ಜೂ. 29) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು(Mallikarjun Kharge) ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ವಿಪಕ್ಷ ನಾಯಕರಾಗಿಯೂ ಮರು ನೇಮಕವಾಗಿದ್ದಾರೆ.
ರಾಜ್ಯಸಭೆಯ ಸಭಾಪತಿ ಮತ್ತು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸಂಸತ್ ಭವನದಲ್ಲಿರುವ ತಮ್ಮ ಕೊಠಡಿಯಲ್ಲಿ ಖರ್ಗೆ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಖರ್ಗೆಯವರು ಸಂವಿಧಾನ ಕೈಯಲ್ಲಿ ಹಿಡಿದುಕೊಂಡು ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಜೊತೆಗೆ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಕಿರಣ್ ರಿಜಿಜು, ಅರ್ಜುನ್ ರಾಮ್ ಮೇಘವಾಲ್ ಮತ್ತು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದಿದ್ದು ಫೋಟೋದಲ್ಲಿ ಕಾಣಬಹುದು.

ವಿಪಕ್ಷ ನಾಯಕರಾಗಿ ಪುನರಾಯ್ಕೆ

2026 ಜೂನ್ 25ರಂದು ಖರ್ಗೆಯವರ ರಾಜ್ಯಸಭಾ ಅವಧಿ ಮುಕ್ತಾಯವಾಗಿತ್ತು. ಬಳಿಕ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ಕೈಬಿಡಲಾಗಿತ್ತು ಎನ್ನಲಾಗಿದೆ. ಈಗ ಮರು ನೇಮಕದ ಬಗ್ಗೆ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
2026 ಜೂನ್ 26ರಂದು ರಾಜ್ಯಸಭೆಗೆ ಮರು ಆಯ್ಕೆಯಾದ ನಂತರ, ರಾಜ್ಯಸಭೆಯ ಅಧ್ಯಕ್ಷರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯ ಮತ್ತು ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜೂನ್ 26ರಿಂದ ವಿರೋಧ ಪಕ್ಷದ ನಾಯಕರನ್ನಾಗಿ ಗುರುತಿಸಿದ್ದಾರೆ. ಸಂಸತ್ತಿನ ವಿರೋಧ ಪಕ್ಷದ ನಾಯಕರ ಸಂಬಳ ಮತ್ತು ಭತ್ಯೆ ಕಾಯ್ದೆ, 1977 ರ ಸೆಕ್ಷನ್ 2 ರ ನಿಬಂಧನೆಗಳಿಗೆ ಅನುಸಾರವಾಗಿ ಮತ್ತು ಸದರಿ ಕಾಯ್ದೆಯ ಎಲ್ಲಾ ನಿಯಮಗಳಿಗೆ ಒಳಪಡಲಿದ್ದಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net