ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: ಶೇ. 5.25 ಬಡ್ಡಿದರ ಯಥಾಸ್ಥಿತಿ ಎಂದ ಆರ್​ಬಿಐ! RBI

ಆರ್​ಬಿಐ
ಆರ್​ಬಿಐ
Published on

ಪ್ರಮುಖ ಮುಖ್ಯಾಂಶಗಳು

  • ತನ್ನ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಂಡ ಆರ್​ಸಿಬಿ
  • ಆರ್​ಬಿಐನ ಹಣಕಾಸು ನೀತಿ ಸಮಿತಿ (MPC) ತೆಗೆದುಕೊಂಡು ನಿರ್ಧಾರ ತಿಳಿಸಿದ ಗವರ್ನರ್​
  • ಆರ್​ಬಿಐ ರೆಪೋ ದರವನ್ನು 5.25%ರಲ್ಲಿ ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಬಾರಿಯೂ ತನ್ನ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಘೋಷಣೆ ಮಾಡಿದೆ.
ಆರ್​ಬಿಐನ ಹಣಕಾಸು ನೀತಿ ಸಮಿತಿ (MPC) ತೆಗೆದುಕೊಂಡು ನಿರ್ಧಾರವನ್ನು ಆರ್​ಬಿಐ ಗವರ್ನರ್  ಸಂಜಯ್ ಮಲ್ಹೋತ್ರಾ ಅವರು​ ಶುಕ್ರವಾರ (ಫೆಬ್ರವರಿ 6) ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.
ಈ ಬಾರಿ ತಟಸ್ಥ ನೀತಿ ಅನುಸರಿಸಿರುವ ಆರ್​ಬಿಐ, ರೆಪೋ ದರವನ್ನು 5.25%ರಲ್ಲಿ ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಕಳೆದ ಡಿಸೆಂಬರ್‌ನಲ್ಲಿ, ಕೇಂದ್ರ ಬ್ಯಾಂಕ್ ತನ್ನ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿತು. ಅಂದಿನಿಂದ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. 
ವಿಶ್ವದಾದ್ಯಂತ ಹೆಚ್ಚಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಅನಿಶ್ಚಿತತೆಯ ನಡುವೆಯೂ, ಭಾರತದ ಆರ್ಥಿಕತೆಯು ಬಲವಾದ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರದೊಂದಿಗೆ ಉತ್ತಮ ಸ್ಥಾನದಲ್ಲಿದೆ. ಯುರೋಪಿಯನ್ ಒಕ್ಕೂಟದೊಂದಿಗೆ ಐತಿಹಾಸಿಕ ವ್ಯಾಪಾರ ಒಪ್ಪಂದ ಮತ್ತು ಯುಎಸ್ ಜತೆಗಿನ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ, ದೇಶದ ಆರ್ಥಿಕ ಬೆಳವಣಿಗೆಯ ವೇಗವು ದೀರ್ಘಕಾಲದವರೆಗೆ ಉಳಿಯುವ ಸಾಧ್ಯತೆಯಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅಂದಹಾಗೆ, 2025-26ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 7.4 ರಷ್ಟು ವೇಗದಲ್ಲಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ, ಪ್ರಸಕ್ತ ಹಣಕಾಸು ವರ್ಷದ (2026) ಚಿಲ್ಲರೆ ಹಣದುಬ್ಬರವು ಶೇ. 2.1 ರಷ್ಟು ಇರಲಿದೆ ಎಂದು ಆರ್‌ಬಿಐ ನಿರೀಕ್ಷಿಸಿದೆ.
ಕಳೆದ ಒಂದು ವರ್ಷದಲ್ಲಿ (ಫೆಬ್ರವರಿ 2025 ರಿಂದ) ಆರ್‌ಬಿಐ ಈಗಾಗಲೇ ಒಟ್ಟು 125 ಬೇಸಿಸ್ ಪಾಯಿಂಟ್‌ಗಳಷ್ಟು (ಶೇ. 1.25) ದರ ಕಡಿತ ಮಾಡಿದೆ. ಆದ್ದರಿಂದ ಈಗಿರುವ ದರಗಳು ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ ಎಂದು ಸಮಿತಿ ಭಾವಿಸಿದೆ. ಇತ್ತೀಚಿನ ಅಮೆರಿಕ-ಭಾರತ ವ್ಯಾಪಾರ ಒಪ್ಪಂದಗಳು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ತಟಸ್ಥ ನಿಲುವನ್ನು ಮುಂದುವರಿಸಿದೆ.

ಪರಿಣಾಮವೇನು?

ರೆಪೋ ದರ ಬದಲಾಗದ ಕಾರಣ ನಿಮ್ಮ ಗೃಹ ಸಾಲ ಅಥವಾ ವಾಹನ ಸಾಲದ ಇಎಂಐ (EMI) ಗಳಲ್ಲಿ ತಕ್ಷಣದ ಯಾವುದೇ ಬದಲಾವಣೆ ಇರುವುದಿಲ್ಲ. ಫಿಕ್ಸೆಡ್ ಡಿಪಾಸಿಟ್ (FD) ಮೇಲಿನ ಬಡ್ಡಿ ದರಗಳು ಸದ್ಯಕ್ಕೆ ಸ್ಥಿರವಾಗಿರಲಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net