ಪ್ರೇರಣಾ ಸ್ಥಳ ದೇಶವನ್ನು ಸ್ವಾಭಿಮಾನ, ಏಕತೆಯ ದೃಷ್ಟಿಕೋನದತ್ತ ಕೊಂಡೊಯ್ಯುವ ಸಂಕೇತ: ಪ್ರಧಾನಿ ಮೋದಿ ಬಣ್ಣನೆ | Prerna Sthal

Prerna Sthal |  ರಾಷ್ಟ್ರೀಯ ಪ್ರೇರಣಾ ಸ್ಥಳವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
Prerna Sthal | ರಾಷ್ಟ್ರೀಯ ಪ್ರೇರಣಾ ಸ್ಥಳವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
Published on
ಲಖನೌ: ರಾಷ್ಟ್ರೀಯ ಪ್ರೇರಣಾ ಸ್ಥಳವು ದೇಶವನ್ನು ಸ್ವಾಭಿಮಾನ, ಏಕತೆ ಮತ್ತು ಸೇವೆಯತ್ತ ಮುನ್ನಡೆಸಿದ ದೃಷ್ಟಿಕೋನವನ್ನು ಸಂಕೇತಿಸುತ್ತದೆ, ಈ ಸ್ಮಾರಕಗಳು ನಮ್ಮ ಎಲ್ಲಾ ಪ್ರಯತ್ನಗಳು ರಾಷ್ಟ್ರ ನಿರ್ಮಾಣದತ್ತ ನಿರ್ದೇಶಿಸಲ್ಪಡಬೇಕೆಂದು ಸ್ಫೂರ್ತಿ ನೀಡುತ್ತದೆ. ಪ್ರತಿಯೊಬ್ಬರ ಸಾಮೂಹಿಕ ಪ್ರಯತ್ನಗಳು ವಿಕಸಿತ ಭಾರತದ ಕನಸನ್ನು ನನಸಾಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮ ದಿನದಿನದ ಅಂಗವಾಗಿ ಪ್ರೇರಣಾ ಸ್ಥಳವನ್ನು ಉದ್ಘಾಟಿಸಲಾಗಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಡಿಸೆಂಬರ್ 25 ರಾಷ್ಟ್ರದ ಇಬ್ಬರು ರತ್ನಗಳಾದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಜನ್ಮ ದಿನಾಚರಣೆಯಾಗಿದೆ. ಈ ಇಬ್ಬರೂ ನಾಯಕರು ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಸಮರ್ಪಿತ ಕಾರ್ಯದ ಮೂಲಕ ನಮ್ಮ ದೇಶದ ಇತಿಹಾಸದಲ್ಲಿ ಮರೆಯಲಾಗದ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಿದರು.
ಗಾಂಧಿ ಕುಟುಂಬದ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಪಕ್ಷವು ಕೇವಲ ಒಂದು ಕುಟುಂಬಕ್ಕೆ ಮಾತ್ರ ಮನ್ನಣೆ ನೀಡುವುದನ್ನು ಮೀರಿ ಇತರ ನಾಯಕರನ್ನು ಗುರುತಿಸುತ್ತಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಯುಗದಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಅಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು ಎಂದು ಹೇಳಿದರು. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ವ್ಯತ್ಯಾಸಗಳನ್ನು ಉಲ್ಲೇಖಿಸಿದ ಪ್ರಧಾನಿ, ನಮ್ಮ​ ಪಕ್ಷವು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ರಿಂದ ಹಿಡಿದು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ತಕ್ಕುದಾದ ಮನ್ನಣೆ ನೀಡಿ ಗೌರವಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ದೇಶ ಮತ್ತು ಜಗತ್ತಿನ ಜನರಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳನ್ನು ಕೋರಿದ ಪ್ರಧಾನಿ, ಈ ದಿನವು ಪ್ರತಿಯೊಬ್ಬರ ಜೀವನಕ್ಕೂ ಶಾಂತಿ ಮತ್ತು ಸಂತೋಷವನ್ನು ತರಲಿ ಎಂದು ಆಶಿಸಿದರು.

ಪ್ರಧಾನಿ ಮೋದಿ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ: ಸಿಎಂ ಯೋಗಿ

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್​, ಶ್ಯಾಮ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಪರಂಪರೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮುನ್ನಡೆಸುತ್ತಿದ್ದಾರೆ ಎಂದರು. ಪ್ರಧಾನ ಮಂತ್ರಿಗಳ ದೃಷ್ಟಿಕೋನದಡಿಯಲ್ಲಿ, ಭಾರತಕ್ಕೆ ಹೊಸ ದಿಕ್ಕು ನೀಡಿದ ಮೂವರು ಮಹಾನ್ ನಾಯಕರ ಪರಂಪರೆಯನ್ನು ನಾವು ಸ್ಮರಿಸುತ್ತೇವೆ. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಒಂದು ರಾಷ್ಟ್ರ, ಒಂದು ಸಂವಿಧಾನ, ಒಂದು ಧ್ವಜ ಎಂಬ ಆಲೋಚನೆ ಹೊಂದಿದ್ದರು. ಇಂದು ಅವರ ಕನಸುಗಳು ಭಾರತದಾದ್ಯಂತ ರೂಪುಗೊಳ್ಳುವುದನ್ನು ಕಾಣಬಹುದು.
ಕಳೆದ 11 ವರ್ಷಗಳಲ್ಲಿ, 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಸಮಾಜದ ಕೆಳಮಟ್ಟದಲ್ಲಿಯೂ ಸಹ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತಿದ್ದಾರೆ. ಅಂತ್ಯೋದಯ ಮತ್ತು ಅಟಲ್ ಜಿ ಅವರ ಉತ್ತಮ ಆಡಳಿತದ ಮನೋಭಾವವನ್ನು ಮುಂದಕ್ಕೆ ಕೊಂಡೊಯ್ಯುವ ಈ ಪರಂಪರೆಯು ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ಲಕ್ನೋದ ಪವಿತ್ರ ಭೂಮಿಗೆ ಆಗಮನವೇ ಈ ದೃಷ್ಟಿಕೋನವನ್ನು ಸೂಚಿಸುತ್ತದೆ ಎಂದು ಸಿಎಂ ಯೋಗಿ ಹೇಳಿದರು.

ರಾಷ್ಟ್ರೀಯ ಪ್ರೇರಣಾ ಸ್ಥಳದ ವಿಶೇಷತೆ

ರಾಷ್ಟ್ರ ಪ್ರೇರಣಾ ಸ್ಥಳವನ್ನು ರಾಷ್ಟ್ರೀಯ ಮಹತ್ವವನ್ನು ಹೊಂದಿರುವ ಒಂದು ಹೆಗ್ಗುರುತಾಗಿದ್ದು, ಸ್ಪೂರ್ತಿದಾಯಕ ಸಂಕೀರ್ಣವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅಂದಾಜು 230 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಮತ್ತು 65 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಇದು ನಿರ್ಮಾಣವಾಗಿದ್ದು. ಈ ಸಂಕೀರ್ಣವನ್ನು ನಾಯಕತ್ವದ ಮೌಲ್ಯಗಳು, ರಾಷ್ಟ್ರೀಯ ಸೇವೆ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಸಾರ್ವಜನಿಕ ಸ್ಫೂರ್ತಿಯನ್ನು ಬೆಳೆಸಲು ಮೀಸಲಾಗಿರುವ ಶಾಶ್ವತ ರಾಷ್ಟ್ರೀಯ ಆಸ್ತಿಯಾಗಿಸುವ ಯೋಜನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಕೀರ್ಣವು ಡಾ. ಶ್ಯಾಮ ಪ್ರಸಾದ್ ಮುಖರ್ಜಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ 65 ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ಒಳಗೊಂಡಿದ್ದು, ಇದು ಭಾರತದ ರಾಜಕೀಯ ಚಿಂತನೆ, ರಾಷ್ಟ್ರ ನಿರ್ಮಾಣ ಮತ್ತು ಸಾರ್ವಜನಿಕ ಜೀವನಕ್ಕೆ ಈ ನಾಯಕರುಗಳು ನೀಡಿದ ಮಹತ್ವದ ಕೊಡುಗೆಗಳ ಸಂಕೇತವಾಗಿದೆ.
ಇದನ್ನು ಸುಮಾರು 98,000 ಚದರ ಅಡಿಗಳಷ್ಟು ವಿಸ್ತೀರ್ಣದಲ್ಲಿ ಕಮಲದ ಆಕಾರದ ರಚನೆಯ ರೂಪದಲ್ಲಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ವಸ್ತುಸಂಗ್ರಹಾಲಯವನ್ನು ಸಹ ಹೊಂದಿದೆ. ಇದು ಭಾರತದ ರಾಷ್ಟ್ರೀಯ ಪ್ರಯಾಣ ಮತ್ತು ಮುಂದುವರಿದ ಡಿಜಿಟಲ್ ಮತ್ತು ತಂತ್ರಜ್ಞಾನಗಳ ಮೂಲಕ ಈ ದಾರ್ಶನಿಕ ನಾಯಕರ ಕೊಡುಗೆಗಳನ್ನು ಪ್ರದರ್ಶಿಸುತ್ತದೆ ಮತ್ತು ಸಂದರ್ಶಕರಿಗೆ ಆಕರ್ಷಕ ಮತ್ತು ಶೈಕ್ಷಣಿಕ ಅನುಭವವನ್ನು ನೀಡುತ್ತದೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net