ರ‍್ಯಾಪಿಡೋ ಸಂಸ್ಥಾಪಕರಿಗೆ ಬಿಗ್ ಶಾಕ್!...ಸರ್ಕಾರದ ಅನುಮತಿಯಿಲ್ಲದೆ ಬೈಕ್ ಟ್ಯಾಕ್ಸಿ ಓಡಿಸಿ ಸಿಕ್ಕಿಬಿದ್ದ ಮಾಲೀಕರು.. Rapido

Rapido  (ಚಿತ್ರ X)
Rapido (ಚಿತ್ರ X)
Published on
ನಾಗ್ಪುರ: ಮಹಾರಾಷ್ಟ್ರ ಸರ್ಕಾರದ ಅಗತ್ಯ ಅಧಿಕೃತ ಅನುಮತಿಯನ್ನು ಪಡೆಯದೆ ನಿಯಮಬಾಹಿರವಾಗಿ ಪೆಟ್ರೋಲ್ ಚಾಲಿತ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿರ್ವಹಿಸುತ್ತಿದ್ದ ಆರೋಪದ ಮೇಲೆ ಪ್ರಮುಖ ಸಾರಿಗೆ ಆಪ್ ಆಧಾರಿತ ಸಂಸ್ಥೆಯಾದ ರಾಪಿಡೊ (Rapido) ಕಂಪನಿಯ ಸ್ಥಾಪಕರ ವಿರುದ್ಧ ನಾಗ್ಪುರದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಪರವಾಗಿ ನಾಗ್ಪುರ ಪ್ರಾದೇಶಿಕ ಸಾರಿಗೆ ಕಚೇರಿಯ (RTO) ಮೋಟಾರ್ ವಾಹನ ನಿರೀಕ್ಷಕರಾದ ವಿಶಾಲ್ ಮಧುಕರರಾವ್ ಭೋವ್ಟೆ ಅವರು ನೀಡಿದ ಲಿಖಿತ ದೂರಿನ ಅನ್ವಯ ರಾಪಿಡೊ ಆ್ಯಪ್ ನಿರ್ವಹಿಸುವ ರೂಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರಾದ ರಿಷಿಕೇಶ್ ಎಸ್‌ಆರ್, ಪವನ್ ಗುಂಟುಪಲ್ಲಿ ಮತ್ತು ಅರವಿಂದ್ ಸಂಕಾ ವಿರುದ್ಧ ಈ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ  ತಿಳಿಸಿದೆ.

ದೂರಿನಲ್ಲೇನಿದೆ?

ದೂರಿನ ಪ್ರಕಾರ, ಜೂನ್ 23 ರಂದು ಆರ್‌ಟಿಒ ಅಕ್ರಮ ಪ್ರಯಾಣಿಕರ ಸಾಗಣೆಯ ವಿರುದ್ಧ ವಿಶೇಷ ಅಭಿಯಾನ ನಡೆಸಿತು. ಈ ಸಂದರ್ಭದಲ್ಲಿ ರವಿ ಭವನದಿಂದ ಪ್ರಿಯದರ್ಶಿನಿ ಕಾಲೋನಿಗೆ 22 ರೂ.ಗೆ ರಾಪಿಡೋ ಆ್ಯಪ್ ಮೂಲಕ ಬೈಕ್ ಸವಾರಿಯನ್ನು ಬುಕ್ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಬೈಕ್ (MH-31/GC-0850) ಪಿಕಪ್ ಪಾಯಿಂಟ್ ತಲುಪುತ್ತಿದ್ದಂತೆಯೇ ಅಲ್ಲಿಯೇ ಸಿದ್ಧರಾಗಿದ್ದ ಆರ್‌ಟಿಒ ಸಿಬ್ಬಂದಿ ವಾಹನವನ್ನು ತಡೆದು ತಪಾಸಣೆಗಾಗಿ ಕಚೇರಿಗೆ ತರಲಾಯಿತು. ಈ ಪರಿಶೀಲನೆಯಲ್ಲಿ ಆ ವಾಹನವು ಖಾಸಗಿ ನೋಂದಣಿ ಹೊಂದಿದ್ದು, ಯಾವುದೇ ಅಧಿಕೃತ ಸಾರಿಗೆ ಪರವಾನಗಿ ಅಥವಾ ಸರ್ಕಾರದ ಲೈಸೆನ್ಸ್ ಇಲ್ಲದೆ ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿಯಾಗಿ ಬಳಸಲಾಗುತ್ತಿದೆ ಎಂಬುದನ್ನು ಅರಿತುಕೊಂಡರು. ಈ ಹಿನ್ನೆಲೆಯಲ್ಲಿ ವಾಹನವನ್ನು ವಶಪಡಿಸಿಕೊಂಡು ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೋವ್ಟೆ ಸಲ್ಲಿಸಿದ ದೂರಿನ ಪ್ರಕಾರ, ಪೆಟ್ರೋಲ್ ಚಾಲಿತ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿರ್ವಹಿಸಲು ರಾಪಿಡೊ ಮಹಾರಾಷ್ಟ್ರ ಸರ್ಕಾರ ಅಥವಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದನೆ ಪಡೆದಿಲ್ಲ.
ವಾಣಿಜ್ಯ ಪ್ರಯಾಣಿಕರ ಸಾಗಣೆಗೆ ಖಾಸಗಿ ವಾಹನಗಳ ಬಳಕೆಯನ್ನು ಕಂಪನಿಯು ಪ್ರೋತ್ಸಾಹಿಸುತ್ತಿದ್ದು, ಸಾರಿಗೆ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಇದರಿಂದ ಪ್ರಯಾಣಿಕರ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸಿದೆ ಮತ್ತು ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟುಮಾಡುತ್ತಿದೆ ಎಂದು ದೂರಿನಲ್ಲಿ ವಾದಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 318 (3), 3 (5), ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 66, 93, 192 ಎ, 193 ಮತ್ತು 199 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸೀತಾಬುಲ್ಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net