ಕ್ಷಮೆ ಕೇಳಲು ರಣವೀರ್​ ಸಿಂಗ್ ಸಿದ್ಧ| ಹೈಕೋರ್ಟ್​ಗೆ ವಕೀಲರ ಮಾಹಿತಿ

ರಣವೀರ್​ ಸಿಂಗ್
ರಣವೀರ್​ ಸಿಂಗ್
Published on
ಬೆಂಗಳೂರು: ದೈವಾರಾಧನೆಗೆ ಅಪಚಾರ ಎಸಗುವ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಕ್ಷಮೆ ಕೇಳಲು ರಣವೀರ್​ ಸಿಂಗ್​ ಸಿದ್ಧರಿದ್ದಾರೆ. ಆ ಕುರಿತು ಅಫಿಡವಿತ್​ ಸಲ್ಲಿಸಲಾಗುವುದು. ಅಲ್ಲದೆ, ದೇವಾಲಯಕ್ಕೂ ಭೇಟಿ ನೀಡಲಾಗುವುದು ಎಂದು ರಣವೀರ್​ ಪರ ವಕೀಲರು ಹೈಕೋರ್ಟ್​ಗೆ ತಿಳಿಸಿದ್ದಾರೆ.
ಗೋವಾದಲ್ಲಿ ನವೆಂಬರ್​ನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಾರಾಧನೆಗೆ ಅವಮಾನವಾಗುವ ರೀತಿ ವರ್ತಿಸಿದ್ದಾರೆ ಎಂದು ನಟ ರಣವೀರ್​ ಸಿಂಗ್​ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್​ ಠಾಣೆಯಲ್ಲಿ ದಾಖಲಾಗಿರುವ ಎ್​ಐಆರ್​ ರದ್ದುಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಪ್ರಕರಣದ ದೂರುದಾರರ ಪರ ವಾದಿಸಿದ ವಕೀಲರು, ರಣವೀರ್​ ಸಿಂಗ್​ ಸಾಮಾಜಿಕ ಜಾಲಾತಾಣದಲ್ಲಿ ಕ್ಷಮೆ ಕೇಳಿದ್ದಾರೆ. ಆದರೆ, ಅದನ್ನು ಅವರು ಮನಪೂರ್ವಕವಾಗಿ ಮಾಡಿಲ್ಲ. ಅವರ ಸೋಷಿಯಲ್​ ಮೀಡಿಯಾ ಮ್ಯಾನೇಜರ್​ಗಳು ಟ್ವೀಟ್​ ಮಾಡಿರುತ್ತಾರೆ. ಅವರು ಮೌಖಿಕವಾಗಿ ದೈವಕ್ಕೆ ಅಪಚಾರ ಮಾಡಿರುವುದರಿಂದ ಮೌಖಿಕವಾಗಿಯೇ ಕ್ಷಮೆ ಕೇಳಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕ್ಷಮೆ ಕೇಳಿ ಅಫಿಡವಿತ್​ ಸಲ್ಲಿಸುವುದಾಗಿ ರಣವೀರ್​ ಹೇಳಿದ್ದಾರೆ. ನೀವು ಇನ್ನೇನು ಬಯಸುತ್ತಿದ್ದೀರಾ? ಪ್ರಮಾದವಾಗಿದೆ ಹೌದು. ರಣವೀರ್​ ಮಾಡಿರುವುದನ್ನು ಬೆಂಬಲಿಸಲು ಸಾಧ್ಯವಿಲ್ಲ. ಅವರೀಗ ಕ್ಷಮೆ ಕೇಳಲು ಸಿದ್ಧರಿದ್ದಾರೆ. ದೇವಾಲಯಕ್ಕೆ ಬಂದು ಕ್ಷಮೆ ಕೇಳುತ್ತಾರೆ. ಪಶ್ಚಾತಾಪ ಪಡುವ ಮನಸ್ಸಿರಬೇಕು ಎಂದು ಹೇಳಿತು.
ರಣವೀರ್​ ಭೇಟಿಯ ದಿನಾಂಕದ ಬಗ್ಗೆ ನಿರ್ಧರಿಸಲಾಗುವುದು. ಕ್ಷಮೆ ಕೋರಿ ಅಫಿಡವಿತ್​ ಸಲ್ಲಿಸಲಾಗುವುದು ಎಂಬ ಅವರ ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಏ. 10ಕ್ಕೆ ಮುಂದೂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net