ರ‍್ಯಾಂಕ್ ಬಂದಿದೆ…ಅರ್ಹತೆಯೂ ಇದೆ… ಆದ್ರೆ ಕೆಲಸ ಮಾತ್ರ ಇಲ್ಲ! 34 ದಿನದ ಹೋರಾಟದ ಬಳಿಕ 'ಹುಲ್ಲು ತಿಂದ' ಕೇರಳದ ಅಭ್ಯರ್ಥಿಗಳು! Kerala Student Protest

ಸಚಿವಾಲಯದ ಎದುರು ಸಾಂಕೇತಿಕವಾಗಿ ಹುಲ್ಲು ತಿಂದು ಆಕ್ರೋಶ
ಸಚಿವಾಲಯದ ಎದುರು ಸಾಂಕೇತಿಕವಾಗಿ ಹುಲ್ಲು ತಿಂದು ಆಕ್ರೋಶ
Published on

ಪ್ರಮುಖ ಮುಖ್ಯಾಂಶಗಳು

  • ಕೇರಳದಲ್ಲಿ ನೇಮಕಾತಿ ಆದೇಶ ವಿಳಂಬ
  • 34 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಎಲ್‌ಪಿಎಸ್‌ಟಿ (LPST) ಅಭ್ಯರ್ಥಿಗಳು
  • ಸಚಿವಾಲಯದ ಎದುರು ಸಾಂಕೇತಿಕವಾಗಿ ಹುಲ್ಲು ತಿಂದು ಆಕ್ರೋಶ
ತಿರುವನಂತಪುರಂ: ಸರ್ಕಾರಿ ಉದ್ಯೋಗಕ್ಕಾಗಿ ಹಗಲಿರುಳು ಕಷ್ಟಪಟ್ಟು ಓದಿ, ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದರೂ ಕೈಗೆ ನೇಮಕಾತಿ ಆದೇಶ ಸಿಗದೆ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ಕೇರಳದ ಅಭ್ಯರ್ಥಿಗಳದ್ದಾಗಿದೆ.
ಕೇರಳದಲ್ಲಿ ಎಲ್‌ಪಿಎಸ್‌ಟಿ (LPST - Lower Primary School Teacher) ಹುದ್ದೆಗಳ ನೇಮಕಾತಿ ಆದೇಶ ನೀಡುವಲ್ಲಿ ರಾಜ್ಯ ಸರ್ಕಾರ ತೋರುತ್ತಿರುವ ನಿರಾಸಕ್ತಿ ಹಾಗೂ ವಿಳಂಬ ಧೋರಣೆಯನ್ನು ಖಂಡಿಸಿ, ಅಭ್ಯರ್ಥಿಗಳು ವಿನೂತನ ಪ್ರತಿಭಟನೆ (Kerala Student Protest) ಯೊಂದನ್ನು ನಡೆಸಿದ್ದಾರೆ. ಸಚಿವಾಲಯದ ಎದುರೇ ಸಾಂಕೇತಿಕವಾಗಿ ಹುಲ್ಲು ತಿನ್ನುವ ಮೂಲಕ ತಮ್ಮ ಹತಾಶೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.

34 ದಿನಗಳ ನಿರಂತರ ಹೋರಾಟ!

ಕೇರಳ ಸಾರ್ವಜನಿಕ ಸೇವಾ ಆಯೋಗ (KPSC) ದ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದು, ಎಲ್ಲಾ ಅರ್ಹತೆಗಳಿದ್ದರೂ ಯಾವುದೇ ಔಪಚಾರಿಕ ನಿಯೋಜನೆ ಸಿಗದೆ ಕಾಯುತ್ತಿರುವ ಅಭ್ಯರ್ಥಿಗಳ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಕಳೆದ 34 ದಿನಗಳಿಂದ ಧರಣಿ ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ, ಸರ್ಕಾರದ ಕಡೆಯಿಂದ ಮಾತ್ರ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಅಭ್ಯರ್ಥಿಗಳ ಈ ಅಸಹಾಯಕತೆ ಮತ್ತು ತೀವ್ರ ಹತಾಶೆಯನ್ನು ಇಂದು (ಶನಿವಾರ, ಆ.8) ಸಾಂಕೇತಿಕವಾಗಿ ಹುಲ್ಲು ತಿನ್ನುವ ಮೂಲಕ ಪ್ರದರ್ಶಿಸಿದ್ದಾರೆ.


ಸರ್ಕಾರ ಕ್ಯಾರೇ ಎನ್ನುತ್ತಿಲ್ಲ!

ನಾವು ಎಲ್‌ಪಿಎಸ್‌ಟಿ ರ‍್ಯಾಂಕ್‌ಹೋಲ್ಡರ್‌ಗಳು, ಕಳೆದ 34 ದಿನಗಳಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರ ನಮ್ಮ ಹೋರಾಟಕ್ಕೆ ಕ್ಯಾರೇ ಎನ್ನುತ್ತಿಲ್ಲ. ಈ ವಿಷಯವನ್ನು ಬಗೆಹರಿಸಲು ಅಧಿಕಾರಿಗಳು ಎರಡು ತಿಂಗಳ ಕಾಲಾವಕಾಶ ಕೇಳಿದ್ದಾರೆ.

ಆದರೆ ಈ ಸಣ್ಣ ವಿಷಯಕ್ಕೆ ಎರಡು ತಿಂಗಳು ಬೇಕೇ? ಇದು ನಮಗೆ ಅರ್ಥವಾಗುತ್ತಿಲ್ಲ. ನಮ್ಮನ್ನು ಗಣನೆಗೆ ತೆಗೆದುಕೊಳ್ಳದೆ, ಸಮಸ್ಯೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.


ಎಸ್​ಐಟಿ ರಚನೆ; ನೋ ರಿಸಲ್ಟ್​​!

ಈ ಇಡೀ ನೇಮಕಾತಿ ವಿಳಂಬ ಹಾಗೂ ಹದಗೆಟ್ಟ ವ್ಯವಸ್ಥೆಯ ಹಿಂದೆ ವ್ಯವಸ್ಥಿತವಾದ ಅಕ್ರಮಗಳು ಕೆಲಸ ಮಾಡಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ರಾಜ್ಯ ಯೋಜನಾ ಮಂಡಳಿಯಲ್ಲಿ ಪ್ರಮುಖ ಹುದ್ದೆಗಳಿಗಾಗಿ ಕೇರಳ ಪಿಎಸ್‌ಸಿ ನಡೆಸಿದ ಪರೀಕ್ಷೆಗಳ ಮೌಲ್ಯಮಾಪನ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎನ್ನಲಾಗಿದ್ದು, ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಅರ್ಹ ಅಭ್ಯರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಹಗರಣದ ಗಂಭೀರತೆಯನ್ನು ಪರಿಗಣಿಸಿ, ಕೇರಳ ಸರ್ಕಾರ ಜುಲೈ ಆರಂಭದಲ್ಲಿ ಈ ಪ್ರಕರಣದ ಸಮಗ್ರ ತನಿಖೆಗಾಗಿ ಪೊಲೀಸ್ ಮಹಾನಿರ್ದೇಶಕ (ADGP) ಎಸ್. ಅಜೀತಾ ಬೇಗಂ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸುವುದಾಗಿ ಪ್ರಕಟಿಸಿತ್ತು.
ಆದರೆ ಎಸ್​ಐಟಿ ರಚನೆ ಆದರೂ ಸಹ ಇಲ್ಲಿವರೆಗೆ ಯಾವುದೇ ಬಂಧನ, ಎಫ್​ಐಆರ್ ಚಾರ್ಜ್​ಶೀಟ್​ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ತೆಗೆದುಕೊಂಡ ಬಗ್ಗೆ ವರದಿಗಳಿಲ್ಲ. ಅಥವಾ ಈ ಕುರಿತು ಯಾವುದೇ ಮಾಹಿತಿ ಇಲ್ಲಿವರೆಗೆ ಬಹಿರಂಗವಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಈ ಎಸ್​ಐಟಿ ರಚನೆಯೇ ಇನ್ನೊಂದು ಬಗೆಯ ಅಕ್ರಮವೆಂದು ಆಕ್ರೋಶ ಹೊರಹಾಕುತ್ತಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net