ರಾಮ ಮಂದಿರ ನಿಧಿ ವಿವಾದ: ಸತ್ಯಾಸತ್ಯತೆಯನ್ನು ಹೊರತರಲು ಎಸ್‌ಐಟಿ ರಚನೆ: ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ! Yogi Adityanath

ರಾಮ ಮಂದಿರ ನಿಧಿ ವಿವಾದ: ಸತ್ಯಾಸತ್ಯತೆಯನ್ನು ಹೊರತರಲು  ಎಸ್‌ಐಟಿ ರಚನೆ: ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ!
ರಾಮ ಮಂದಿರ ನಿಧಿ ವಿವಾದ: ಸತ್ಯಾಸತ್ಯತೆಯನ್ನು ಹೊರತರಲು ಎಸ್‌ಐಟಿ ರಚನೆ: ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ!
Published on
ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯೆಯನ್ನು ಮತ್ತು ರಾಮ ಮಂದಿರದ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ತೇಜೋವಧೆ ಮಾಡಲು ವಿಪಕ್ಷಗಳು ಯೋಜಿತ ಪಿತೂರಿ ನಡೆಸುತ್ತಿವೆ ಎಂದು ಆರೋಪಿಸಿರುವ ಅವರು, ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ವಿಶೇಷ ತನಿಖಾ ತಂಡವನ್ನು (SIT) ರಚಿಸಿರುವುದಾಗಿ ಘೋಷಿಸಿದ್ದಾರೆ.
ಅಯೋಧ್ಯೆಯ ಮಣಿ ರಾಮ್ ದಾಸ್ ಚಹಾವನಿಯ ಮುಖ್ಯಸ್ಥರು ಹಾಗೂ ರಾಮ ಜನ್ಮಭೂಮಿ ಟ್ರಸ್ಟ್‌ನ ಅಧ್ಯಕ್ಷರಾದ ಮಹಂತ್ ನೃತ್ಯ ಗೋಪಾಲ್ ದಾಸ್ ಜಿ ಮಹಾರಾಜ್ ಅವರ 88ನೇ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಎಂ ಯೋಗಿ ಈ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಟ್ರಸ್ಟ್‌ನ ಸ್ವಂತ ಮನವಿಯ ಮೇರೆಗೆ ಈ ಎಸ್‌ಐಟಿ (SIT) ತನಿಖೆಗೆ ಆದೇಶಿಸಲಾಗಿದೆ ಎಂದು ಯೋಗಿ ಸ್ಪಷ್ಟಪಡಿಸಿದ್ದಾರೆ.

"ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದವರಿಂದ ಇಂದು ರಾಮಭಕ್ತಿಯ ಪಾಠ!"

ವಿಪಕ್ಷಗಳ ಇಕ್ಕಟ್ಟಿನ ಧೋರಣೆಯನ್ನು ತರಾಟೆಗೆ ತೆಗೆದುಕೊಂಡ ಯೋಗಿ ಆದಿತ್ಯನಾಥ್, ಹಿಂದೆ ಎಂದೂ ರಾಮಲಲ್ಲಾನ ದರ್ಶನಕ್ಕೆ ಅಯೋಧ್ಯೆಗೆ ಬರದವರು ಇಂದು ನಮಗೆ ರಾಮಭಕ್ತಿಯ ಬಗ್ಗೆ ಬೋಧನೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದವರು, ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಮತ್ತು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದವರ ಮೇಲೆ ಲಾಠಿ ಬೀಸಿದವರು ಇಂದು ಅಯೋಧ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ದೇಶವಿರೋಧಿ ಶಕ್ತಿಗಳ ಡಬಲ್ ಸ್ಟ್ಯಾಂಡರ್ಡ್ ಹಾಗೂ ಕುತಂತ್ರಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ. ಎಸ್‌ಐಟಿ ತನಿಖೆಯು ಕೇವಲ 15 ದಿನಗಳಲ್ಲಿ ಹಾಲನ್ನು ಹಾಲಾಗಿ, ನೀರನ್ನು ನೀರಾಗಿ ಬೇರ್ಪಡಿಸಿ ಸತ್ಯವನ್ನು ಜಗತ್ತಿನ ಮುಂದೆ ಇಡಲಿದೆ ಎಂದರು.
ಸಮಾಜವಾದಿ ಪಕ್ಷದ ವಿರುದ್ಧ ನೇರ ವಾಗ್ದಾಳಿ ನಡೆಸಿದ ಯುಪಿ ಸಿಎಂ, ಕುಂಭಮೇಳದ ಉಸ್ತುವಾರಿಯನ್ನು ಎಸ್‌ಪಿ ನಾಯಕರು ಯಾರಿಗೆ ನೀಡಿದ್ದರು. ಭಾರತ ಮಾತೆಯನ್ನು ನಿಂದಿಸುವ ವ್ಯಕ್ತಿ ಎಂದಾದರೂ ನಿಮ್ಮ ಹಿತೈಷಿಯಾಗಲು ಸಾಧ್ಯವೇ, ಮಧ್ಯಾಹ್ನ 12 ಗಂಟೆಗೆ ನಿದ್ರೆಯಿಂದ ಏಳುವ ಜನರಿಗೆ ತೀರ್ಥಯಾತ್ರೆಯ ಮಹತ್ವವಾಗಲಿ ಅಥವಾ ಸನಾತನ ಧರ್ಮದ ಶ್ರೇಷ್ಠತೆಯಾಗಲಿ ಹೇಗೆ ಅರ್ಥವಾಗಲು ಸಾಧ್ಯ ಎಂದು ಲೇವಡಿ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ಕಡಿಮೆ ಆಗಿಲ್ಲ: ಸುಳ್ಳು ಸುದ್ದಿಗಳಿಗೆ ಬ್ರೇಕ್

ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ ಎಂಬ ವಿಪಕ್ಷಗಳ ಪ್ರಚಾರವನ್ನು ಸಿಎಂ ಯೋಗಿ ಸಂಪೂರ್ಣವಾಗಿ ತಳ್ಳಿಹಾಕಿದರು. ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ನಿಜವಾಗಿಯೂ ಕಡಿಮೆಯಾಗಿದೆಯೇ ಎಂದು ಸ್ವತಃ ಪರಿಶೀಲಿಸಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ. ಈ ಸುಡುವ ಬಿಸಿಲಿನಲ್ಲೂ ಹನುಮಾನ್‌ಗರ್ಹಿ ಮತ್ತು ರಾಮ ಮಂದಿರದ ಆವರಣ ಭಕ್ತರಿಂದ ಕಿಕ್ಕಿರಿದು ತುಂಬಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅಯೋಧ್ಯೆಯು ಕಸದ ರಾಶಿ ಮತ್ತು ಕಿರಿದಾದ ಗಲ್ಲಿಗಳಿಂದ ಕೂಡಿತ್ತು. ಪವಿತ್ರ ಸರಯೂ ನದಿ ಹರಿಯುತ್ತಿದ್ದರೂ ರಾಮ್ ಕಿ ಪೈಡಿ ನಿರ್ಜನವಾಗಿರುತ್ತಿತ್ತು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಯೋಧ್ಯೆಯು ಜಾಗತಿಕ ಮಟ್ಟದ ಭವ್ಯ ನಗರವಾಗಿ ಮಾರ್ಪಟ್ಟಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ,(ಏಜೆನ್ಸೀಸ್​).
ಈ ಭವ್ಯ ಸಮಾವೇಶದಲ್ಲಿ ಉತ್ತರ ಪ್ರದೇಶದ ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ, ರಾಜ್ಯಸಭಾ ಸಂಸದ ಡಾ. ದಿನೇಶ್ ಶರ್ಮಾ, ಜಗದ್ಗುರು ರಾಮಾನುಜಾಚಾರ್ಯ ಸೇರಿದಂತೆ ದೇಶದ ಹಲವು ಪ್ರಮುಖ ರಂಗಗಳ ಧಾರ್ಮಿಕ ಸಂತರು ಮತ್ತು ರಾಜಕೀಯ ಮುಖಂಡರು ಉಪಸ್ಥಿತರಿದ್ದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net