ಐಷಾರಾಮಿ ಫಾರ್ಮ್​ಹೌಸ್​, 65 ಲಕ್ಷ ರೂ. ಮನೆ... ಕೇವಲ 15,000 ಸಂಬಳದಲ್ಲಿ ಇಷ್ಟೆಲ್ಲ ಆಸ್ತಿ! ಹುಂಡಿ ಕದ್ದವರು ಶ್ರೀಮಂತರು

ಅಯೋಧ್ಯೆ ರಾಮಮಂದಿರ ಹುಂಡಿ ಕಳ್ಳತನ ಪ್ರಕರಣ
ಅಯೋಧ್ಯೆ ರಾಮಮಂದಿರ ಹುಂಡಿ ಕಳ್ಳತನ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • ಅಯೋಧ್ಯೆ ರಾಮಮಂದಿರ ಹುಂಡಿಯಲ್ಲಿ ಹಣ ಕದ್ದ ಪ್ರಕರಣ
  • ಆರೋಪಿಯ ಬಳಿಯಿರುವ ಆಸ್ತಿ ಕೇಳಿ ಅಧಿಕಾರಿಗಳೇ ಶಾಕ್​
  • 15,000 ರೂ. ಸಂಬಳದಲ್ಲಿ ಇಷ್ಟೆಲ್ಲ ಆಸ್ತಿ ಹೇಗೆ ಸಾಧ್ಯ?
ಅಯೋಧ್ಯೆ: ರಾಮಮಂದಿರ ದೇಣಿಗೆ ದುರ್ಬಳಕೆ ಪ್ರಕರಣದಲ್ಲಿ ಈಗಾಗಲೇ 8 ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ. ಈ ದರೋಡೆ ಬಟಾಬಯಲಾಗುತ್ತಿದ್ದಂತೆ ಟ್ರಸ್ಟ್​ನ​ ಪ್ರಧಾನ ಕಾರ್ಯದರ್ಶಿ ಚಂಪತ್ ಮತ್ತು ಟ್ರಸ್ಟಿ ಅನಿಲ್ ತಮ್ಮ ಸ್ಥಾನಗಳಿಗೆ​ ದಿಢೀರ್​​ ರಾಜೀನಾಮೆ ಘೋಷಿಸಿದರು. ಈ ಬೆಳವಣಿಗೆಗಳು ಪ್ರಕರಣಕ್ಕೆ ಹೊಸ ತಿರುವುಗಳನ್ನು ನೀಡಿದ್ದು, ಆರೋಪಿಯೊಬ್ಬನ ಸಂಬಳಕ್ಕೂ ಆತನ ಬಳಿಯಿರುವ ಆಸ್ತಿ ಮೌಲ್ಯವು ಸದ್ಯ ತನಿಖಾ ತಂಡವನ್ನೇ ನಿಬ್ಬೆರಗಾಗಿಸಿದೆ.
ರಾಮನ ಹುಂಡಿಯನ್ನು ದರೋಡೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಬ್ಬಂದಿ ಅನುಕಲ್ಪ್ ಮಿಶ್ರಾಗೆ ಅಯೋಧ್ಯೆಯಲ್ಲಿ 65 ಲಕ್ಷ ರೂ. ಬೆಲೆಬಾಳುವ ಮನೆ, ಹುಟ್ಟೂರಿನಲ್ಲಿ ನೂತನವಾಗಿ ಕಟ್ಟಲಾದ ಫಾರ್ಮ್‌ಹೌಸ್, 1 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಬೈಕ್​ ಇದೆ. ಇದರೊಟ್ಟಿಗೆ ಮಹೀಂದ್ರ ಸ್ಕಾರ್ಪಿಯೋ ಕಾರು ಖರೀದಿಸಲು ಬುಕ್ ಕೂಡ ಮಾಡಲಾಗಿದೆ. ಇಷ್ಟೆಲ್ಲವೂ ಕೇವಲ 22ನೇ ವಯಸ್ಸಿಗೆ ಮತ್ತು ತಿಂಗಳಿಗೆ ಸಿಗುವ 15,000 ರೂ. ಸಂಬಳದಲ್ಲಿ ಮಾಡಲಾಗಿದೆ ಎಂಬುದು ಅಚ್ಚರಿ ಮೂಡಿಸಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಸಂಗ್ರಹಿಸಿರುವ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶ ಪೊಲೀಸರು, ಚುರುಕಿನ ತನಿಖೆಯಲ್ಲಿ ಆರೋಪಿಯ ಒಟ್ಟು ಆಸ್ತಿಯನ್ನು ಹಂತ ಹಂತವಾಗಿ ಬಯಲಿಗೆಳೆದಿದ್ದಾರೆ. ಸ್ವಾಧೀನಗಳಿಗೆ ಕಾನೂನುಬದ್ಧ ಗಳಿಕೆಯ ಮೂಲಕ ಹಣ ನೀಡಲಾಗಿದೆಯೇ ಅಥವಾ ದೇಣಿಗೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿವೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿನೆ ನಡೆಸುತ್ತಿದ್ದಾರೆ.
ಈ ವರ್ಷದ ಏಪ್ರಿಲ್‌ನಲ್ಲಿ ತನ್ನ ಹುಟ್ಟೂರಿನಲ್ಲಿ ಬರೋಬ್ಬರಿ ಏಳು ದಿನಗಳ ಕಾಲ ಅದ್ದೂರಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದ್ದ ಅನುಕಲ್ಪ್​, ಪ್ರಮುಖ ವ್ಯಕ್ತಿಗಳನ್ನೇ ಕರೆಸಿದ್ದ ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈತನ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆ ಜೊತೆಗೆ ಏರಿಕೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಇದನ್ನೇ ಬಲವಾದ ಸಾಕ್ಷಿಯನ್ನಾಗಿ ಪರಿಗಣಿಸದೆ, ಸೂಕ್ತ ತನಿಖೆಯ ಮೂಲಕ ಪತ್ತೆಹಚ್ಚುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ತಿ ದಾಖಲೆಗಳ ಜತೆಗೆ, ಬ್ಯಾಂಕ್ ಖಾತೆಗಳು ಮತ್ತು ಎಲ್ಲೆಲ್ಲಿ ಹೂಡಿಕೆ ಮಾಡಲಾಗಿದೆ, ವಿಮಾ ಪಾಲಿಸಿಗಳು, ಲಾಕರ್‌ಗಳು ಮತ್ತು ಇತರ ಹಣಕಾಸು ಮೂಲಗಳು ಸೇರಿದಂತೆ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಖಾಕಿ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net