ರಾಮಮಂದಿರ ಚಂದಾ ವಿವಾದ: ಎಸ್‌ಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆ ಸಿಯಾರಾಮ್ ಧಾಮ್ ಅಭಿವೃದ್ಧಿ; ಅಖಿಲೇಶ್ ಯಾದವ್ ಪ್ರತಿಜ್ಞೆ! Akhilesh Yadav

ರಾಮಮಂದಿರ ಚಂದಾ ವಿವಾದ: ಎಸ್‌ಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆ ಸಿಯಾರಾಮ್ ಧಾಮ್ ಅಭಿವೃದ್ಧಿ; ಅಖಿಲೇಶ್ ಯಾದವ್ ಪ್ರತಿಜ್ಞೆ!
ರಾಮಮಂದಿರ ಚಂದಾ ವಿವಾದ: ಎಸ್‌ಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆ ಸಿಯಾರಾಮ್ ಧಾಮ್ ಅಭಿವೃದ್ಧಿ; ಅಖಿಲೇಶ್ ಯಾದವ್ ಪ್ರತಿಜ್ಞೆ!
Published on
ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರದ ಕಾಣಿಕೆ ಎಣಿಕೆ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಚಂದಾ ಹಣದ ದುರುಪಯೋಗ ಮತ್ತು ಕಳ್ಳತನದ ಆರೋಪ ದೇಶಾದ್ಯಂತ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಈ ಬೆನ್ನಲ್ಲೇ, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್(Akhilesh Yadav) ದೊಡ್ಡ ರಾಜಕೀಯ ದಾಳ ಉರುಳಿಸಿದ್ದಾರೆ.
ರಾಜ್ಯದಲ್ಲಿ ಸಮಾಜವಾದಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ, ಅಯೋಧ್ಯೆಯನ್ನು ಜಾಗತಿಕ ಮಟ್ಟದ ವಿಶಿಷ್ಟ ಆಧ್ಯಾತ್ಮಿಕ ನಗರಿಯನ್ನಾಗಿ ಮತ್ತು ಭಕ್ತರ ನೈಜ ಶ್ರದ್ಧಾಕೇಂದ್ರವಾದ ಸಿಯಾರಾಮ್ ಧಾಮ್ ಆಗಿ ಪುನರ್ ನಿರ್ಮಾಣ ಮಾಡಲಾಗುವುದು ಎಂದು ಅಖಿಲೇಶ್ ಘೋಷಿಸಿದ್ದಾರೆ. ಅಲ್ಲದೆ, ಅಯೋಧ್ಯೆಯ ರಾಮಮಂದಿರದ ಕಾಣಿಕೆ ಪೆಟ್ಟಿಗೆಯಿಂದ ಭಕ್ತರ ಹಣವನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗಿದೆ ಎಂಬ ಆಘಾತಕಾರಿ ಸತ್ಯವನ್ನು ವಿಶೇಷ ತನಿಖಾ ದಳ (SIT) ಬಯಲಿಗೆಳೆದ ಬೆನ್ನಲ್ಲೇ ಅಖಿಲೇಶ್ ಈ ಹೇಳಿಕೆ ಹೊರಬಿದ್ದಿರುವುದು ತೀವ್ರ ಕುತೂಹಲ ಮೂಡಿಸಿದೆ.

ಭಕ್ತರ ನಂಬಿಕೆಗೆ ದ್ರೋಹ: ಅಖಿಲೇಶ್ ಕಿಡಿ

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅಖಿಲೇಶ್ ಯಾದವ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಯೋಧ್ಯೆಯ ಪಾವಿತ್ರ್ಯತೆಗೆ ಧಕ್ಕೆ ಬಂದಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ನಾವು ಧರ್ಮನಿಷ್ಠೆ ಮತ್ತು ಪ್ರಾಮಾಣಿಕತೆಯ ಬದ್ಧತೆಯೊಂದಿಗೆ ಪ್ರತಿಜ್ಞೆ ಮಾಡುತ್ತೇವೆ. 2027 ರಲ್ಲಿ ಸಮಾಜವಾದಿ ಪಕ್ಷದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ಅಯೋಧ್ಯೆಯನ್ನು ಅತ್ಯಂತ ಮಾದರಿ ಮತ್ತು ವಿಶಿಷ್ಟ ಧಾರ್ಮಿಕ ನಗರವಾಗಿ ಅಭಿವೃದ್ಧಿಪಡಿಸಲಾಗುವುದು. ವಿಶ್ವದ ಮೂಲೆ ಮೂಲೆಗಳಿಂದ ಬರುವ ಭಕ್ತರು ಇಲ್ಲಿ ಕೇವಲ ಪ್ರವಾಸೋದ್ಯಮವನ್ನಲ್ಲ, ಬದಲಿಗೆ ನೈಜ ಆಧ್ಯಾತ್ಮಿಕತೆಯನ್ನು ಅನುಭವಿಸುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಶ್ರೀರಾಮನ ಆಶೀರ್ವಾದದೊಂದಿಗೆ, ಅಯೋಧ್ಯೆಯ ಪುರಾತನ ಶ್ರದ್ಧೆ, ಭಕ್ತಿ ಮತ್ತು ನಂಬಿಕೆಯ ಸಂಕೇತವಾದ ಸಿಯಾರಾಮ್ ಧಾಮ್ ಎಂಬ ಹೆಸರನ್ನು ನಾವು ಮತ್ತಷ್ಟು ಗಟ್ಟಿಗೊಳಿಸುತ್ತೇವೆ. ಇದರೊಂದಿಗೆ, ರಸ್ತೆ ಅಗಲೀಕರಣ ಮತ್ತು ಮೂಲಸೌಕರ್ಯದ ಹೆಸರಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅಯೋಧ್ಯೆಯ ಸ್ಥಳೀಯ ನಿವಾಸಿಗಳ ಸಾಂಪ್ರದಾಯಿಕ ಹೆಮ್ಮೆ, ಘನತೆ ಮತ್ತು ಹಕ್ಕುಗಳನ್ನು ನಾವು ಮರಳಿ ನೀಡಲಿದ್ದೇವೆ ಎಂದು ಅಖಿಲೇಶ್ ಭರವಸೆ ನೀಡಿದ್ದಾರೆ.

70ಕ್ಕೂ ಹೆಚ್ಚು ಬಾರಿ ಚಂದಾ ಕಳ್ಳತನ! ಬೆಚ್ಚಿಬಿದ್ದ ಎಸ್‌ಐಟಿ

ಮತ್ತೊಂದೆಡೆ, ರಾಮಮಂದಿರದ ಚಂದಾ ಹಣ ದುರುಪಯೋಗದ ತನಿಖೆ ನಡೆಸುತ್ತಿರುವ SIT ಬಿಡುಗಡೆ ಮಾಡಿರುವ ಪ್ರಾಥಮಿಕ ವರದಿ ತೀವ್ರ ಆಘಾತಕಾರಿಯಾಗಿದೆ. ಏಪ್ರಿಲ್ 27 ರಿಂದ ಜೂನ್ 5 ರ ನಡುವಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳಿಗೆ ಕಾಣಿಕೆ ಎಣಿಕೆ ಕೇಂದ್ರದ ಒಳಗೆ ಬರೋಬ್ಬರಿ 70 ಕ್ಕೂ ಹೆಚ್ಚು ಬಾರಿ ಹಣ ಕಳ್ಳತನ ಮಾಡಲು ಯತ್ನಿಸಿರುವ ದೃಶ್ಯಗಳು ಪತ್ತೆಯಾಗಿವೆ.
ಮಂದಿರದ ಆಡಳಿತ ಮಂಡಳಿಯ ಆಂತರಿಕ ನಿಯಂತ್ರಣ, ದಾಖಲೆ ನಿರ್ವಹಣೆ ಮತ್ತು ಉಸ್ತುವಾರಿಯಲ್ಲಿ ಭಾರಿ ಲೋಪಗಳಿರುವುದನ್ನು ಎಸ್‌ಐಟಿ ಎತ್ತಿ ತೋರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮನೀಶ್ ಕುಮಾರ್ ಯಾದವ್ ಮತ್ತು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಮಾಜಿ ಚಾಲಕ ರಾಮಶಂಕರ್ ಯಾದವ್ ಅಲಿಯಾಸ್ ತಿನ್ನು ಯಾದವ್ ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ. ಆರೋಪಿಗಳು ಸಿಸಿಟಿವಿ ಕ್ಯಾಮೆರಾಗಳ ಕಣ್ಣು ತಪ್ಪಿಸುವ ಬ್ಲೈಂಡ್ ಸ್ಪಾಟ್​ಗಳನ್ನು ಬಳಸಿಕೊಂಡು ಹಣ ಲೂಟಿ ಮಾಡುತ್ತಿದ್ದರು. ಆದರೆ ಒಳಭಾಗದಲ್ಲಿ ರಹಸ್ಯವಾಗಿಟ್ಟಿದ್ದ ಮತ್ತೊಂದು ಕ್ಯಾಮೆರಾದಿಂದ ಇವರ ಕಳ್ಳಾಟ ಬಯಲಾಗಿದೆ. ಈಗಾಗಲೇ ಆರೋಪಿಗಳಿಂದ ಸುಮಾರು 79.85 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ನೆರೆದಿದ್ದ ಭಕ್ತರ ಭಾವನೆಗಳೊಂದಿಗೆ ಆಟವಾಡಿದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪ್ರಮುಖರಾದ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ರಾಜಕೀಯ ಮಾಡಬೇಡಿ: ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ

ಈ ವಿವಾದದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಅಯೋಧ್ಯೆಯು ಸನಾತನ ಧರ್ಮದ ಅಪಾರ ನಂಬಿಕೆಯ ಸಂಕೇತವಾಗಿದೆ. ಭಕ್ತರ ಕಾಣಿಕೆಗೆ ಕೈಹಾಕಿದ ಯಾರನ್ನೂ ಸರ್ಕಾರ ಸುಮ್ಮನೆ ಬಿಡುವುದಿಲ್ಲ. ಎಸ್‌ಐಟಿ ವರದಿಯ ಆಧಾರದ ಮೇಲೆ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಕಠಿಣ ಶಿಕ್ಷೆ ಖಚಿತ ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಯೋಗಿ, ರಾಮಮಂದಿರ ಆಂದೋಲನವನ್ನೇ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವ ಪಕ್ಷಗಳು ಈಗ ದಿಢೀರನೆ ಭಕ್ತರ ಭಾವನೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿವೆ. ಈ ಸೂಕ್ಷ್ಮ ವಿಷಯದಲ್ಲಿ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಬಾರದು ಎಂದು ತಿರುಗೇಟು ನೀಡಿದ್ದಾರೆ.
ಒಟ್ಟಾರೆಯಾಗಿ, ಚಂದಾ ಹಗರಣದ ನೆರಳಿನಲ್ಲಿ 2027ರ ಯುಪಿ ರಾಜಕೀಯ ಜಿದ್ದಾಜಿದ್ದಿಗೆ ಈಗಿನಿಂದಲೇ ಅಯೋಧ್ಯೆ ಮುಖ್ಯ ರಣರಂಗವಾಗಿ ಮಾರ್ಪಡುತ್ತಿರುವುದು ಸ್ಪಷ್ಟವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net