ರಾಷ್ಟ್ರೀಯ ಗೀತೆಗೆ ಶಾಸನಬದ್ಧ ಗೌರವ: ವಂದೇ ಮಾತರಂಗೆ ಕಾನೂನು ರಕ್ಷಣೆ ನೀಡುವ ವಿಧೇಯಕಕ್ಕೆ ರಾಜ್ಯಸಭೆ ಅಂಕಿತ! | Vande Mataram

Vande Mataram
Vande Mataram
Published on
ನವದೆಹಲಿ: ವಂದೇ ಮಾತರಂ (Vande Mataram) ಗೀತೆಯನ್ನು ಕಾನೂನಿನ ವ್ಯಾಪ್ತಿಗೆ ತರುವ ಮತ್ತು ರಾಷ್ಟ್ರಗೀತೆಗೆ ಗೌರವಿಸದಿರುವುದನ್ನು ಅಥವಾ ಅವಮಾನಿಸುವುದನ್ನು ಅಪರಾಧವೆಂದು ಪರಿಗಣಿಸುವ, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ವಿಧೇಯಕ, 2026 ಅನ್ನು ರಾಜ್ಯಸಭೆಯು ಬುಧವಾರ ಅಂಗೀಕರಿಸಿದೆ.
ದೆಹಲಿಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದ ಉತ್ತರಕ್ಕೆ ಆಗ್ರಹಿಸಿ ವಿರೋಧ ಪಕ್ಷದ ಸದಸ್ಯರು ಘೋಷಣೆ ಕೂಗಿ ತೀವ್ರ ಗದ್ದಲ ಎಬ್ಬಿಸಿದ್ದ ವೇಳೆ ಮೇಲ್ಮನೆಯಲ್ಲಿ ಈ ವಿಧೇಯಕವನ್ನು ಪರಿಶೀಲನೆ ಮತ್ತು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಲಾಯಿತು. ಮಸೂದೆಯ ಮೇಲಿನ ಚರ್ಚೆಯ ವೇಳೆ ವಿರೋಧ ಪಕ್ಷಗಳು ಸಭಾತ್ಯಾಗ ನಡೆಸಿದವು.
ಸರ್ಕಾರವು ವಂದೇ ಮಾತರಂನ 150ನೇ ವರ್ಷಾಚರಣೆಯ ನೆನಪಿನ ಸಂದರ್ಭದಲ್ಲಿ ಈ ತಿದ್ದುಪಡಿಯನ್ನು ಮಂಡಿಸಿದ್ದು, ಈ ಹಿಂದೆ ಅಧಿಕೃತ ಸಮಾರಂಭಗಳಲ್ಲಿ ಇದನ್ನು ಹಾಡುವುದನ್ನು ಪ್ರೋತ್ಸಾಹಿಸುವ ಪ್ರಯತ್ನಗಳ ಮುಂದುವರಿದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಬಂಕಿಂಚಂದ್ರ ಚಟ್ಟೋಪಾಧ್ಯಾಯ ಅವರು ಬರೆದ ಹಾಗೂ ನಂತರ ಅವರ ಆನಂದಮಠ ಕಾದಂಬರಿಯಲ್ಲಿ ಸೇರಿಸಲಾದ ಈ ಗೀತೆಯು, ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಬಲ ಸಂಕೇತವಾಗಿ ಹೊರಹೊಮ್ಮಿತು ಮತ್ತು ಇದನ್ನು ಅಧಿಕೃತವಾಗಿ ದೇಶದ ರಾಷ್ಟ್ರೀಯ ಗೀತೆ ಎಂದು ಕರೆಯಲಾಗುತ್ತದೆ.
ಈ ಹೊಸ ಕಾನೂನು ಜಾರಿಗೆ ಬಂದಾಗ ಅವಮಾನ ಮತ್ತು ಅಡ್ಡಿಪಡಿಸುವುದು ಎಂದರೆ ಏನು ಎಂಬುದನ್ನು ಹೇಗೆ ವ್ಯಾಖ್ಯಾನಿಸಲಾಗುತ್ತದೆ ಎಂಬ ಚರ್ಚೆ ಏಳಲಿದೆ. ಮುಖ್ಯವಾಗಿ, ವಂದೇ ಮಾತರಂ ಹಾಡುವಾಗ ಬೇಕೆಂದೇ ಗದ್ದಲ ಮಾಡಿ ಅಡ್ಡಿಪಡಿಸುವುದಕ್ಕೂ ಮತ್ತು ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಕಾರಣದಿಂದ ಗೀತೆಯಲ್ಲಿ ಭಾಗವಹಿಸದೇ ಸುಮ್ಮನಿರುವುದಕ್ಕೂ ಇರುವ ವ್ಯತ್ಯಾಸವನ್ನು ಈ ಕಾನೂನು ಸ್ಪಷ್ಟವಾಗಿ ಗುರುತಿಸುತ್ತದೆಯೇ ಎಂಬ ಪ್ರಶ್ನೆ ಮೂಡಲಿದ್ದು, ಗೀತೆ ಹಾಡದಿರುವುದು ಕೂಡ ಅಪರಾಧವಾಗುತ್ತದೆಯೇ ಅಥವಾ ಅಡ್ಡಿಪಡಿಸುವುದು ಮಾತ್ರ ಅಪರಾಧವೇ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net