ರಾಜ್ಯಸಭಾ ನಾಮಪತ್ರ ತಿರಸ್ಕಾರ: ಕೋರ್ಟ್​ನಲ್ಲೂ ಮೀನಾಕ್ಷಿ ನಟರಾಜನ್​ಗೆ ಹಿನ್ನಡೆ: ಚುನಾವಣಾಧಿಕಾರಿ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲ್ಲ ಎಂದ ಸುಪ್ರೀಂ | Supreme Court

ಮೀನಾಕ್ಷಿ ನಟರಾಜನ್
ಮೀನಾಕ್ಷಿ ನಟರಾಜನ್
Published on
ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ನಾಮಪತ್ರ ತಿರಸ್ಕೃತಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರಿಗೆ ಸುಪ್ರೀಂಕೋರ್ಟ್​ನಲ್ಲೂ(Supreme Court) ಹಿನ್ನಡೆಯಾಗಿದ್ದು, ಶುಕ್ರವಾರ(ಜೂ. 12) ಚುನಾವಣಾಧಿಕಾರಿಯ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲ್ಲ, ಏನಿದ್ದರೂ ಆಯೋಗದಲ್ಲಿಯೇ ಪರಿಹರಿಸಿಕೊಳ್ಳಿ ಎಂದು ಅರ್ಜಿಯನ್ನು ವಜಾಗೊಳಿಸಿದೆ.
ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಕಾಂಗ್ರೆಸ್​ನ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮೀನಾಕ್ಷಿ ನಟರಾಜನ್ ಅವರಿಗೆ, ಪ್ರಕರಣವೊಂದರ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಚುನಾವಣಾಧಿಕಾರಿ ನಾಮಪತ್ರವನ್ನು ತಿರಸ್ಕರಿಸಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದರು.
ಇಂದು ಮೀನಾಕ್ಷಿ ನಟರಾಜನ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್ ಚಂದೂರ್ಕರ್ ಅವರ ದ್ವಿಸದಸ್ಯ ಪೀಠವು, ಚುನಾವಣಾ ಅಧಿಕಾರಿಯಿಂದ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡರೆ, ಚುನಾವಣಾ ಆಯೋಗವನ್ನು ಸಂಪರ್ಕಿಸುವುದು ಸೂಕ್ತ ಪರಿಹಾರ ಎಂದು ಹೇಳಿದೆ.
ಇದೇ ವೇಳೆ ತೀರ್ಪು ಎಷ್ಟೇ ತಪ್ಪಾಗಿದ್ದರೂ, ಒಮ್ಮೆ ನಾಮಪತ್ರ ತಿರಸ್ಕೃತವಾದರೆ, ಪರಿಹಾರವು ಸಾಮಾನ್ಯವಾಗಿ ಬೇರೆಡೆ ಇರುತ್ತದೆ. ಆ ಹಂತದಲ್ಲಿ ನಾವು ಮಧ್ಯಪ್ರವೇಶಿಸಿರುವ ಈ ನ್ಯಾಯಾಲಯದ ಯಾವುದೇ ತೀರ್ಪು ಇದೆಯೇ? ಎಂದು ನಟರಾಜನ್ ಅವರ ವಕೀಲರನ್ನು ಕೇಳಿತು.
ನಟರಾಜನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಅಭ್ಯರ್ಥಿಗಳು ಕನಿಷ್ಠ ಎರಡು ವರ್ಷಗಳ ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಮಾತ್ರ ಬಹಿರಂಗಪಡಿಸಬೇಕಾಗುತ್ತದೆ. ಮತ್ತು ಪ್ರಸ್ತುತ ಪ್ರಕರಣದಲ್ಲಿ ಸಮನ್ಸ್ ಮಾತ್ರ ಜಾರಿ ಮಾಡಲಾಗಿದೆ. ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಗೆ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಪ್ಪಾಗಿ ತಿರಸ್ಕರಿಸಿದ್ದಾರೆ ಎಂದು ವಾದಿಸಿದರು.

ನಾಮಪತ್ರ ತಿರಸ್ಕೃತವಾಗಿದ್ದೇಕೆ?

ರಾಜ್ಯಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮೀನಾಕ್ಷಿ ನಟರಾಜನ್ ಅವರು, ದಾಖಲೆಗಳ ಪರಿಶೀಲನೆಯಲ್ಲಿ ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿದ ನಮೂನೆ 26 ರಲ್ಲಿ ಅಪೂರ್ಣ ಅಫಿಡವಿಟ್ ಸಲ್ಲಿಸಿದ್ದಾರೆ ಮತ್ತು ನ್ಯಾಯಾಲಯದ ದೂರಿನ ವಿವರಗಳನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಚುನಾವಣಾಧಿಕಾರಿ ಅರವಿಂದ್ ಶರ್ಮಾ ನಾಮಪತ್ರ ತಿರಸ್ಕರಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net