ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ 2 ವರ್ಷ...ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ್ರು ಕೇಂದ್ರ ಸಚಿವ ರಾಜನಾಥ್ ಸಿಂಗ್ | Rajnath Singh

 Rajnath Singh | ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
Rajnath Singh | ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
Published on
ಅಯೋಧ್ಯೆ: ರಾಮ ಮಂದಿರದಲ್ಲಿ ಇಂದು (ಡಿ.31 ಬುಧವಾರ) ನಡೆದ ಪ್ರಾಣ ಪ್ರತಿಷ್ಠಾಪನೆಯ ದ್ವಾದಶಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನ್ನಪೂರ್ಣ ದೇವಾಲಯದ ಮೇಲೆ ಧ್ವಜಾರೋಹಣ ನೆರವೇರಿಸಿದ್ದಾರೆ.
ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸಿಂಗ್, ಮುಖ್ಯ ಯಜ್ಞ ವಾಗಿ ಭಾಗವಹಿಸಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು. ದೇವಾಲಯಕ್ಕೆ ತೆರಳುವ ಮುನ್ನ ಇಬ್ಬರೂ ನಾಯಕರು ಪ್ರಮುಖ ಪೂಜಾ ಸ್ಥಳವಾದ ಹನುಮಾನ್‌ಗಢಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಾಣ ಪ್ರತಿಷ್ಠಾ ದ್ವಾದಶಿ ಆಚರಣೆಗಳು ಶುಕ್ರವಾರದವರೆಗೆ ಮುಂದುವರಿಯಲಿದ್ದು, ನಡೆಯುತ್ತಿರುವ ಸಂಭ್ರಮದ ಭಾಗವಾಗಿ ರಾಮ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳು ಶನಿವಾರ ಪ್ರಾರಂಭವಾಗಿವೆ. 2024 ರ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಈಗ ಅದರ ಎರಡನೇ ವಾರ್ಷಿಕೋತ್ಸವ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಮಲಲ್ಲಾ ದರ್ಶನಕ್ಕಾಗಿ ಸುಮಾರು ಐದರಿಂದ ಆರು ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಪಿಟಿಐ ವರದಿ ಮಾಡಿದೆ.

ಅಯೋಧ್ಯೆಯಲ್ಲಿ ಭದ್ರತೆ ಹೆಚ್ಚಳ

ಅಯೋಧ್ಯೆಗೆ ಗಣ್ಯರ ಭೇಟಿ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸ್ಥಳೀಯ ಪೊಲೀಸರು ಪಟ್ಟಣವನ್ನು ಹೈ ಅಲರ್ಟ್‌ನಲ್ಲಿ ಇರಿಸಿದ್ದಾರೆ ಮತ್ತು ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಬಹುಹಂತದ ಭದ್ರತಾ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.
ಅಯೋಧ್ಯೆಯನ್ನು ಐದು ವಲಯಗಳು ಮತ್ತು 10 ಭದ್ರತಾ ವಲಯಗಳಾಗಿ ವಿಂಗಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಸಿಪಿ ತ್ರಿಪಾಠಿ ಮಾಹಿತಿ ನೀಡಿದ್ದು, ಪ್ರತಿಯೊಂದು ಸ್ಥಳಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಮತ್ತು ಆಯಾ ಪ್ರದೇಶಗಳಲ್ಲಿನ ಎಲ್ಲಾ ಚಟುವಟಿಕೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಎನ್ನಲಾಗಿದೆ.
ಪಟ್ಟಣದಾದ್ಯಂತ ಬಲವಾದ ಭದ್ರತಾ ವ್ಯವಸ್ಥೆಯನ್ನು ರಚಿಸಲು ಬೇರೆ ಜಿಲ್ಲೆಯ ಸುಮಾರು 3,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಈ ಪಡೆಯಲ್ಲಿ ನಾಲ್ವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಒಂಬತ್ತು ಉಪ ವರಿಷ್ಠಾಧಿಕಾರಿಗಳು, ಸುಮಾರು 50 ಇನ್ಸ್‌ಪೆಕ್ಟರ್‌ಗಳು, 150 ಸಬ್-ಇನ್‌ಸ್ಪೆಕ್ಟರ್‌ಗಳು ಮತ್ತು ಹೆಚ್ಚಿನ ಸಂಖ್ಯೆಯ ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ.
ಇದಷ್ಟೆ ಅಲ್ಲದೇ, ಅಯೋಧ್ಯೆಯಲ್ಲಿ ಪಿಎಸಿ ಮತ್ತು ಅರೆಸೈನಿಕ ಪಡೆಗಳ ಐದು ಕಂಪನಿಗಳನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್‌ಗಳ ಬಳಕೆಯನ್ನು ಸಹ ಹೆಚ್ಚಿಸಲಾಗಿದೆ. ವೈಮಾನಿಕ ಬೆದರಿಕೆಗಳನ್ನು ತಡೆಗಟ್ಟಲು ಪ್ರಮುಖ ಸ್ಥಳಗಳಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಪ್ರತಿಯೊಂದು ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net