ಪಶ್ಚಿಮ ಏಷ್ಯಾ ಬಿಕ್ಕಟ್ಟು; ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಭಾರತದ ಸನ್ನದ್ಧತೆಯ ಉನ್ನತ ಮಟ್ಟದ ಸಭೆ | Rajnath Singh

Rajnath Singh | ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಭಾರತದ ಸನ್ನದ್ಧತೆಯ ಉನ್ನತ ಮಟ್ಟದ ಸಭೆ
Rajnath Singh | ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಭಾರತದ ಸನ್ನದ್ಧತೆಯ ಉನ್ನತ ಮಟ್ಟದ ಸಭೆ
Published on
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಅಸ್ಥಿರ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಅನೌಪಚಾರಿಕ ಸಚಿವರ ಗುಂಪು (IGoM) ಶನಿವಾರ ನವದೆಹಲಿಯಲ್ಲಿ ಮಹತ್ವದ ಸಭೆ ನಡೆಸಿತು. ಸಂಘರ್ಷದಿಂದ ಉಂಟಾಗಬಹುದಾದ ಜಾಗತಿಕ ಪೂರೈಕೆ ಏರುಪೇರುಗಳನ್ನು ಎದುರಿಸಲು ಭಾರತದ ಸನ್ನದ್ಧತೆ ಮತ್ತು ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಪಶ್ಚಿಮ ಏಷ್ಯಾದ ಪರಿಸ್ಥಿತಿಯು ಅನಿಶ್ಚಿತತೆಯಿಂದ ಕೂಡಿದ್ದು, ಭಾರತವು ಯಾವುದೇ ರೀತಿಯ ಹೊಸ ಉಲ್ಬಣವನ್ನು ಎದುರಿಸಲು ಸಿದ್ಧವಾಗಿರಬೇಕು ಎಂದು ರಕ್ಷಣಾ ಸಚಿವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಘರ್ಷದಿಂದ ಉಂಟಾಗುವ ಸಂಭಾವ್ಯ ಅಪಾಯಗಳನ್ನು ತಗ್ಗಿಸಲು ತ್ವರಿತ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಂತರರಾಷ್ಟ್ರೀಯ ಸಮುದ್ರ ಮಾರ್ಗಗಳಲ್ಲಿನ ಅಸ್ಥಿರತೆಯ ನಡುವೆಯೂ ಭಾರತದ ಆಮದು-ರಫ್ತು ಚಟುವಟಿಕೆಗಳು ಸುಗಮವಾಗಿ ನಡೆಯಲು ಸರ್ಕಾರವು 12,980 ಕೋಟಿ ರೂ.ಗಳ ಸಾರ್ವಭೌಮ ಖಾತರಿಯೊಂದಿಗೆ ಭಾರತ್ ಸಮುದ್ರ ವಿಮಾ ಸಂಗ್ರಹಣೆ ರಚನೆಗೆ ಅನುಮೋದನೆ ನೀಡಿದೆ. ಈ ನಿರ್ಧಾರವು ಭಾರತೀಯ ಬಂದರುಗಳಿಗೆ ಸರಕು ಸಾಗಿಸುವ ಹಡಗುಗಳಿಗೆ ಕೈಗೆಟುಕುವ ಮತ್ತು ನಿರಂತರ ವಿಮಾ ರಕ್ಷಣೆಯನ್ನು ಖಚಿತಪಡಿಸಲಿದ್ದು, ದೇಶದ ಕಡಲ ವ್ಯಾಪಾರಕ್ಕೆ ಬಲ ನೀಡಲಿದೆ.
ಜಾಗತಿಕ ಪೂರೈಕೆ ಆಘಾತದ ಹೊರತಾಗಿಯೂ, ಭಾರತವು ಸಮರ್ಪಕ ಇಂಧನ ದಾಸ್ತಾನು ಹೊಂದಿದೆ ಎಂದು ಸಭೆಗೆ ತಿಳಿಸಲಾಯಿತು. ಪ್ರಸ್ತುತ ದೇಶದಲ್ಲಿ 60 ದಿನಗಳಿಗೂ ಹೆಚ್ಚು ಕಾಲಕ್ಕೆ ಸಾಕಾಗುವಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹವಿದ್ದು, ಹಾರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆ ತಗ್ಗಿಸಲು ಅಮೆರಿಕ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಂದ ಆಮದು ಮೂಲಗಳನ್ನು ವೈವಿಧ್ಯಗೊಳಿಸಲಾಗಿದೆ.
ಇಂಧನ ಭದ್ರತೆಯ ಜೊತೆಗೆ ದೇಶದ ಕೃಷಿ ವಲಯಕ್ಕೆ ಪೆಟ್ಟಾಗದಂತೆ ಸಮರ್ಪಕ ರಸಗೊಬ್ಬರ ದಾಸ್ತಾನು ಕಾಯ್ದುಕೊಳ್ಳಲಾಗಿದೆ. ಯೂರಿಯಾ ಮತ್ತು ಡಿಎಪಿ ಸೇರಿದಂತೆ ಸುಮಾರು 47.50 ಲಕ್ಷ ಟನ್ ರಸಗೊಬ್ಬರ ಸಂಗ್ರಹವಿದ್ದು, ಕಾಳಸಂತೆ ತಡೆಯಲು ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್ ತಿಂಗಳೊಂದರಲ್ಲೇ ರಾಜ್ಯಗಳು ಸಾವಿರಾರು ದಾಳಿಗಳನ್ನು ನಡೆಸಿ ಅಕ್ರಮಗಳ ವಿರುದ್ಧ ಎಫ್‌ಐಆರ್ ದಾಖಲಿಸಿವೆ. ಇತ್ತ ಗ್ರಾಹಕ ಮಾರುಕಟ್ಟೆಯಲ್ಲಿ ಆಹಾರ ಸರಕುಗಳ ಬೆಲೆಗಳು ಸ್ಥಿರವಾಗಿದ್ದು, ಎಲ್‌ಪಿಜಿ ಮೇಲಿನ ಒತ್ತಡ ಕಡಿಮೆ ಮಾಡಲು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಕೆಯನ್ನು ಸಕ್ರಿಯವಾಗಿ ಉತ್ತೇಜಿಸಲಾಗುತ್ತಿದೆ.
ವಿದೇಶಗಳಲ್ಲಿರುವ ಭಾರತೀಯ ವಲಸಿಗರ ಯೋಗಕ್ಷೇಮ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಗಲ್ಫ್ ಪ್ರದೇಶದ ದೇಶಗಳೊಂದಿಗೆ ನಿರಂತರ ಸಂವಹನ ಕಾಯ್ದುಕೊಳ್ಳುವಂತೆ ರಕ್ಷಣಾ ಸಚಿವರು ಸೂಚಿಸಿದರು. ಪರಿಸ್ಥಿತಿಯ ಪರಿಣಾಮವನ್ನು ತಗ್ಗಿಸಲು ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ವಿವಿಧ ದೇಶಗಳು ಅಳವಡಿಸಿಕೊಳ್ಳುತ್ತಿರುವ ಉತ್ತಮ ಅಭ್ಯಾಸಗಳನ್ನು ಅಧ್ಯಯನ ಮಾಡುವ ಮೂಲಕ ಭಾರತದ ಪ್ರತಿಕ್ರಿಯೆ ಚೌಕಟ್ಟನ್ನು ಮತ್ತಷ್ಟು ಬಲಪಡಿಸಬೇಕು ಎಂದು ರಾಜನಾಥ್ ಸಿಂಗ್ ಕರೆ ನೀಡಿದರು. ಈ ಉನ್ನತ ಮಟ್ಟದ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಹಲವು ಕೇಂದ್ರ ಸಚಿವರು ಭಾಗವಹಿಸಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net