'ನನಗೆ ಬಿಗ್ ಶಾಕ್​ ಆಯ್ತು'; ತಮಿಳುನಾಡು ಸಿಎಂ ವಿಜಯ್​ ಗೆಲುವಿನ ಬಗ್ಗೆ ರಜಿನಿಕಾಂತ್ ಅಚ್ಚರಿ ಹೇಳಿಕೆ! ​​

ತಮಿಳುನಾಡು ರಾಜಕೀಯ
ತಮಿಳುನಾಡು ರಾಜಕೀಯ
Published on

ಪ್ರಮುಖ ಮುಖ್ಯಾಂಶಗಳು

  • ವಿಜಯ್ ಚುನಾವಣೆ​ ಗೆಲುವಿನ ಬಗ್ಗೆ ಸೂಪರ್​ಸ್ಟಾರ್​ ರಜಿನಿಕಾಂತ್ ಓಪನ್ ಟಾಕ್​
  • ಮಾಜಿ ಸಿಎಂ ಎಂ.ಕೆ. ಸ್ಟಾಲಿನ್​ ಭೇಟಿ ಬಳಿಕ ಊಹಾಪೋಹಗಳು ಸೃಷ್ಟಿ
  • ವದಂತಿಗಳಿಗೆ ಖಂಡಿತ ನಿಜವಲ್ಲ ಎಂದು ಸ್ಪಷ್ಟನೆ ಕೊಟ್ಟ ರಜನಿಕಾಂತ್​
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಗೆಲುವಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದು ಬಿಟ್ಟರೆ, ಎಲ್ಲಿಯೂ ಬಹಿರಂಗವಾಗಿ ಮಾತನಾಡದ ಹಿರಿಯ ನಟ ರಜನಿಕಾಂತ್, ಕಡೆಗೂ ಕೆಲವು ವದಂತಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ.
ಭಾನುವಾರ (ಮೇ.17) ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತಲೈವಾ, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿ ಬಂದ ಮೇಲೆ ಸಾಕಷ್ಟು ಟೀಕೆಗಳು, ಇಲ್ಲ-ಸಲ್ಲದ ವಿಷಯಗಳು ಹುಟ್ಟಿಕೊಂಡವು. ಅಸಲಿಗೆ, ಇದೆಲ್ಲ ಸುಳ್ಳು. ಚುನಾವಣೆಯಲ್ಲಿ ಸೋತ ಕಾರಣ ಅವರನ್ನು ನೋಡಲು ಹೋಗಿದ್ದೆ ಅಷ್ಟೇ ಎಂದರು.
ನನಗೆ ಯಾರ ಮೇಲೂ ದ್ವೇಷವಿಲ್ಲ. ಮುಖ್ಯವಾಗಿ, ವಿಜಯ್ ಸಿಎಂ ಆಗುವುದನ್ನು ತಡೆಯಲು ನಾನು ಯಾವತ್ತೂ ಪ್ರಯತ್ನಿಸಿಲ್ಲ ಮತ್ತು ಎಲ್ಲಾ ಪಕ್ಷಗಳಲ್ಲಿಯೂ ನನಗೆ ಅಭಿಮಾನಿಗಳಿದ್ದಾರೆ. ನಾನೂ ಪಕ್ಷ ಕಟ್ಟಿದ್ದರೆ ಖಂಡಿತವಾಗಿಯೂ ಗೆಲ್ಲುತ್ತಿದ್ದೆ. ಆದರೆ, ರಾಜಕೀಯ ಪ್ರವೇಶಿಸುವ ಯಾವುದೇ ಯೋಚನೆ ಇಲ್ಲದಿರುವ ಕಾರಣ, ಅದ್ಯಾವುದಕ್ಕೂ ಮುಂದಾಗಿಲ್ಲ ಎಂದು ಹೇಳಿದರು.
ಸ್ಟಾಲಿನ್ ಅವರನ್ನು ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ. ಅವರು ಒಬ್ಬ ಒಳ್ಳೆಯ ಸ್ನೇಹಿತ. ಸ್ನೇಹಪರವಾಗಿ ಭೇಟಿಯಾಗಿದ್ದು, ಬೇರೇನೂ ಇಲ್ಲ. ಈ ಭೇಟಿಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ವಿಜಯ್ ಸಿಎಂ ಆಗಿದ್ದಕ್ಕೆ ನನಗೆ ತುಂಬ ಶಾಕ್​ ಮತ್ತು ಖುಷಿ ಎರಡೂ ಆಯಿತು. ವಿಜಯ್ ಸ್ವತಂತ್ರವಾಗಿ ನಿಂತು, ಎರಡು ಬಲಿಷ್ಠ ದ್ರಾವಿಡ ಪಕ್ಷಗಳ ವಿರುದ್ಧ ಗೆದ್ದು ಭಾರೀ ಮನ್ನಣೆ ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ನಾನು ಈ ಪತ್ರಿಕಾಗೋಷ್ಠಿ ನಡೆಸುತ್ತಿರಲಿಲ್ಲ. ಆದರೆ, ನನ್ನ ಮತ್ತು ಸ್ಟಾಲಿನ್​ ಭೇಟಿಯ ಬಳಿಕ ಊಹಾಪೋಹಗಳನ್ನು ಸೃಷ್ಟಿಸಲಾಯಿತು. ಇದನ್ನು ಹಾಗೆಯೇ ಬಿಟ್ಟರೆ, ಅದೇ ನಿಜ ಎಂದು ಸಾಬೀತಾಗುತ್ತದೆ ಎಂದು ಸ್ಪಷ್ಟನೆ ನೀಡಲು ಬಂದೆ. ನಮ್ಮಿಬ್ಬರ ಸ್ನೇಹ ರಾಜಕೀಯವನ್ನು ಮೀರಿದ್ದು. ಕುಲತ್ತೂರಿನಲ್ಲಿ ಎಂ.ಕೆ. ಸ್ಟಾಲಿನ್ ಸೋತಿದ್ದಕ್ಕೆ ನನಗೆ ತುಂಬ ಬೇಸರವಾಯಿತು. ಈ ರಜಿನಿಕಾಂತ್ ಅನಗತ್ಯವಾಗಿ ಬೇರೆ ಯಾವುದರ ಬಗ್ಗೆಯೂ ಮಾತನಾಡುವಷ್ಟು ಕೀಳು ಮಟ್ಟದ ವ್ಯಕ್ತಿಯಲ್ಲ" ಎಂದು ವದಂತಿ ಹರಡುವವರಿಗೆ ಮುಖಕ್ಕೆ ಹೊಡೆದಂತೆ ಹೇಳಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net