Rajeev Chandrasekhar | ಮುಸ್ಲಿಮರು ಬಿಜೆಪಿಗೆ ಮತ ನೀಡಲ್ಲ.. ಅವರಿಗೆ ಪ್ರಾತಿನಿಧ್ಯ ನೀಡುವುದು ಹೇಗೆ..? ಏನಿದು ರಾಜೀವ್ ಚಂದ್ರಶೇಖರ್ ಹೇಳಿದ ಕೋಳಿ-ಮೊಟ್ಟೆ ಸಮಸ್ಯೆ..?

Rajeev Chandrasekhar |  ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ (ಕೃಪೆ-ಪಿಟಿಐ)
Rajeev Chandrasekhar | ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ (ಕೃಪೆ-ಪಿಟಿಐ)
Published on
ತಿರುವನಂತಪುರಂ: ಮುಸ್ಲಿಂ ಸಮುದಾಯದ ಜನರು ಬಿಜೆಪಿಗೆ ಮತ ಹಾಕುವುದಿಲ್ಲವಾದ್ದರಿಂದ ಕೇಂದ್ರ ಸಚಿವ ಸಂಪುಟದಲ್ಲಿ ಆ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.
ಕೋಝಿಕ್ಕೋಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವರು, ಪಕ್ಷದಲ್ಲಿ ಮುಸ್ಲಿಂ ಸಂಸದರೇ ಇಲ್ಲದಿರುವುದೇ ಮುಸ್ಲಿಂ ಸಚಿವರ ಅನುಪಸ್ಥಿತಿಗೆ ನೇರ ಕಾರಣವಾಗಿದೆ, ಮುಸ್ಲಿಮರು ನಮಗೆ ಮತ ಹಾಕುತ್ತಿಲ್ಲ. ಆ ಸಮುದಾಯವು ನಮಗೆ ಬೆಂಬಲ ನೀಡದಿದ್ದರೆ ನಾವು ತಾನೇ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಈ ಪರಿಸ್ಥಿತಿಯನ್ನು ಕೋಳಿ-ಮೊಟ್ಟೆ ಸಮಸ್ಯೆ ಎಂದು ಕರೆದ ರಾಜೀವ್​ ಚಂದ್ರಶೇಖರ್​, ರಾಜಕೀಯ ವಿಶ್ವಾಸ ವರ್ಧನೆಯ ಪ್ರಕ್ರಿಯೆಯನ್ನು ಎಲ್ಲಿಂದ ಪ್ರಾರಂಭಿಸಬೇಕು ಎಂದು ಪ್ರಶ್ನಿಸಿದರು. ಎನ್‌ಡಿಎದಲ್ಲಿ ಈ ಹಿಂದೆ ಶಹನವಾಜ್ ಹುಸೇನ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ಸೇರಿದಂತೆ ಮುಸ್ಲಿಂ ಪ್ರತಿನಿಧಿಗಳನ್ನು ಹೊಂದಿತ್ತು, ಅವರಿಗೆ ಸ್ಥಾನಮಾನ ನೀಡಿತ್ತು ಎಂದು ಹೇಳಿದರು.
ಮುಸ್ಲಿಮರು ನಮಗೆ ಏಕೆ ಮತ ಹಾಕುತ್ತಿಲ್ಲ?, ಕಾಂಗ್ರೆಸ್‌ಗೆ ಏಕೆ ಮತ ನೀಡುತ್ತಿದ್ದಾರೆ? ಆ ಪಕ್ಷಕ್ಕೆ ಮತ ಹಾಕುವುದರಿಂದ ಏನಾದರೂ ಪ್ರಯೋಜನವಿದೆಯೇ ಎಂದು ಪ್ರಶ್ನಿಸಿದರು. ಕೇರಳದಲ್ಲಿ ಅಭಿವೃದ್ಧಿಯಾಗುತ್ತಿಲ್ಲ, ಒಂದು ವೇಳೆ ಸುಧಾರಣೆಯಾಗಿರುವುದೇ ಆದರೆ ಇಲ್ಲಿನ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುತ್ತಿರುವುದೇಕೆ..? ಸಾಲ ಮಾಡಿ ಕೇರಳದಲ್ಲಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಕೇರಳದಲ್ಲಿ ನಡೆಯುತ್ತಿರುವ ಅಭಿವೃದ್ದಿ ಯೋಜನೆಗಳಲ್ಲಿ ಶೇ. 95 ರಷ್ಟು ಮೋದಿ ಸರ್ಕಾರದ ಕೆಲಸ, ರಾಜ್ಯದಲ್ಲಿ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಹೇಳಿಕೊಂಡವರು ಏನನ್ನೂ ಸರಿಪಡಿಸಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಆಡಳಿತದಲ್ಲಿನ ಬದಲಾವಣೆಯ ಬಗ್ಗೆ ಅಲ್ಲ. ಆಡಳಿತ ಶೈಲಿಯಲ್ಲಿನ ಬದಲಾವಣೆಯ ಗುರಿಯನ್ನು ಹೊಂದಿದೆ. ರಾಜ್ಯದ ಪ್ರತಿಯೊಂದು ಭಾಗದಲ್ಲೂ 5 ವರ್ಷಗಳ ನೀಲನಕ್ಷೆ ಯೋಜನೆಯನ್ನು ಸಿದ್ಧಪಡಿಸಲಾಗುವುದು. ಮನೆ-ಮನೆಗೆ ಆಡಳಿತ ನೀಡುವುದೇ ಬಿಜೆಪಿಯ ಪ್ರಮುಖ ಗುರಿಯಾಗಿದೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದರು.
ಬಿಜೆಪಿ 21,065 ವಾರ್ಡ್‌ಗಳಲ್ಲಿ ಸ್ಪರ್ಧಿಸುತ್ತಿದ್ದು, ಸ್ಥಳೀಯ ಚುನಾವಣೆಗಳಲ್ಲಿ ಇದುವರೆಗೆ ಕಂಡರಿಯದ ಪ್ರಾತಿನಿಧ್ಯವನ್ನು ಹೊಂದಿದೆ. ಉಳಿದ ಸ್ಥಾನಗಳಿಗೆ ಭವಿಷ್ಯದಲ್ಲಿ ಅಭ್ಯರ್ಥಿಗಳನ್ನು ಹೂಡಲಿದ್ದು, ಇದು ಸೆಮಿಫೈನಲ್ ಅಲ್ಲ.. ಫೈನಲ್​​ ಎಂದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net