ತಲೆ ಇದ್ದರೆ ಸಾಲದು ಮೆದುಳಿರಬೇಕು ಅನ್ನೋದಕ್ಕೆ ಈ ಬಾಲಕಿಯ ಆದೊಂದು ಫೋನ್​ ಕಾಲ್​ ಸಾಕ್ಷಿ

ಸಾಂದರ್ಭಿಕ ಚಿತ್ರ (ಎಐ ರಚಿತ)
ಸಾಂದರ್ಭಿಕ ಚಿತ್ರ (ಎಐ ರಚಿತ)
Published on

ಪ್ರಮುಖ ಮುಖ್ಯಾಂಶಗಳು

  • ಅಪ್ರಾಪ್ತ ವಯಸ್ಸಿನ ಹುಡುಗಿಗೆ ಬಾಲ್ಯ ವಿವಾಹ ಮಾಡಲು ಹೆತ್ತವರ ನಿರ್ಧಾರ
  • ಈಗಲೇ ಮದುವೆ ಬೇಡ ಎಂದರೂ ಬಲವಂತದ ವಿವಾಹಕ್ಕೆ ಪೋಷಕರ ಪಟ್ಟು
  • ಆ ಒಂದೇ ಒಂದು ಫೋನ್ ಕರೆ ಎಲ್ಲವನ್ನೂ ಬದಲಿಸಿತು
ರಾಜಸ್ಥಾನ: ಇದು 6ಜಿ ಯುಗ. ಶರವೇಗದಲ್ಲಿ ಸಾಗುತ್ತಿರುವ ಸ್ಮಾರ್ಟ್​ಫೋನ್​ ಕಾಲದಲ್ಲಿ ಎಲ್ಲವೂ ಡಿಜಿಟಲ್​ ಆಯೋಮಯ. ಹಿರಿಯರಿಗಿಂತ ಪುಟ್ಟ ಮಕ್ಕಳೇ ಹೆಚ್ಚಾಗಿ ಫೋನ್ ಬಳಕೆ ಮಾಡುವುದು ದುರಂತ. ಗೇಮ್​, ವಿಡಿಯೋ, ಫೋಟೋ ಮತ್ತು ರೀಲ್ಸ್​ ನೋಡುವುದು, ಮಾಡುವುದು ಇದಕ್ಕಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್​ ಬಳಕೆ ಮಾಡುತ್ತಿರುವುದು ನಿಜಕ್ಕೂ ಕಳವಳಕಾರಿ. ಕೆಲವೇ ಕೆಲವು ಮಕ್ಕಳು ಮಾತ್ರ ಮೊಬೈಲ್​ನಿಂದ ಉತ್ತಮ ವಿಷಯಗಳ ಹುಡುಕಾಟ ಮತ್ತು ಕಾನೂನಿಗೆ ಸಂಬಂಧಿಸಿದ ವಿಚಾರಗಳನ್ನು ಅರಿತಿರುತ್ತಾರೆ. ಇಲ್ಲೊಬ್ಬಳು ಬಾಲಕಿ ಅಂತಹದ್ದೇ ಒಂದು ಕೆಲಸ ಮಾಡಿದ್ದು, ತಲೆ ಇದ್ದರೆ ಸಾಲದು, ಮೆದುಳಿರಬೇಕು ಎಂಬುದನ್ನು ಸಾಬೀತುಪಡಿಸಿದ್ದಾಳೆ.
ಆಟ-ಪಾಠ ಕಲಿಯುವ ವಯಸ್ಸಿನಲ್ಲಿ ಬಲವಂತದ ಬಾಲ್ಯ ವಿವಾಹ ಮಾಡಲು ಹೊರಟ ಹೆತ್ತವರ ನಿರ್ಧಾರಕ್ಕೆ ಸಿಟ್ಟಾದ ಬಾಲಕಿ, ಪೋಷಕರ ಆಮಿಷಗಳಿಗೆ ಹೆದರದೆ, ಮಕ್ಕಳ ಸಹಾಯವಾಣಿಗೆ ಕರೆ ಮಾಡುವ ಮೂಲಕ ನಿಶ್ಚಯವಾಗಿದ್ದ ಮದುವೆ ಸಮಾರಂಭಕ್ಕೆ ಅಧಿಕಾರಿಗಳಿಂದ ಎಳ್ಳು-ನೀರು ಬಿಡಿಸಿರುವುದು ಹಲವರ ಹುಬ್ಬೇರಿಸಿದೆ. 
ಇದೇ ಏಪ್ರಿಲ್​ 26ರಂದು ಮದುವೆ ನಿಶ್ಚಯವಾಗಿತ್ತು. ಎಷ್ಟೇ ಹೇಳಿದರೂ, ಬೇಡಿಕೊಂಡರೂ ಒಪ್ಪದ ಪೋಷಕರು, ಜಾಲಾವಾರ್‌ ಎಂಬ ಊರಿನಿಂದ ಬಂದ ಯುವಕನ ಜೊತೆಗೆ ಮಗಳನ್ನು ಮದುವೆ ಮಾಡಿ ಕಳುಹಿಸಲು ಸಕಲ ಸಿದ್ಧತೆಗಳನ್ನು ಮಾಡಿದ್ದರು. ಇನ್ನೂ ನಾನು ಕೇಳಿಕೊಂಡರೆ ಯಾವುದೇ ಪ್ರಯೋಜನ ಇಲ್ಲ ಎಂಬುದನ್ನು ಅರಿತ ಬಾಲಕಿ, ಹೆಚ್ಚು ಸಮಯ ವ್ಯರ್ಥ ಮಾಡದೆ, ನೇರವಾಗಿ ಸರ್ಕಾರದ ಚೈಲ್ಡ್‌ಲೈನ್ ಇಂಡಿಯಾ ಫೌಂಡೇಷನ್‌ನ ಸಹಾಯವಾಣಿಗೆ ಫೋನ್ ಮಾಡಿ ಅಳಲು ತೋಡಿಕೊಂಡಿದ್ದಾಳೆ.
'ಅಂಕಲ್, ದಯವಿಟ್ಟು ನನ್ನ ಬಾಲ್ಯ ವಿವಾಹವನ್ನು ನಿಲ್ಲಿಸಿ. ನಾನು ಎಷ್ಟೇ ಹೇಳಿದರೂ, ನಮ್ಮ ತಂದೆ-ತಾಯಿ ಇದಕ್ಕೆ ಒಪ್ಪುತ್ತಿಲ್ಲ. ಮದುವೆ ವಿರೋಧಿಸಿದ್ದಕ್ಕೆ ನನಗೆ ದೈಹಿಕವಾಗಿ ಹಿಂಸೆ ನೀಡಿದ್ದಾರೆ' ಎಂದು ಅಧಿಕಾರಿಗಳ ಬಳಿ ದುಃಖ ವ್ಯಕ್ತಪಡಿಸಿದ್ದಾಳೆ. ಮಾಹಿತಿ ಸಿಕ್ಕ ತಕ್ಷಣವೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಹಕ್ಕುಗಳ ಇಲಾಖೆ ಮತ್ತು ಒಂದು ಸ್ವಯಂ ಸೇವಾ ಸಂಸ್ಥೆಯ ತಂಡಗಳು ಬಾಲಕಿಯಿದ್ದ ಸ್ಥಳಕ್ಕೆ ಆಗಮಿಸಿ, ಮದುವೆಯನ್ನು ತಡೆದಿವೆ. 
ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ಬಾಲಕಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, ಕೌನ್ಸೆಲಿಂಗ್ ಕೊಡಿಸಿ, ತಾತ್ಕಾಲಿಕವಾಗಿ ಸರ್ಕಾರಿ ಬಾಲಕಿಯರ ಹಾಸ್ಟೆಲ್​ಗೆ ಸ್ಥಳಾಂತರಿಸಲಾಗಿದೆ. ಇಂತಹ ಕುರುಡು ಸಂಪ್ರದಾಯಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಥಳೀಯರಿಗೆ ಎಚ್ಚರಿಕೆ ಕೂಡ ನೀಡಲಾಯಿತು.
ದೇಶವ್ಯಾಪಿ ಪ್ರೋಹಿಬಿಷನ್ ಆಫ್ ಚೈಲ್ಡ್ ಮ್ಯಾರೇಜ್ ಆಕ್ಟ್, 2006ರ ಅಡಿಯಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದೆ. ಆದರೂ ರಾಜಸ್ಥಾನದಲ್ಲಿ ಪ್ರತಿ ವರ್ಷ ಅಕ್ಷಯ ತೃತೀಯ (ಆಖಾ ತೀಜ್) ಸಂದರ್ಭದಲ್ಲಿ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಮದುವೆಗಳು ನಡೆಯುತ್ತಿರುವುದು ಕಳವಳಕಾರಿ. ಅಸಲಿಗೆ, ಗ್ರಾಮೀಣ ಪ್ರದೇಶಗಳಲ್ಲಿ ಮದುವೆಗೆ ಅತ್ಯಂತ ಶುಭ ದಿನವೆಂದು ಭಾವಿಸಲಾಗಿದೆ. ಹೀಗಾಗಿ, ಬಾಲ್ಯ ವಿವಾಹಗಳು ಹೆಚ್ಚು ಎನ್ನಲಾಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net