ರಾಹುಲ್ ವಿದೇಶಿ ಪ್ರವಾಸ ವಿವಾದ; ಮೋದಿ ವೈಫಲ್ಯದಿಂದ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಹತಾಶ ಪ್ರಯತ್ನ: ಕಾಂಗ್ರೆಸ್ ತಿರುಗೇಟು | Congress

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on
ನವದೆಹಲಿ: ರಾಹುಲ್ ಗಾಂಧಿಯವರ ವಿದೇಶಿ ಪ್ರವಾಸದ ವೆಚ್ಚದ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್(Congress), ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಆಡಳಿತ ವೈಫಲ್ಯವನ್ನು ಮರೆಮಾಚಲು ಬಿಜೆಪಿ ಹತಾಶ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
ಗುರುವಾರ(ಮೇ 14) ರಾಹುಲ್ ಗಾಂಧಿಯವರ 22 ವರ್ಷದ ವಿದೇಶ ಪ್ರವಾಸದ ಹಣದ ಮೂಲಗಳನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿರುವ ಬಿಜೆಪಿ, ಅವರ ವಾರ್ಷಿಕ ಆದಾಯ ಮತ್ತು ವಿದೇಶ ಪ್ರವಾಸಕ್ಕೆ ಖರ್ಚು ಮಾಡಿದ ಹಣದ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದು ಆರೋಪಿಸಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ವಿದೇಶಾಂಗ ನೀತಿ ಸಂಪೂರ್ಣವಾಗಿ ನಾಶವಾಗಿದ್ದು, ಅದರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ರಾಹುಲ್ ಗಾಂಧಿಯವರ ವಿದೇಶಿ ಪ್ರವಾಸದ ಕುರಿತು ಆರೋಪ ಮಾಡುತ್ತಿದೆ ಎಂದಿದ್ದಾರೆ.
ಇವೆಲ್ಲವೂ ಬಿಜೆಪಿಯ ಸಂಬಿತ್ ಪಾತ್ರಾ ಸೃಷ್ಟಿಸುತ್ತಿರುವ ಗೊಂದಲಗಳು. ನಿಜವಾದ ಸಮಸ್ಯೆ ಎಂದರೆ ದೇಶವನ್ನು ಕಾಡುತ್ತಿರುವ ಆರ್ಥಿಕ ಕುಸಿತ. ವಿದೇಶಾಂಗ ನೀತಿಯಲ್ಲಿನ ಹಿನ್ನಡೆಗಳು. ಅವೇ ನಿಜವಾದ ಸಮಸ್ಯೆಗಳು. ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯುವ ಸಲುವಾಗಿ ಪಾತ್ರ, ರಾಹುಲ್ ಗಾಂಧಿಯವರ ವಿದೇಶಿ ಪ್ರವಾಸದ ವೆಚ್ಚದ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರ ಅವರು ಇದಕ್ಕಿಂತ ಉತ್ತಮ ವಿಷಯಗಳನ್ನು ಹುಡುಕಿಕೊಂಡು ಎತ್ತಬೇಕು ಎಂದು ಕಿಡಿಕಾರಿದ್ದಾರೆ.
ಸಂಸದ ಮಾಣಿಕ್ಯಂ ಟ್ಯಾಗೋರ್ ಸಹ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಪ್ರತಿದಿನ ಅಪಪ್ರಚಾರ ನಡೆಸುವ ಬದಲು, ನಿರುದ್ಯೋಗ, ಹಣದುಬ್ಬರ, ಬಳಕೆ ಕುಸಿತ, ಗಡಿ ವೈಫಲ್ಯ ಮತ್ತು ದುರ್ಬಲಗೊಳ್ಳುತ್ತಿರುವ ಆರ್ಥಿಕತೆಯ ಕುರಿತು ಬಿಜೆಪಿ ಮೊದಲು ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net