ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಕೊನೆಗೂ ಅನುಮತಿ!...ಟ್ರಸ್ಟ್ ವಿಧಿಸಿದ ಷರತ್ತುಗಳೇನು ಗೊತ್ತಾ..? | Chhatron Ki Goonj

Chhatron Ki Goonj | ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಕೊನೆಗೂ ಅನುಮತಿ!.
Chhatron Ki Goonj | ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಕೊನೆಗೂ ಅನುಮತಿ!.
Published on

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕೆಪಿ ಗ್ರೌಂಡ್‌ನಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಛಾತ್ರೋನ್ ಕಿ ಗೂಂಜ್ (Chhatron Ki Goonj) ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ಕಾಯಸ್ಥ ಪಾಠಶಾಲಾ (ಕೆಪಿ) ಟ್ರಸ್ಟ್ ರದ್ದುಗೊಳಿಸಿದ ಮರುದಿನವೇ, ಕೆಲವು ಷರತ್ತುಗಳೊಂದಿಗೆ ಕಾರ್ಯಕ್ರಮ ನಡೆಸಲು ಮತ್ತೆ ಅನುಮತಿ ನೀಡಿದೆ.

ಸ್ಥಳದ ಮಾಲೀಕರ ಮೇಲೆ ಒತ್ತಡ ಹೇರಿ ಆಗಸ್ಟ್ 8ರ ಕಾರ್ಯಕ್ರಮವನ್ನು ರದ್ದುಗೊಳಿಸಲು ಯುಪಿ ಸರ್ಕಾರ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುವುದರೊಂದಿಗೆ ರಾಜಕೀಯ ಗದ್ದಲ ಸೃಷ್ಟಿಯಾದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.
ಕೆಪಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಜಿತೇಂದ್ರ ನಾಥ್ ಚೌಧರಿ ಪಿಟಿಐ ಜೊತೆ ಮಾತನಾಡಿ, ಕಾನೂನು ತಜ್ಞರ ಸಲಹೆ ಪಡೆದ ನಂತರ ಆಯೋಜಕರಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಕೆಪಿ ಕಾಲೇಜಿನಲ್ಲಿ ಬೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುವುದು ಈ ಷರತ್ತುಗಳಲ್ಲಿ ಸೇರಿದೆ. ಕೆಪಿ ಕಾಲೇಜು ಮೈದಾನವನ್ನು ಕ್ರೀಡೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು ಎಂದು ನಿರ್ಬಂಧಿಸಿರುವ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ಟ್ರಸ್ಟ್ ಬುಧವಾರ ತನ್ನ ಪೂರ್ವಾನುಮತಿಯನ್ನು ಹಿಂಪಡೆದಿತ್ತು.

ಕಾಂಗ್ರೆಸ್​ ನಾಯಕರ ಆರೋಪವೇನು..?

ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತಿರುವುದನ್ನು ಸಹ ಅದು ಉಲ್ಲೇಖಿಸಿತ್ತು. ಇದಕ್ಕೂ ಮುನ್ನ ಗುರುವಾರ, ರಾಹುಲ್ ಗಾಂಧಿ ಛಾತ್ರೋನ್ ಕಿ ಗೂಂಜ್ ಅಭಿಯಾನದ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಎತ್ತುತ್ತಿರುವುದರಿಂದ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಕಾರ್ಯಕ್ರಮ ತಡೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್, ಸಂಸದರಾದ ಕಿಶೋರಿ ಲಾಲ್ ಶರ್ಮಾ, ತನುಜ್ ಪುನಿಯಾ ಮತ್ತು ಇಮ್ರಾನ್ ಮಸೂದ್, ಕಾರ್ಯಕ್ರಮ ರದ್ದುಗೊಳಿಸುವಂತೆ ಆಡಳಿತ ಮಂಡಳಿಯು ಸ್ಥಳದ ಮಾಲೀಕರನ್ನು ಬೆದರಿಸುತ್ತಿದೆ ಎಂದು ಪ್ರತಿಪಾದಿಸಿದರು. ಈ ಸಂವಾದಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು ಕಾರ್ಯಕ್ರಮ ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಗೌತಮ್ ಸ್ಪಷ್ಟಪಡಿಸಿದರು.
ಈ ಸಂವಾದಾತ್ಮಕ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು ದೇಶಾದ್ಯಂತದ ವಿದ್ಯಾರ್ಥಿಗಳು ಇದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕಾರ್ಯಕ್ರಮವು ನಿಗದಿತ ಸ್ಥಳದಲ್ಲೇ ನಡೆಯಲಿದೆ ಎಂದು ಗೌತಮ್ ಹೇಳಿದರು. ಪ್ರಯಾಗ್‌ರಾಜ್‌ನಲ್ಲಿ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಕೂಡ ಅನುಮತಿ ರದ್ದಾಗಿದ್ದರೂ ರಾಹುಲ್ ಗಾಂಧಿ ಅವರ ವಿದ್ಯಾರ್ಥಿ ಸಂವಾದ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದ್ದರು.

ರಾಹುಲ್​ ವೇಳಾಪಟ್ಟಿ ಹೀಗಿದೆ!....

ಅಜಯ್ ರೈ ಹಂಚಿಕೊಂಡ ರಾಹುಲ್​ ವೇಳಾಪಟ್ಟಿಯ ಪ್ರಕಾರ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗಸ್ಟ್ 8ರಂದು ಮಧ್ಯಾಹ್ನ 2 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಯಿಂದ ಹೊರಟು, ಮಧ್ಯಾಹ್ನ 3.30ಕ್ಕೆ ಪ್ರಯಾಗ್‌ರಾಜ್ ತಲುಪಲಿದ್ದಾರೆ. ನಂತರ ಆನಂದ ಭವನಕ್ಕೆ ಭೇಟಿ ನೀಡಿ, ಸಂಜೆ 6ರಿಂದ ರಾತ್ರಿ 8.30ರವರೆಗೆ ಕೆಪಿ ಗ್ರೌಂಡ್‌ನಲ್ಲಿ ನಡೆಯುವ ವಿದ್ಯಾರ್ಥಿ ಸಂವಾದದಲ್ಲಿ ಭಾಗವಹಿಸಿ, ತಡರಾತ್ರಿ ದೆಹಲಿಗೆ ಹಿಂತಿರುಗಲಿದ್ದಾರೆ.
ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ಕಾರ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಗೌತಮ್, ಕಾಂಗ್ರೆಸ್ ಎಲ್ಲಾ ಕಾನೂನು ಅಗತ್ಯತೆಗಳಿಗೆ ಅನುಗುಣವಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಮತ್ತು ಉತ್ತರ ಪ್ರದೇಶ ಸರ್ಕಾರ ಹಾಗೂ ಪ್ರಯಾಗ್‌ರಾಜ್ ಆಡಳಿತ ಇದಕ್ಕೆ ಅಡ್ಡಿಪಡಿಸಬಾರದು ಎಂದು ಆಗ್ರಹಿಸಿದರು. ರಾಹುಲ್ ಗಾಂಧಿ ಪರವಾಗಿ ಯುವಕರ ಬೆಂಬಲ ಹೆಚ್ಚುತ್ತಿರುವುದಕ್ಕೆ ಹೆದರಿ ಬಿಜೆಪಿ ಕಾರ್ಯಕ್ರಮ ತಡೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ತನುಜ್ ಪುನಿಯಾ ಆರೋಪಿಸಿದ್ದು, ವಿದ್ಯಾರ್ಥಿಗಳ ಮೇಲಾಗುವ ಸಮಸ್ಯೆಗಳ ವಿರುದ್ಧ ಪಕ್ಷ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net