ಸಂವಿಧಾನದ ಮೇಲಿನ ದಾಳಿಗೆ ಬ್ರೇಕ್​... ಹಳೇ ಮಸೂದೆಗೆ ಇಂದೇ ಬೆಂಬಲ ನೀಡುತ್ತೇವೆ ಅಂದ್ರು ರಾಹುಲ್​ ಗಾಂಧಿ | Rahul Gandhi

Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Published on
ದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ನಡೆದ ಐತಿಹಾಸಿಕ ಮತದಾನದಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳು ಅಗತ್ಯವಿದ್ದ ಮೂರನೇ ಎರಡರಷ್ಟು (2/3) ಬಹುಮತ ಪಡೆಯುವಲ್ಲಿ ವಿಫಲವಾಗಿ ಸೋಲನ್ನಪ್ಪಿದ್ದು, ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ನಾವು ಸಂವಿಧಾನದ ಮೇಲಿನ ದಾಳಿಯನ್ನು ಯಶಸ್ವಿಯಾಗಿ ತಡೆದಿದ್ದೇವೆ ಎಂದರು.
ಮಸೂದೆ ಸೋಲಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಸಂವಿಧಾನದ ತತ್ವಗಳ ಮೇಲೆ ನಡೆದ ದಾಳಿಯನ್ನು ನಾವು ತಡೆದಿದ್ದು, ಇದು ಕೇವಲ ಮಹಿಳಾ ಮೀಸಲಾತಿ ಮಸೂದೆಯಾಗಿರಲಿಲ್ಲ, ಬದಲಾಗಿ ಭಾರತದ ರಾಜಕೀಯ ಮತ್ತು ಚುನಾವಣಾ ರಚನೆಯನ್ನು ಬದಲಿಸುವ ಹಂಚಿಕೆಯಾಗಿತ್ತು ಎಂದು ಆರೋಪಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಿಜವಾಗಿಯೂ ಮಹಿಳಾ ಮೀಸಲಾತಿ ನೀಡುವ ಆಸಕ್ತಿ ಇದ್ದರೆ, 2023ರ ಹಳೆಯ ಮಸೂದೆಯನ್ನು ಇಂದೇ ಮಂಡಿಸಿ ಜಾರಿಗೆ ತರಲಿ. ಇಡೀ ವಿರೋಧ ಪಕ್ಷವು ಅದಕ್ಕೆ ಬೆಂಬಲ ನೀಡುತ್ತದೆ ಮತ್ತು ತಕ್ಷಣವೇ ಮೀಸಲಾತಿ ಜಾರಿಯಾಗುವುದನ್ನು ನಾವು ಖಚಿತಪಡಿಸುತ್ತೇವೆ ಎಂದು ಸವಾಲು ಹಾಕಿದರು.

ಇದು ಪ್ರಜಾಪ್ರಭುತ್ವದ ಜಯ ಎಂದ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ಕ್ಷೇತ್ರ ಪುನರ್ವಿಂಗಡಣೆಯನ್ನು ಮಹಿಳಾ ಮೀಸಲಾತಿಯೊಂದಿಗೆ ಬೆಸೆಯುವ ಸರ್ಕಾರದ ಕ್ರಮವು ಆರಂಭದಿಂದಲೇ ಒಪ್ಪುವಂತಿರಲಿಲ್ಲ. ಆದ್ದರಿಂದಲೇ ಈ ಮಸೂದೆ ಪತನಗೊಂಡಿದೆ. ಇದು ದೇಶದ ಪ್ರಜಾಪ್ರಭುತ್ವಕ್ಕೆ ಸಿಕ್ಕ ದೊಡ್ಡ ಜಯವಾಗಿದ್ದು, ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುವ ಸರ್ಕಾರದ ಕಾಳಜಿಯನ್ನು ಪ್ರಶ್ನಿಸಿದ ಅವರು, ಹಾಥರಸ್, ಉನ್ನಾವೋ ಮತ್ತು ಮಣಿಪುರ ಘಟನೆಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದವರು ಈಗ ಮಹಿಳಾ ವಿರೋಧಿ ಮನಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಮಸೂದೆಯ ಸೋಲಿನಿಂದಾಗಿ 2029ರ ವೇಳೆಗೆ ಮಹಿಳಾ ಮೀಸಲಾತಿ ಜಾರಿಗೆ ತರುವ ಸರ್ಕಾರದ ಯೋಜನೆಗೆ ಅಡ್ಡಿಯಾಗಿದ್ದು, ಇದು ಮುಂಬರುವ ದಿನಗಳಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಮತ್ತಷ್ಟು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡುವುದು ನಿಶ್ಚಿತ.

ಮಸೂದೆಗೆ ಸೋಲು..

ಸಂಸತ್ತಿನಲ್ಲಿ ನಡೆದ ಮತದಾನದ ವಿವರಗಳ ಪ್ರಕಾರ, ಚರ್ಚೆಯ ಬಳಿಕ ನಡೆದ ಮತದಾನದಲ್ಲಿ ಒಟ್ಟು 528 ಸದಸ್ಯರು ಭಾಗವಹಿಸಿದ್ದರು. ಈ ಪೈಕಿ 298 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 230 ಸದಸ್ಯರು ಮಸೂದೆಯನ್ನು ವಿರೋಧಿಸಿ ಮತ ಹಾಕಿದರು. ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಅಂಗೀಕಾರವಾಗಲು ಸದನದಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಪೈಕಿ ಕನಿಷ್ಠ ಮೂರನೇ ಎರಡರಷ್ಟು (ಅಂದರೆ ಸುಮಾರು 326 ಮತಗಳು) ಬೆಂಬಲದ ಅಗತ್ಯವಿತ್ತು. ಆದರೆ ಸರ್ಕಾರದ ಪರವಾಗಿ ಚಲಾವಣೆಯಾಗಿದ್ದು 298 ಮತಗಳು.
ಇಂಡಿಯಾ ಕೂಟದ ಬಹುತೇಕ ಎಲ್ಲಾ ಪಕ್ಷಗಳು ಈ ಮಸೂದೆಗಳನ್ನು ಒಗ್ಗಟ್ಟಿನಿಂದ ವಿರೋಧಿಸಿದ್ದು ಈ ಸೋಲಿಗೆ ಪ್ರಮುಖ ಕಾರಣವಾಗಿದೆ. ಹೊಸ ಜನಗಣತಿಯಿಲ್ಲದೆ ಕ್ಷೇತ್ರ ಪುನರ್ವಿಂಗಡಣೆ ಮಾಡುವುದು ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಇದು ಒಬಿಸಿ ಸಮುದಾಯವನ್ನು ನಿರ್ಲಕ್ಷಿಸುವ ಪ್ರಯತ್ನ ಎಂದು ವಿರೋಧ ಪಕ್ಷಗಳು ವಾದಿಸಿದವು. 2029ರ ಚುನಾವಣೆಯಿಂದ ಮೀಸಲಾತಿ ಜಾರಿಯಾಗಲಿದೆ ಎಂಬ ಸರ್ಕಾರದ ಪ್ರಸ್ತಾಪವನ್ನು ಚುನಾವಣಾ ಗಿಮಿಕ್ ಎಂದು ಕರೆದಿದ್ದ ವಿಪಕ್ಷಗಳು, ಅಂತಿಮವಾಗಿ ಸದನದಲ್ಲಿ ಮಸೂದೆಯನ್ನು ತಡೆಯುವಲ್ಲಿ ಯಶಸ್ವಿಯಾಗಿವೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net