

ನವದೆಹಲಿ: ಚುನಾವಣಾ ಅಕ್ರಮಗಳ ಆರೋಪ ಹಾಗೂ ಮುಕ್ತ-ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಯನ್ನು ಒತ್ತಾಯಿಸಿ ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ಬೆನ್ನಲ್ಲೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದೀಗ ಸುಪ್ರೀಂ ಕೋರ್ಟ್ ಪ್ರವೇಶಿಸಿದ್ದಾರೆ.
ಚುನಾವಣಾ ಆಯೋಗದ (ECI) ವಿರುದ್ಧ ವೋಟ್ ಚೋರಿ (ಮತ ಕಳವು) ಗಂಭೀರ ಆರೋಪ ಹೊರಿಸಿರುವ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಈ ನಿಟ್ಟಿನಲ್ಲಿ, ಬೃಹತ್ ಪ್ರತಿಭಟನೆಯಲ್ಲಿ ಒಂದಾದ 'ಇಂಡಿಯಾ' ಒಕ್ಕೂಟದ ನಾಯಕರು, ರಾಷ್ಟ್ರ ರಾಜಧಾನಿ ದೆಹಲಿಯ ಕನ್ನಾಟ್ ಪ್ಲೇಸ್ ಹಾಗೂ ಮಂಡಿ ಹೌಸ್ ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಸೇರಿ 'ಚಲೋ ದೆಹಲಿ - ಪ್ರಜಾಪ್ರಭುತ್ವಕ್ಕಾಗಿ ಮಾರ್ಚ್' ಬ್ಯಾನರ್ ಅಡಿಯಲ್ಲಿ ಬೃಹತ್ ರ್ಯಾಲಿ ನಡೆಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಎಐಎಸ್‌ಎ (AISA) ಮುಖ್ಯಸ್ಥೆ ನೇಹಾ ಬೋರಾ ಅವರ ನೇತೃತ್ವದಲ್ಲಿ ಕನ್ನಾಟ್ ಪ್ಲೇಸ್-ಬಾರಾಖಂಬಾ ರಸ್ತೆಯ ಜಂಕ್ಷನ್‌ನಿಂದ ಸುಪ್ರೀಂ ಕೋರ್ಟ್ ವರೆಗೆ ಪ್ರತಿಭಟನಾ ರ್ಯಾಲಿಯನ್ನು ಕೈಗೊಳ್ಳಲಾಯಿತು. ಪ್ರತಿಭಟನೆಗೆ ಪೊಲೀಸರು ಅಡ್ಡಿ ಮಾಡುತ್ತಿದ್ದಾರೆ ಎಂದು ಸಿಟ್ಟಾದ ರಾಹುಲ್ ಗಾಂಧಿ, ವಾಹನದ ಮೇಲೇರಿ ಆಕ್ರೋಶ ಹೊರಹಾಕಿದರು. ರಾಹುಲ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖ ವಿಪಕ್ಷ ನಾಯಕರು ಸಾಥ್ ನೀಡಿದರು.
ಮಾರ್ಚ್ ಮೂಲಕ ಪ್ರತಿಭಟನೆ ನಡೆಸಿದ ರಾಹುಲ್ ಗಾಂಧಿ ನೇತೃತ್ವದ ತಂಡವು ಇದೀಗ ನೇರವಾಗಿ ಸುಪ್ರೀಂ ಕೋರ್ಟ್‌ಗೆ ತಲುಪಿದ್ದು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ (Special Intensive Revision - SIR) ಮಧ್ಯಂತರ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದೆ. ಈ ಹಿಂದೆ, ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ (ಸಿಜೆಐ) ಸಲ್ಲಿಸಲಾಗಿದ್ದ ಮನವಿಯ ಮುಂದುವರಿದ ಭಾಗವಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದ್ದು, ಚುನಾವಣಾ ಆಯೋಗದ ವಿರುದ್ಧದ ತಮ್ಮ ಹೋರಾಟವನ್ನು ವಿಪಕ್ಷಗಳು ಕಾನೂನುಬದ್ಧವಾಗಿ ಮತ್ತಷ್ಟು ತೀವ್ರಗೊಳಿಸಿವೆ.