Putin Dinner | ರಾಹುಲ್​, ಖರ್ಗೆಗೆ ಇಲ್ಲದ ಔತಣಕೂಟದ ಆಮಂತ್ರಣ ಶಶಿ ತರೂರ್​ಗೆ..? ಏನಿದು ಸರ್ಕಾರದ ಲೆಕ್ಕಾಚಾರ!

ಕಾಂಗ್ರೆಸ್​ ನಾಯಕರುಗಳು
ಕಾಂಗ್ರೆಸ್​ ನಾಯಕರುಗಳು
Published on
ದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​​ರ ಎರಡು ದಿನಗಳ ಭಾರತ ಭೇಟಿಯ ಗೌರವಾರ್ಥವಾಗಿ ಇಂದು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿರುವ ಔತಣಕೂಟಕ್ಕೆ ಸಂಸತ್ತಿನ ಎರಡೂ ಮನೆಯ ವಿಪಕ್ಷ ನಾಯಕರುಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಗೆ ಆಹ್ವಾನ ನೀಡದ ವಿಷಯವಾಗಿ ನಡೆದಿರುವ ಆರೋಪ, ಪ್ರತ್ಯಾರೋಪಗಳ ನಡುವೆ, ಇದಕ್ಕೆ ವ್ಯತಿರಿಕ್ತವೆಂಬಂತೆ ಕಾಂಗ್ರೆಸ್​ ಸಂಸದ ಶಶಿ ತರೂರ್​ಗೆ ಆಮಂತ್ರಣ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಹ್ವಾನ ವಿವಾದ ಮತ್ತು ಪ್ರತಿಕ್ರಿಯೆ...

ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಭೋಜನಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಗೆ ಆಹ್ವಾನ ಬಂದಿಲ್ಲ ಎನ್ನುವುದನ್ನು ಕಾಂಗ್ರೆಸ್ ಮೂಲಗಳು ದೃಢಪಡಿಸಿದ್ದು. ಈ ನಡೆ ಟೀಕೆಗೂ ಗುರಿಯಾಗಿದ್ದು, ಪ್ರಮುಖ ರಾಜತಾಂತ್ರಿಕ ಸಭೆಯಿಂದ ಪ್ರತಿಪಕ್ಷದ ನಾಯಕರುಗಳನ್ನು ಹೊರಗಿಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇತ್ತ ವಿದೇಶಾಂಗ ವ್ಯವಹಾರಗಳ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ, ಕಾಂಗ್ರೆಸ್​ ರೆಬೆಲ್​ ನಾಯಕ ಶಶಿ ತರೂರ್ ಅವರನ್ನು ಆಹ್ವಾನಿಸಲಾಗಿದೆ ಎಂದು ಬಲ್ಲ ಮೂಲಗಳು ದೃಢಪಡಿಸಿವೆ. ಆಹ್ವಾನಕ್ಕೆ ಯಾವುದೇ ತರಹದ ನಿಖರ ಕಾರಣಗಳು ತಿಳಿದುವಬಂದಿಲ್ಲವಾದರೂ, ತರೂರ್ ಅವರ ರಾಜತಾಂತ್ರಿಕ ಹಿನ್ನೆಲೆ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿನ ಒಳಗೊಳ್ಳುವಿಕೆ ಹಿನ್ನಲೆಯಲ್ಲಿ ಈ ಆಹ್ವಾನ ಬಂದಿರಬಹುದು ಎನ್ನಲಾಗಿದೆ.

ಶಶಿ ತರೂರ್ ರಾಜತಾಂತ್ರಿಕ ನಡೆ..

ಸಂಸದ ಶಶಿ ತರೂರ್ ಅವರಿಗಿರುವ ವ್ಯಾಪಕ ರಾಜತಾಂತ್ರಿಕ ಅನುಭವ, ವಿಶ್ವಸಂಸ್ಥೆಯ ಮಾಜಿ ಅಂಡರ್ ಸೆಕ್ರೆಟರಿ ಜನರಲ್ ಹುದ್ದೆಯೂ ಸೇರಿದಂತೆ, ಔತಣಕೂಟಕ್ಕೆ ಆಹ್ವಾನ ನೀಡಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ವಿದೇಶಾಂಗ ನೀತಿ ಚರ್ಚೆಯಲ್ಲಿ, ವಿಶೇಷವಾಗಿ ರಷ್ಯಾದೊಂದಿಗಿನ ಸಂಬಂಧಗಳಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಪ್ರತಿಪಾದಿಸಲು, ವಿಶೇಷವಾಗಿ ಆಪರೇಷನ್ ಸಿಂಧೂರ ನಂತರ, ತರೂರ್ ವಿದೇಶಗಳಿಗ ತೆರಳಿದ್ದ ಬಹುಪಕ್ಷ ನಿಯೋಗದ ನೇತೃತ್ವ ವಹಿಸಿದ್ದರು. ಪಹಲ್ಗಾಮ್ ದಾಳಿಯ ನಂತರ ರಾಜತಾಂತ್ರಿಕ ಪ್ರಯತ್ನಗಳ ಸಮಯದಲ್ಲಿ ಭಾರತದ ನಿಲುವನ್ನು ತಿಳಿಸಲು ಪ್ರಮುಖ ಧ್ವನಿಯಾಗಿದ್ದರು.

ರಾಜಕೀಯ ನಿಲುವು ಮತ್ತು ಹೇಳಿಕೆಗಳು....

ಶಶಿ ತರೂರ್ ಹಲವಾರು ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಯಾವುದೇ ಮುಚ್ಚು ಮರೆ ಇಲ್ಲದೇ ಸಾರ್ವಜನಿಕವಾಗಿ ಬೆಂಬಲಿಸಿದ್ದಾರೆ. ವರ್ಷ್ಯಾರಂಭದಲ್ಲಿ ಜಾಗತಿಕವಾಗಿ ತೊಡಗಿಸಿಕೊಳ್ಳುವ ಪ್ರಧಾನಿಯವರ ಇಚ್ಛಾಶಕ್ತಿಯನ್ನು ತರೂರ್​ ಶ್ಲಾಘಿಸಿದರು. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಪ್ರಧಾನಿಗಳ ರಾಜತಾಂತ್ರಿಕ ಸಂಪರ್ಕ ರಾಷ್ಟ್ರೀಯ ಏಕತೆ ಮತ್ತು ಪರಿಣಾಮಕಾರಿ ಸಂವಹನದ ಉದಾಹರಣೆಯಾಗಿದೆ ಎಂದು ತರೂರ್ ಶ್ಲಾಘಿಸಿದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಭಾರತದ ಜಾಗತಿಕ ರಾಜತಾಂತ್ರಿಕ ಪ್ರಯತ್ನಗಳಿಂದ ಕಲಿತ ಪಾಠಗಳನ್ನು ಉಲ್ಲೇಖಿಸುತ್ತಾ, ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಲೇಖನವನ್ನು ಹಂಚಿಕೊಳ್ಳುವ ಮೂಲಕ ತರೂರ್ ಅವರ ಅಭಿಪ್ರಾಯಗಳನ್ನು ಮತ್ತಷ್ಟು ಎತ್ತಿ ತೋರಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net