ರಾಹುಲ್ ಗಾಂಧಿ ದೇಶದಲ್ಲಿ ಅರಾಜಕತೆ ಮತ್ತು ಅವ್ಯವಸ್ಥೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ; ಸಿಎಂ ದೇವೇಂದ್ರ ಫಡ್ನವೀಸ್ ಆಕ್ರೋಶ | Devendra Fadnavis

ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಅವರು ದೇಶದಲ್ಲಿ ಅರಾಜಕತೆ ಮತ್ತು ಅವ್ಯವಸ್ಥೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
Devendra Fadnavis
ರಾಹುಲ್ ಗಾಂಧಿ ಮತ್ತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್
Published on: 

ಮುಂಬೈ: ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಅವರು ದೇಶದಲ್ಲಿ ಅರಾಜಕತೆ ಮತ್ತು ಅವ್ಯವಸ್ಥೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮುಂಬೈನಲ್ಲಿ ಭಾನುವಾರ(ಸೆ. 27) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮತಗಳ್ಳತನದ ಆರೋಪವನ್ನು ತಳ್ಳಿ ಹಾಕಿದ್ದಾರೆ. ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಚುನಾವಣಾ ಆಯೋಗದಲ್ಲಿನ ಭಿನ್ನಾಭಿಪ್ರಾಯಗಳ ವರದಿಗಳನ್ನು ತಿರಸ್ಕರಿಸಿದ ಅವರು, ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಮೂವರು ಚುನಾವಣಾ ಆಯುಕ್ತರು ಶನಿವಾರ ಜಂಟಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

Also Read
ಆರ್​ಟಿಐ ವ್ಯಾಪ್ತಿಯಿಂದ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆ ಹೊರಗೆ; ವಿರೋಧದ ಬಳಿಕ ಆದೇಶ ಹಿಂಪಡೆದ ವಿಜಯ್ ಸರ್ಕಾರ | RTI
Devendra Fadnavis

ಯಾವುದೇ ಮತಗಳು ಕಳ್ಳತನವಾಗಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಕಳ್ಳತನವಾಗಿದ್ದು ರಾಹುಲ್ ಗಾಂಧಿಯವರ ಬುದ್ಧಿಶಕ್ತಿ. ಆ ಕಳೆದುಹೋದ ಬುದ್ಧಿಶಕ್ತಿಯನ್ನು ಮರಳಿ ತರುವಂತಹ ಸಮಿತಿಯೊಂದನ್ನು ರಚಿಸುವಂತೆ ನಾನು ಪ್ರಧಾನ ಮಂತ್ರಿಯವರಲ್ಲಿ ಮನವಿ ಮಾಡುತ್ತೇನೆ. ಆಗಲಾದರೂ ಅವರು ದೇಶದ ಹಿತದೃಷ್ಟಿಯಿಂದ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿಯವರು ಸಾಂವಿಧಾನಿಕ ಸಂಸ್ಥೆಗಳನ್ನು ಅಪಖ್ಯಾತಿಗೊಳಿಸಲು ಮತ್ತು ಈ ಸಂಸ್ಥೆಗಳ ಬಗ್ಗೆ ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಅದರ ಮೂಲಕ ಸಂವಿಧಾನವು ಸ್ಥಾಪಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯು ಅವರಿಗೆ ನ್ಯಾಯ ನೀಡಲು ಸಾಧ್ಯವಿಲ್ಲ ಎಂದು ಜನರು ಭಾವಿಸುವಂತೆ ಮಾಡಲು ಬಯಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಭಾರತೀಯ ರಿಸರ್ವ್ ಬ್ಯಾಂಕ್, ಕಂಟ್ರೋಲರ್ ಹಾಗೂ ಆಡಿಟರ್ ಜನರಲ್ ಸೇರಿದಂತೆ ಹಲವಾರು ಸಾಂವಿಧಾನಿಕ ಸಂಸ್ಥೆಗಳ ಮೇಲೆ ರಾಹುಲ್ ಗಾಂಧಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನನ್ನ ಪ್ರಶ್ನೆ ಏನೆಂದರೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ರಚಿಸಲಾದ ಸಂಸ್ಥೆಗಳು ನಿರ್ಮೂಲನೆ ಮಾಡುವಷ್ಟು ದುರ್ಬಲವಾಗಿವೆಯೇ?. ಅವರು ಅರಾಜಕತೆ ಸೃಷ್ಟಿಸಲು ಬಯಸುತ್ತಿದ್ದು, ಅದೇ ರೀತಿಯಲ್ಲಿ ಒಂದು ನಿರ್ದಿಷ್ಟ ಪತ್ರಿಕೆ ಯಾವುದೇ ಪುರಾವೆಗಳಿಲ್ಲದೆ ಸುದ್ದಿಯನ್ನು ಮುದ್ರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net