ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಉದ್ಯಮಿ ಗೌತಮ್ ಅದಾನಿ ಮುಖಾಮುಖಿ; ಸಾರ್ವಜನಿಕಗೊಳ್ಳದ ಇಬ್ಬರ ಫೋಟೋ | Rahul Gandhi

ರಾಹುಲ್ ಗಾಂಧಿ ಮತ್ತು ಗೌತಮ್ ಅದಾನಿ ಔತಣಕೂಟದಲ್ಲಿರುವ ಬೇರೆ ಬೇರೆ ಫೋಟೋ
ರಾಹುಲ್ ಗಾಂಧಿ ಮತ್ತು ಗೌತಮ್ ಅದಾನಿ ಔತಣಕೂಟದಲ್ಲಿರುವ ಬೇರೆ ಬೇರೆ ಫೋಟೋ
Published on
ನವದೆಹಲಿ: ದೇಶದ ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಉದ್ಯಮಿ ಗೌತಮ್ ಅದಾನಿ ಒಂದೇ ಕಾರ್ಯಕ್ರಮಕ್ಕೆ ಹಾಜರಾಗಿದ್ದು, ಈ ವೇಳೆ ಇಬ್ಬರು ಕೈಕುಲಕಿದ್ದಾರೆ. ಆದರೆ ಕೈಕುಲಕಿದ ಯಾವುದೇ ಫೋಟೋ ಸಾರ್ವಜನಿಕಗೊಳ್ಳದಂತೆ ನೋಡಿಕೊಳ್ಳಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಮತ್ತು ಪ್ರಧಾನಿ ಮೋದಿ ಹೊರತಾಗಿ ಕೆಲವೇ ವರ್ಷಗಳಲ್ಲಿ ದೇಶದ ಅತಿದೊಡ್ಡ ಶ್ರೀಮಂತರ ಸಾಲಿನಲ್ಲಿ ಹೆಸರು ಪಡೆದ ದೇಶದ ಪ್ರಮುಖ ಉದ್ಯಮಿ ಗೌತಮ್ ಅದಾನಿ ವಿರುದ್ಧವೂ ಸಂಸತ್ ಮತ್ತು ಹೊರಗೆ ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಬಿಜೆಪಿಯೊಂದಿಗೆ ಶಾಮೀಲಾಗಿ ವಿವಿಧ ಕ್ಷೇತ್ರಗಳಲ್ಲಿ ಏಕಸ್ವಾಮ್ಯ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದಾರೆ. ಅದಾನಿಯವರ ಸಂಪತ್ತಿನ, ಏಕಸ್ವಾಮ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ ಬಂದಿದ್ದಾರೆ.
ಇತ್ತೀಚೆಗೆ ಡಿ. 11ರಂದು ಎನ್​​ಸಿಪಿ ನಾಯಕ ಶರದ್ ಪವಾರ್ ಅವರಿಗೆ 85 ವರ್ಷ ತುಂಬಿದ ಸಂದರ್ಭದಲ್ಲಿ ಉನ್ನತ ಮಟ್ಟದ ಭೋಜನಕೂಟವನ್ನು ಆಯೋಜಿಸಲಾಗಿತ್ತು. ಪಕ್ಷಾತೀತವಾಗಿ ರಾಜಕೀಯ ವಲಯದಾದ್ಯಂತ ಸಂಬಂಧ ಹೊಂದಿದ್ದ ಅನೇಕ ರಾಜಕಾರಣಿಗಳನ್ನು ಆಹ್ವಾನಿಸಲಾಗಿತ್ತು. ರಾಜಕೀಯವಾಗಿ ದೂರವಾಗಿರುವ ಅವರ ಸೋದರಳಿಯ ಅಜಿತ್ ಪವಾರ್ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅದೇ ಔತಣಕೂಟದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಕೂಡ ಭಾಗಿಯಾಗಿದ್ದಾರೆ.  
ಔತಣಕೂಟದಲ್ಲಿ ರಾಹುಲ್ ಗಾಂಧಿ ಮತ್ತು ಗೌತಮ್ ಅದಾನಿ ಮುಖಾಮುಖಿಯಾಗಿ ಕೈಕುಲಕಿದ್ದಾರೆ. ಆದರೆ ಅವರ ಭೇಟಿ ಯಾವುದೇ ಫೋಟೋಗಳು ಸಾರ್ವಜನಿಕವಾಗದಂತೆ ರಾಹುಲ್ ನೋಡಿಕೊಂಡಿದ್ದಾರೆ. ಕೇವಲ ಪವಾರ್ ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೊಂದಿಗೆ ಇರುವ ಚಿತ್ರಗಳು ಹೊರಬಂದಿವೆ. ಅದಾನಿ ಫ್ರೇಮ್​ನಲ್ಲಿರುವ ಯಾವುದೇ ಫೋಟೋಗಳು ಹೊರಗಡೆ ಬಂದಿಲ್ಲ.
ಈ ಕುರಿತು ದಿ ಲಲ್ಲಂಟಾಪ್​ನ ಕಾರ್ಯಕ್ರಮದಲ್ಲಿ ಮಾತನಾಡಿರುವ ಹಿರಿಯ ಪತ್ರಕರ್ತ ರಾಜ್​ದೀಪ್ ಸರ್ದೇಸಾಯಿ ಮತ್ತು ಆದೇಶ್ ರಾವಲ್, ಅದಾನಿ ಮತ್ತು ರಾಹುಲ್ ಗಾಂಧಿ ಕೈಕುಲಕಿದ್ದನ್ನು ಖಚಿಪಡಿಸಿದ್ದಾರೆ. 
ರಾಜ್​ದೀಪ್ ಸರ್ದೇಸಾಯಿ ಮಾತನಾಡಿ, ರಾಹುಲ್ ಗಾಂಧಿ ಮತ್ತು ಅದಾನಿ ಮುಖಾಮುಖಿಯಾಗುವುದನ್ನು ನಾನು ಮೊದಲ ಬಾರಿಗೆ ನೋಡಿದೆ. ಆದರೆ ಆಶ್ಚರ್ಯಕರವಾಗಿ, ಅವರ ಯಾವುದೇ ಫೋಟೋ ಹೊರಬಂದಿಲ್ಲ ಎಂದು ಹೇಳಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ಆದೇಶ್ ರಾವಲ್, ಇಬ್ಬರ ಭೇಟಿಯ ಸಮಯದಲ್ಲಿ ಪವಾರ್ ಅವರ ಪುತ್ರಿ ಮತ್ತು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಮಧ್ಯಪ್ರವೇಶಿಸಿ ರಾಹುಲ್-ಅದಾನಿ ಹಸ್ತಲಾಘವದ ಯಾವುದೇ ಚಿತ್ರಗಳನ್ನು ತೆಗೆಯದಂತೆ ನೋಡಿಕೊಂಡರು ಎಂದು ತಿಳಿಸಿದ್ದಾರೆ.
ಒಂದು ವೇಳೆ ರಾಹುಲ್ ಗಾಂಧಿ ಮತ್ತು ಅದಾನಿ ಒಂದೇ ಫ್ರೇಮ್​ನ ಫೋಟೋಗಳು ಹಂಚಿಕೊಂಡಿದ್ದರೆ, ರಾಜಕೀಯ ಉದ್ವಿಗ್ನತೆ ಉಂಟಾಗಿ, ಕಾಂಗ್ರೆಸ್ ಮತ್ತು ಅದರ ಸಂಘಟನೆಯ ನಿರೂಪಣೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿತ್ತು. ಜೊತೆಗೆ ಮಿತ್ರ ಪಕ್ಷಗಳು ಸೇರಿ ಸಾರ್ವಜನಿಕರಿಂದ ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತಿತ್ತು ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net