ಒಬ್ಬ ವ್ಯಕ್ತಿ, ಒಂದು ಮತ ಹಕ್ಕಿಗೆ ಎಸ್​​ಐಆರ್​ ಮಾರಕ; ಪರಿಷ್ಕರಣೆ ಹೆಸರಲ್ಲಿ ಮತಕಳ್ಳತನ ನಡೆಯುತ್ತಿದೆ ಎಂದು ರಾಹುಲ್ ಆಕ್ರೋಶ | Rahul Gandhi

Rahul Gandhi | ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ
Rahul Gandhi | ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ
Published on
ದೆಹಲಿ: ಗುಜರಾತ್‌ನಲ್ಲಿ ನಡೆದ ಯೋಜಿತ ಮತ ಕಳ್ಳತನದಲ್ಲಿ ಚುನಾವಣಾ ಆಯೋಗ ಕೂಡ ಭಾಗಿಯಾಗಿದ್ದು, ಬಿಜೆಪಿ ಪರವಾಗಿ ಫಲಿತಾಂಶಗಳ ಬರುವಂತೆ ಮಾಡಲು ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ ಆರೋಪಿಸಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ರಾಹುಲ್​, ಗುಜರಾತ್‌ನಲ್ಲಿ ಎಸ್‌ಐಆರ್ ಹೆಸರಿನಲ್ಲಿ ನಡೆಯುತ್ತಿರುವುದೆಲ್ಲವೂ ನಿಯಮಿತ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಇದು ವಿಪಕ್ಷಗಳ ಮತದಾರರನ್ನು ಆಯ್ದು ತೆಗೆದುಹಾಕುವ ಉದ್ದೇಶಪೂರ್ವಕ ಮತ್ತು ಸಂಘಟಿತ ಪ್ರಯತ್ನವಾಗಿದೆ ಎಂದರು.
ರಾಹುಲ್ ಗಾಂಧಿ ಅತ್ಯಂತ ಕಳವಳಕಾರಿ ಅಂಶವೆಂದರೆ ಒಂದೇ ಹೆಸರಿನಲ್ಲಿ ಸಾವಿರಾರು ಆಕ್ಷೇಪಣೆಗಳು ದಾಖಲಾಗಿವೆ, ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಂತಹ ಆಕ್ಷೇಪಣೆಗಳನ್ನು ಸ್ವೀಕರಿಸಿದ್ದೇಗೆ ಎಂದು ಪ್ರಶ್ನಿಸಿದ ಕಾಂಗ್ರೆಸ್​ ನಾಯಕರು, ಬಿಜೆಪಿಗೆ ಸೋಲಿನ ಆತಂಕವಿರುವ ಕಡೆಗಳಲ್ಲಿ ಮತದಾರರ ಹೆಸರನ್ನು ಸದ್ದಿಲ್ಲದೆ ಅಳಿಸಲಾಗಿದೆ ಎಂದು ಹೇಳಿದರು. ಈ ಮಾದರಿ ಮೊದಲು ಆಳಂದ ಮತ್ತು ರಾಜುರಾದ ಮೂಲಕ ನಮ್ಮೆಲ್ಲರ ಗಮನಕ್ಕೆ ಬಂದಿದ್ದು, ಈಗ ಅದು ಗುಜರಾತ್‌ನಲ್ಲಿ ಪುನರಾವರ್ತನೆಯಾಗುತ್ತಿದೆ, ರಾಜಸ್ಥಾನ ಸೇರಿದಂತೆ ಎಸ್‌ಐಆರ್ ನಡೆಯುತ್ತಿರುವ ಇತರ ರಾಜ್ಯಗಳಲ್ಲಿಯೂ ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಸಾಂವಿಧಾನಿಕ ಹಕ್ಕುಗಳ ಬಗ್ಗೆ ಕಳವಳ
ಎಸ್‌ಐಆರ್ ಪ್ರಕ್ರಿಯೆ ಒಬ್ಬ ವ್ಯಕ್ತಿ, ಒಂದು ಮತ ಎಂಬ ಸಾಂವಿಧಾನಿಕ ತತ್ವವನ್ನು ದುರ್ಬಲಗೊಳಿಸುವ ಸಾಧನವಾಗಿ ಪರಿವರ್ತಿಸಲಾಗುತ್ತಿದೆ, ಇದು ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಬೆದರಿಕೆ ಹಾಕುವ ಪ್ರಯತ್ನವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net