

ಚಿಕಾಗೋ: ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾಗತಿಕ ರಾಜಕೀಯದಲ್ಲಿ ಭಾರತ ಈಗ 'ಸೈಡ್ ಪ್ಲೇಯರ್' ಆಗಿ ಉಳಿದಿದೆ ಎಂದು ಹೇಳುವ ಮೂಲಕ ಭಾರತದ ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದಾರೆ.
ವಿದೇಶದಲ್ಲಿ ನಿಂತುಕೊಂಡು ಸ್ವದೇಶದ ಬಗ್ಗೆ ರಾಹುಲ್ ಆಡಿರುವ ಮಾತಿಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕರು, ಅವರನ್ನು ಪಾಕಿಸ್ತಾನದ ಅಭಿಮಾನಿ ಮತ್ತು ಪಾಕಿಸ್ತಾನದ ಚಿಯರ್‌ಲೀಡರ್ ಎಂದು ಕಟುವಾಗಿ ಟೀಕಿಸಿದ್ದಾರೆ.
ಚಿಕಾಗೋ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ವಾಂಸರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದರು. ಭಾರತಕ್ಕೆ ತನ್ನದೇ ಆದ ಗಾತ್ರ ಮತ್ತು ಶಕ್ತಿಯಿದೆ. ಹಿಂದೆಲ್ಲಾ ಭಾರತ ಜಾಗತಿಕ ವಿಚಾರಗಳಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿತ್ತು.
ಆದರೆ ಈಗ ಭಾರತ ಜಾಗತಿಕ ರಾಜಕೀಯದಲ್ಲಿ ಕೇವಲ 'ಸೈಡ್ ಪ್ಲೇಯರ್' ಆಗಿ ಬದಲಾಗಿದೆ. ಇತ್ತ ನಮ್ಮ ನೆರೆಯ ಪಾಕಿಸ್ತಾನ, ಅಮೆರಿಕ ಮತ್ತು ಇರಾನ್‌ನಂತಹ ಪ್ರಮುಖ ದೇಶಗಳೊಂದಿಗೆ ನಿರಂತರವಾಗಿ ಮಾತುಕತೆಯಲ್ಲಿ ತೊಡಗಿದೆ ಎಂದು ರಾಹುಲ್ ಹೇಳಿದ್ದರು.
ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ನಾಯಕರೊಂದಿಗಿನ ಒಡನಾಟವನ್ನೂ ಪ್ರಶ್ನಿಸಿದ ರಾಹುಲ್, ಪ್ರಧಾನಿ ಮೋದಿ ಯಾವಾಗಲೂ 'ಅವರು ನನ್ನ ಸ್ನೇಹಿತ' ಎಂದು ಹೇಳುತ್ತಿರುತ್ತಾರೆ. ಆದರೆ ಕೇವಲ ವೈಯಕ್ತಿಕ ಸ್ನೇಹದಿಂದ ಅಂತಾರಾಷ್ಟ್ರೀಯ ರಾಜಕೀಯ ನಡೆಯುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ವಿದೇಶದಲ್ಲಿ ಕೂತು ಭಾರತದ ಗೌರವಕ್ಕೆ ಧಕ್ಕೆ ತರುವಂತೆ ರಾಹುಲ್ ಗಾಂಧಿ ಮಾತನಾಡಿದ್ದಾರೆ ಎಂದು ಬಿಜೆಪಿ ವಕ್ತಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಅವರ ಮಾತುಗಳು ಅಕ್ಷಮ್ಯ. ಅವರು ಪಾಕಿಸ್ತಾನದ ಚಿಯರ್‌ಲೀಡರ್‌ನಂತೆ ಮಾತನಾಡುತ್ತಿದ್ದಾರೆ. ಅವರಿಗೆ ಜಾಗತಿಕ ರಾಜಕೀಯದ ಬಗ್ಗೆ ಎಷ್ಟು ಅಜ್ಞಾನವಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಇಂದು ಜಗತ್ತಿನ ಪ್ರಮುಖ ಶಕ್ತಿಯಾಗಿ ಬೆಳೆದಿದೆ, ಅದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ಗೆ ಆಗುತ್ತಿಲ್ಲ ಎಂದಿದ್ದಾರೆ.
ಇನ್ನು ಮತ್ತೊಬ್ಬ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, ರಾಹುಲ್ ಗಾಂಧಿಗೆ ಪಾಕಿಸ್ತಾನದ ಮೇಲೆ ಯಾಕಿಷ್ಟು ವ್ಯಾಮೋಹ? ಪ್ರತಿಯೊಂದು ಜಾಗತಿಕ ವೇದಿಕೆಯಲ್ಲೂ ಅವರು ಪಾಕ್ ಫ್ಯಾನ್ ಬಾಯ್ ತರಹ ವರ್ತಿಸುತ್ತಾರೆ. ರಷ್ಯಾ, ಉಕ್ರೇನ್ ಮತ್ತು ಇರಾನ್ ಜೊತೆ ಭಾರತ ಇಂದು ಅತ್ಯುತ್ತಮ ರಾಜತಾಂತ್ರಿಕ ಸಂಬಂಧ ಹೊಂದಿದೆ. 26/11 ಮುಂಬೈ ದಾಳಿಯ ನಂತರ ಯುಪಿಎ ಸರ್ಕಾರ ಪಾಕಿಸ್ತಾನದ ಮುಂದೆ ಮಂಡಿಯೂರಿದ್ದನ್ನು ದೇಶ ಮರೆತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಪಾಕಿಸ್ತಾನ ಮತ್ತು ಇಸ್ರೇಲ್ ಜೊತೆಗಿನ ಭಾರತದ ಸಂಬಂಧದ ಬಗ್ಗೆಯೂ ರಾಹುಲ್ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಒಟ್ಟಾಗಿ ಕೆಲಸ ಮಾಡಲು ಅವಕಾಶವಿದೆ. ಆದರೆ, ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಮೊದಲು ನಿಲ್ಲಿಸಬೇಕು. ನಮ್ಮ ಅಮಾಯಕ ಜನರು ಕೊಲ್ಲಲ್ಪಡುತ್ತಿರುವಾಗ ನಾವು ಅವರೊಂದಿಗೆ ಮಾತುಕತೆ ನಡೆಸಲು ಸಾಧ್ಯವೇ ಇಲ್ಲ. ಭಯೋತ್ಪಾದನೆ ನಿಂತ ಕ್ಷಣವೇ ಮಾತುಕತೆ ಪ್ರಾರಂಭವಾಗಬಹುದೆಂದು ರಾಹುಲ್ ಹೇಳಿದ್ದಾರೆ, (ಏಜೆನ್ಸೀಸ್).