ಅದೊಂದು ಪುಟ್ಟ ಸಭಾಂಗಣ. ಅಲ್ಲಿರುವ ರಂಗಸಜ್ಜಿಕೆಯಲ್ಲಿ ಆ ದಿನ ‘ರಾಗಸಂಧಾನ’ವಿತ್ತು! ಅದಕ್ಕೆ ಆಮಂತ್ರಿತ ಪ್ರೇಕ್ಷಕರು ಸಾಕ್ಷಿಯಾದರು. ಬೆಂಗಳೂರಿನ ರಘುವನಹಳ್ಳಿಯ ಆರ್ಟ್ಸ್ ಸ್ಪೆಸ್‌ನಲ್ಲಿ ಆ ಎರಡೂವರೆ ತಾಸು ಹೊಸಲೋಕವೇ ತೆರೆದುಕೊಂಡಿತು. ಅಲ್ಲಿ ಋತುಗಳು ಅರಳಿದವು. ಆಯಾ ಋತುಗಳಿಗೆ ಅನುಗುಣವಾಗಿ ಹಿಂದೂಸ್ತಾನಿ ಸಂಗೀತದ ಸ್ವರಗಳು ಸಂಚರಿಸಿದವು. ರಾಗಗಳು ಹಾಡುಗಳಾದವು. ಹಾಡುಗಳು ನಾಟ್ಯವಾದವು. ವಿಲಂಬಿತ ಖಯಾಲ್, ದೃತ್ ಖಯಾಲ್, ಠುಮ್ರಿ, ಟಪ್ಪಾ, ಭಾವಗೀತೆ, ಭಕ್ತಿ ಗೀತೆ, ಶುದ್ಧ ನಾಟ್ಯಗೀತೆ, ತರಾನಾ... ಹೀಗೆ ಒಂದೂವರೆ ಗಂಟೆಯಲ್ಲಿ 17 ವಿವಿಧ ಶೈಲಿಯ ಸಂಗೀತ ಸುಮಗಳು ಅಲ್ಲಿ ನಾದ ಪರಿಮಳ ಪಸರಿಸಿದವು. ಒಂದಕ್ಕಿಂತ ಒಂದು ಅದ್ಭುತ. ಅವುಗಳನ್ನು ಕನ್ನಡದ ಬಂದಿಶ್ ಅಂದರೂ ಸರಿಯೇ.