ಕತಾರ್​ನಲ್ಲಿ ತಿಂಗಳಿಗೆ 2.5 ಲಕ್ಷ ಸಂಬಳ ಬರ್ತಿದ್ದ ಉದ್ಯೋಗ ಬಿಟ್ಟು ಮೈಸೂರಿನಲ್ಲಿ ನೆಲೆಸಿದ ಯುವಕ: ಕಾರಣ ಕೇಳಿದ್ರೆ ಹುಬ್ಬೇರುತ್ತೆ! Quits Qatar Job Settles Mysuru

Quits Qatar Job Settles Mysuru
ಕತಾರ್​ನಲ್ಲಿ ತಿಂಗಳಿಗೆ 2.5 ಲಕ್ಷ ಸಂಬಳ ಬರ್ತಿದ್ದ ಉದ್ಯೋಗ ಬಿಟ್ಟು ಮೈಸೂರಿನಲ್ಲಿ ನೆಲೆಸಿದ ಯುವಕ
Published on: 

ಮೈಸೂರು: ತಿಂಗಳಿಗೆ 2.5 ಲಕ್ಷ ರೂಪಾಯಿ ಬೃಹತ್ ವೇತನ, ಜತೆಗೆ ಕತಾರ್‌ನ ಅತ್ಯಂತ ಪ್ರಸಿದ್ಧ ಹಾಗೂ ಪ್ರತಿಷ್ಠಿತ ಏರ್‌ಲೈನ್ಸ್‌ ಕಂಪನಿಯಲ್ಲಿ ಭದ್ರವಾದ ಉದ್ಯೋಗ! ಇಂತಹ ಐಷಾರಾಮಿ ಅವಕಾಶವನ್ನು ಯಾರಾದರೂ ಬೇಡ ಎಂದು ತಿರಸ್ಕರಿಸಲು ಸಾಧ್ಯವೇ? ಆದರೆ, ಇಂತಹ ಅದ್ಧೂರಿ ವಿದೇಶಿ ಜೀವನವನ್ನು ಬದಿಗೊತ್ತಿ ( Quits Qatar Job Settles Mysuru ), ಭಾರತಕ್ಕೆ ಮರಳಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ಜೀವನ ಕಟ್ಟಿಕೊಳ್ಳುವ ದಿಟ್ಟ ನಿರ್ಧಾರವನ್ನು ಆದಿತ್ಯ ಸಿಂಗ್ ಎಂಬ ಯುವಕ ಕೈಗೊಂಡಿದ್ದಾರೆ. ಪ್ರಸ್ತುತ ಟ್ರಾನ್ಸ್‌ಫಾರ್ಮೇಷನ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಆದಿತ್ಯ, ತಮ್ಮ ಈ ನಿರ್ಧಾರದ ಹಿಂದಿನ ಕಥೆಯನ್ನು ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸುಮಾರು ಮೂರು ವರ್ಷಗಳ ಹಿಂದೆಯೇ ತಾವು ಆ ಐಷಾರಾಮಿ ಕೆಲಸವನ್ನು ತೊರೆಯಲು ತೀರ್ಮಾನಿಸಿದ್ದಾಗಿ ಆದಿತ್ಯ ಹೇಳಿಕೊಂಡಿದ್ದಾರೆ. ಕೈತುಂಬಾ ಸಂಬಳ ಮತ್ತು ಸುಭದ್ರ ಭವಿಷ್ಯವನ್ನು ನೀಡುತ್ತಿದ್ದ ಕೆಲಸವನ್ನು ಬಿಡಲು ನಿರ್ಧರಿಸಿದಾಗ, ಅವರ ಕುಟುಂಬಸ್ಥರು ಈ ನಿರ್ಧಾರದಿಂದ ಖಂಡಿತವಾಗಿಯೂ ಸಂತೃಪ್ತರಾಗಿರಲಿಲ್ಲ. ಪ್ರತಿಯೊಬ್ಬರೂ ವಿದೇಶಕ್ಕೆ ಹೋಗಿ ಹಣ ಗಳಿಸಲು ಹಪಹಪಿಸುತ್ತಿರುವಾಗ, ಇಂತಹ ಉನ್ನತ ಹುದ್ದೆಯನ್ನು ತೊರೆಯುವುದು ಮೂರ್ಖತನ ಎಂದೇ ಅವರ ಕುಟುಂಬ ಭಾವಿಸಿತ್ತು. ಆದರೆ, ಕುಟುಂಬದ ವಿರೋಧ ಹಾಗೂ ಸವಾಲುಗಳ ನಡುವೆಯೂ ಆದಿತ್ಯ ತಮ್ಮ ಮನಸ್ಸಿನ ಮಾತಿಗೆ ಗೌರವ ನೀಡಿ ಭಾರತಕ್ಕೆ ಮರಳಿದರು.

Also Read
ಇನ್ಮುಂದೆ ಈ ರಾಜ್ಯದ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಜೀನ್ಸ್​, ಟೀ-ಶರ್ಟ್ ಬ್ಯಾನ್​​! ಫಾರ್ಮಲ್ ಉಡುಗೆ ಕಡ್ಡಾಯವೆಂದ ಶಿಕ್ಷಣ ಇಲಾಖೆ | Dress Code
Quits Qatar Job Settles Mysuru

ಕತಾರ್‌ನಿಂದ ಭಾರತಕ್ಕೆ ಬಂದ ನಂತರ ಮದುವೆಯಾಗಿ ಮೈಸೂರಿನಲ್ಲಿ ನೆಲೆಸಿದ ಆದಿತ್ಯ, ನನ್ನ ಹಳೆಯ ಕೆಲಸವನ್ನು ಬಿಟ್ಟಿದ್ದರ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೈಸೂರು ನಗರದ ಸ್ವಚ್ಛತೆ, ಅಲ್ಲಿನ ಪ್ರಶಾಂತ ಜೀವನಶೈಲಿ ಮತ್ತು ತಮಗ ಸಿಕ್ಕಿರುವ ಸ್ವತಂತ್ರ ಜೀವನದ ಮುಂದೆ ವಿದೇಶದ ಕೋಟಿ ಕೋಟಿ ಹಣವೂ ಶೂನ್ಯ ಎಂಬುದು ಆದಿತ್ಯ ಅವರ ಅಭಿಪ್ರಾಯ.

ಬದುಕಿನಲ್ಲಿ ಯಾವಾಗಲೂ ಕೆಲಸವೇ ಮುಖ್ಯವಲ್ಲ. ಈ ಹೊಸ ವೃತ್ತಿಮಾರ್ಗದಲ್ಲೂ ಸವಾಲುಗಳು ಮತ್ತು ಏಳುಬೀಳುಗಳು ಇವೆ. ಆದರೆ ನನಗೆ ಸಿಗುವ ಬೃಹತ್ ಸಂಬಳಕ್ಕಿಂತ ನನ್ನ ಸ್ವಂತ ಸಮಯದ ವೇಳಾಪಟ್ಟಿ, ನನ್ನ ಸ್ವತಂತ್ರ ಜೀವನಶೈಲಿ ಮತ್ತು ನೆಮ್ಮದಿಯೇ ಅತ್ಯಂತ ಪ್ರಮುಖವಾಗಿದೆ ಎಂದು ಆದಿತ್ಯ ಅವರು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಭಾವುಕರಾಗಿ ತಿಳಿಸಿದ್ದಾರೆ.

ಆದಿತ್ಯ ಅವರ ಈ ನಿರ್ಧಾರಕ್ಕೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ಹಾಗೂ ಬೆಂಬಲ ವ್ಯಕ್ತವಾಗುತ್ತಿದೆ. ಹಣ ಗಳಿಸುವುದಕ್ಕಿಂತ ಉತ್ತಮ ಜೀವನಮಟ್ಟ ಮತ್ತು ಕುಟುಂಬದೊಂದಿಗೆ ಕಳೆಯುವ ನೆಮ್ಮದಿಯ ಕ್ಷಣಗಳೇ ಶ್ರೇಷ್ಠ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. "ಹಣ ಖಂಡಿತವಾಗಿಯೂ ಮುಖ್ಯ, ಆದರೆ ಅದು ಕುಟುಂಬ ಮತ್ತು ಶಾಂತಿಗಿಂತ ಹೆಚ್ಚಲ್ಲ. ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅತ್ಯಗತ್ಯ," ಎಂದು ಒಬ್ಬ ಬಳಕೆದಾರರು ಬರೆದಿದ್ದರೆ, "ನಾವು ಎಲ್ಲಿ ಸಂತೋಷವಾಗಿರಬಹುದು ಎಂಬುದು ನಮಗೇ ಸ್ಪಷ್ಟವಾಗಿ ತಿಳಿದಿರುತ್ತದೆ. ಕೆಲವೊಮ್ಮೆ ರಿಸ್ಕ್ ತೆಗೆದುಕೊಂಡು ನಮ್ಮ ಮನಸ್ಸಿಗೆ ಅನಿಸಿದ್ದನ್ನು ಮಾಡುವುದೇ ಸರಿ," ಎಂದು ಮತ್ತೊಬ್ಬರು ಆದಿತ್ಯ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ, (ಏಜೆನ್ಸೀಸ್​).