ವ್ಲಾದಿಮಿರ್ ಪುತಿನ್ ರಕ್ಷಣೆಯ ಹೊಣೆ ಪ್ರೆಸಿಡೆನ್ಶಿಯಲ್ ಸೆಕ್ಯುರಿಟಿ ಸರ್ವೀಸ್ನದ್ದು. ಎಸ್ಬಿಪಿ ಏಜೆನ್ಸಿ ಇದನ್ನು ನಿರ್ವಹಿಸುತ್ತದೆ. ಪುತಿನ್ ಪ್ರವಾಸ ಕೈಗೊಳ್ಳುವ ದೇಶದ ಅಪರಾಧ ದರ, ಭಯೋತ್ಪಾದನೆಯ ಸ್ಥಿತಿ, ಪ್ರತಿಭಟನೆಗಳು ಮತ್ತು ಧಾರ್ಮಿಕ ವಾತಾವರಣದ ಬಗ್ಗೆ ಎಸ್ಬಿಪಿ ಅಧ್ಯಯನ ನಡೆಸುತ್ತದೆ. ಈ ಅಧ್ಯಯನದ ಅವಧಿಯಲ್ಲಿ ಅಪಾಯಕಾರಿ ಅಥವಾ ಅನುಮಾನಕಾರಿ ಅಂಶಗಳು ಕಂಡುಬಂದರೆ ಅಧ್ಯಕ್ಷರ ಕಚೇರಿಗೆ ಮಾಹಿತಿ ನೀಡಲಾಗುತ್ತದೆ. ಪುತಿನ್ ಪ್ರವಾಸದ ಕನಿಷ್ಠ ಒಂದು ತಿಂಗಳು ಮುನ್ನವೇ ಸೆಕ್ಯುರಿಟಿ ತಂಡವನ್ನು ಕಳಿಸಲಾಗುತ್ತದೆ. ಪುತಿನ್ ತಂಗುವ ಹೋಟೆಲ್, ಸಂಚರಿಸುವ ಮಾರ್ಗದ ಬಗ್ಗೆ ಈ ತಂಡ ಪರಿಶೀಲನೆ ನಡೆಸುತ್ತದೆ. ಪುತಿನ್ ಹೋಟೆಲ್ ಕೋಣೆಗೆ ತಲುಪುವ ಮೊದಲೇ ಅಲ್ಲಿನ ಸಾಬೂನು, ಶ್ಯಾಂಪೂ, ಹ್ಯಾಂಡ್ವಾಶ್, ಟೂತ್ಪೆಸ್ಟ್ ಸೇರಿದಂತೆ ದಿನಬಳಕೆಯ ವಸ್ತುಗಳನ್ನು ತೆಗೆದು, ರಷ್ಯಾದಿಂದ ತರಲಾದ ವಸ್ತುಗಳನ್ನು ಪುತಿನ್ ಬಳಕೆಗೆ ಜೋಡಿಸಲಾಗುತ್ತದೆ.