ಪುಣೆ ಮಹಾನಗರ ಪಾಲಿಕೆ ಚುನಾವಣೆ; ಮೈತ್ರಿಗೆ ಮುಂದಾದ ಎನ್​ಸಿಪಿ ಬಣಗಳು; ಏಕಾಂಗಿಯಾಗಿ ಸ್ಪರ್ಧೆಗೆ ಕಾಂಗ್ರೆಸ್ ನಿರ್ಧಾರ | Congress

ಶರದ್ ಪವರ್ ಮತ್ತು ಅಜಿತ್ ಪವರ್
ಶರದ್ ಪವರ್ ಮತ್ತು ಅಜಿತ್ ಪವರ್
Published on
ಮುಂಬೈ: ಮಹಾರಾಷ್ಟ್ರದ ಮುಂಬೈ ಮಹಾನಗರ ಚುನಾವಣೆಗೆ ಠಾಕ್ರೆ ಸಹೋದರರು ಜೊತೆಗೂಡಿದಂತೆ ಪುಣೆ ಮಹಾನಗರ ಪಾಲಿಕೆ ಚುನಾವಣೆಗೆ ಒಡೆದು ಎರಡಾಗಿರುವ ಮಾಜಿ ಸಿಎಂ ಶರದ್ ಪವರ್ ಮತ್ತು ಡಿಸಿಎಂ ಅಜಿತ್ ಪವರ್ ನೇತೃತ್ವದ ನ್ಯಾಷನಲಿಷ್ಟ್ ಕಾಂಗ್ರೆಸ್ ಪಕ್ಷ(ಎನ್​ಸಿಪಿ) ಬಣಗಳು ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. ಆದರೆ ಈ ಮೈತ್ರಿಯಿಂದ ಕಾಂಗ್ರೆಸ್(Congress) ದೂರ ಸರಿದು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಶರದ್ ಪವರ್ ನೇತೃತ್ವದ NCP(SP) ಮತ್ತು ಅಜಿತ್ ಪವಾರ್ ನೇತೃತ್ವದ NCP ಪುಣೆ ಹಾಗೂ ಪಿಂಪ್ರಿ-ಚಿಂಚ್ವಾಡ್‌ ಪಾಲಿಕೆ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯ ವಿರುದ್ಧ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದು, ಎರಡೂ ಬಣಗಳು ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿವೆ ಎನ್ನಲಾಗಿದೆ.
ಈ ಕುರಿತು ವರದಿಯನ್ನು ನಿರಾಕರಿಸಿರುವ ಎನ್‌ಸಿಪಿ (ಎಸ್‌ಪಿ) ನಾಯಕಿ ಮತ್ತು ಸಂಸದೆ ಸುಪ್ರಿಯಾ ಸುಳೆ, ಅಜಿತ್ ಪವಾರ್ ಅವರ ಬಣದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯಾವುದೇ ಅಂತಿಮ ಪ್ರಸ್ತಾವನೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಎನ್​ಸಿಪಿ ಬಣಗಳ ಮೈತ್ರಿ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್, ಸಂಭಾವ್ಯ ಮೈತ್ರಿಕೂಟವನ್ನು ಅಪವಿತ್ರ ಎಂದು ಕರೆದಿದ್ದು, ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳಿ ಎರಡೂ ಎನ್‌ಸಿಪಿಗಳು ಕೈಜೋಡಿಸಿದರೆ, ಕಾಂಗ್ರೆಸ್ ಈ ಅಪವಿತ್ರ ಮೈತ್ರಿಕೂಟದ ಭಾಗವಾಗುವುದಿಲ್ಲ ಎಂದು ಹೇಳಿದ್ದಾರೆ.

ಎನ್​ಸಿಪಿ ಬಣಗಳ ಮೈತ್ರಿಗೆ ವಿರೋಧ

ಪಾಲಿಕೆ ಚುನಾವಣೆಗಾಗಿ ಅಜಿತ್ ಪವರ್ ಬಣದ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಶರದ್ ಪವರ್ ಬಣದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಪುಣೆ ನಗರ ಎನ್​ಸಿಪಿ(ಎಸ್​ಪಿ) ಅಧ್ಯಕ್ಷ ಮತ್ತು ಮಾಜಿ ಮೇಯರ್ ಶಾಂತ್ ಜಗ್ತಾಪ್ ಸೈದ್ದಾಂತಿಕ ಬದ್ಧತೆಯ ಬಗ್ಗೆ ಪ್ರತಿಭಟಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕಾಂಗ್ರೆಸ್ ಸೇರುವ ಸಾದ್ಯತೆ ಇದೆ ಎನ್ನಲಾಗಿದೆ (ಏಜೆನ್ಸೀಸ್).
2026 ಜನವರಿ 15ರಂದು ಪುಣೆ ಮಹಾನಗರಪಾಲಿಕೆ (PMC) ಚುನಾವಣೆ ನಡೆಯಲಿದೆ. ಒಟ್ಟು 162 ವಾರ್ಡ್​​ಗಳಿಗೆ ಚುನಾವಣೆ ನಡೆಯಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net