ನಾನು ದಿಮಾಗಿ ನಕ್ಸಲ್ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ!.. ಪ್ರಧಾನಿ ಮೋದಿ ಕೆಂಪುಕೋಟೆಯ ಭಾಷಣಕ್ಕೆ ಪಿ. ಚಿದಂಬರಂ ತಿರುಗೇಟು | Dimagi Naxal

Dimagi Naxal > ನಾನು ದಿಮಾಗಿ ನಕ್ಸಲ್ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ ಎಂದ ಚಿದಂಬರಂ
Dimagi Naxal > ನಾನು ದಿಮಾಗಿ ನಕ್ಸಲ್ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ ಎಂದ ಚಿದಂಬರಂ
Published on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಿಮಾಗಿ ನಕ್ಸಲ್ (Dimagi Naxal) ಹೇಳಿಕೆಗೆ ಕಾಂಗ್ರೆಸ್​ನ ಹಿರಿಯ ನಾಯಕ ಪಿ. ಚಿದಂಬರಂ ವ್ಯಂಗ್ಯವಾಡಿದ್ದು, ನಾನು ದಿಮಾಗಿ ನಕ್ಸಲ್ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಮಾವೋವಾದಿ ಮನಸ್ಥಿತಿ ಹೊಂದಿರುವ ಜನರು ವ್ಯವಸ್ಥೆಯೊಳಗೆ ನೆಲೆ ಕಂಡುಕೊಂಡು ಸಾರ್ವಜನಿಕ ನೀತಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಎಚ್ಚರಿಕೆ ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಚಿದಂಬರಂ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರಧಾನಿಯವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಹೇಳಿದ್ದೇನು..?

ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಭಾರತವು ಕಾಡುಗಳಿಂದ ಶಸ್ತ್ರಸಜ್ಜಿತ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದರು. ಆದರೆ ಅದರ ವೈಚಾರಿಕ ಬೆಂಬಲಿಗರು ಹಿಂಸಾಚಾರ ಮತ್ತು ಅರಾಜಕತೆಯನ್ನು ಉತ್ತೇಜಿಸಲು ಅವಕಾಶಗಳನ್ನು ಹುಡುಕುವ ಮೂಲಕ ಇಂದಿಗೂ ಬೆದರಿಕೆಯಾಗಿ ಉಳಿದಿದ್ದಾರೆ ಎಂದು ಎಚ್ಚರಿಸಿದ್ದರು. ವರ್ಷಗಳಿಂದ ಮಾವೋವಾದಿ ಮನಸ್ಥಿತಿಯ ಜನರು ಅಧಿಕಾರದ ಕಾರಿಡಾರ್‌ಗಳಲ್ಲಿ ಸ್ಥಾನ ಪಡೆದುಕೊಂಡು, ಸರ್ಕಾರಿ ಸಮಿತಿಗಳಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಾ ಸಾರ್ವಜನಿಕ ನೀತಿಗಳ ಮೇಲೆ ಪ್ರಭಾವ ಬೀರಿದ್ದರು ಎಂದು ಆರೋಪಿಸಿದ ಪ್ರಧಾನಿ, ಅಂತಹ ಜನರನ್ನು ಗುರುತಿಸಿ ಸಮಾಜದಿಂದ ಪ್ರತ್ಯೇಕಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದರು.
ದಶಕಗಳ ನಕ್ಸಲ್ ಮತ್ತು ಮಾವೋವಾದಿ ಹಿಂಸಾಚಾರವು ಲಕ್ಷಾಂತರ ಯುವಕರ ಜೀವನ ಹಾಗೂ ಆಕಾಂಕ್ಷೆಗಳನ್ನು ನಾಶಪಡಿಸಿದೆ ಎಂದು ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಈ ಸಂಘರ್ಷದಲ್ಲಿ 3,500 ಕ್ಕೂ ಹೆಚ್ಚು ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದನ್ನು ನೆನಪಿಸುತ್ತಾ, ನಕ್ಸಲಿಸಂ ಭಾರತದ ಬಹುದೊಡ್ಡ ಭಾಗವನ್ನು ಬಂದೂಕಿನ ತುದಿಯಲ್ಲಿ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು ಎಂದು ತಿಳಿಸಿದರು. 2014 ರಲ್ಲಿ ಅಧಿಕಾರಕ್ಕೆ ಬಂದ ತಮ್ಮ ಸರ್ಕಾರವು ನಕ್ಸಲಿಸಂ ಮುಕ್ತಾಯಗೊಳಿಸುವುದನ್ನು ಆದ್ಯತೆಯನ್ನಾಗಿ ಮಾಡಿಕೊಂಡಿದ್ದು, ಈ ಸವಾಲನ್ನು ಈಗ ಮುಕ್ತಾಯದ ಹಂತಕ್ಕೆ ತರಲಾಗಿದೆ ಎಂದು ಪ್ರತಿಪಾದಿಸಿದರು.
ನಕ್ಸಲಿಸಂ ಮತ್ತು ಮಾವೋವಾದವು ಲಕ್ಷಾಂತರ ಯುವಕರ ಭವಿಷ್ಯವನ್ನು ಹಾಳುಮಾಡಿ, ನೂರಾರು ತಾಯಂದಿರ ಮಕ್ಕಳನ್ನು ಕಸಿದುಕೊಂಡು ಕುಟುಂಬಗಳನ್ನು ನಾಶಪಡಿಸಿದೆ ಎಂದು ಪ್ರಧಾನಿ ಮರುಕ ವ್ಯಕ್ತಪಡಿಸಿದರು. ಒಮ್ಮೆ ನಕ್ಸಲೈಟ್ ಹಿಂಸಾಚಾರದಿಂದ ಪೀಡಿತವಾಗಿದ್ದ ಪ್ರದೇಶಗಳು ಈಗ ಅಭಿವೃದ್ಧಿ ಕಾಣುತ್ತಿವೆ ಎಂದು ತಿಳಿಸಿದ ಅವರು, ಒಂದೊಮ್ಮೆ ನಕ್ಸಲರ ಗುಂಡಿನ ಸದ್ದು ಕೇಳಿಸುತ್ತಿದ್ದ ಮತ್ತು ರಕ್ತಪಾತ ಸಾಮಾನ್ಯವಾಗಿದ್ದ ಪ್ರದೇಶಗಳಲ್ಲಿ ಈಗ ಅಭಿವೃದ್ಧಿ, ನಂಬಿಕೆ ಮತ್ತು ಶ್ರಮದ ತ್ರಿವರ್ಣ ಧ್ವಜ ಹಾರಾಡುತ್ತಿರುವುದಕ್ಕೆ ನನಗೆ ಸಂತೋಷವಿದೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net