ಸಿಎಂ ಹುದ್ದೆಗೆ ಸೂಕ್ತವಲ್ಲದ ಕಾರ್ಯಕ್ರಮ!...ರೇವಂತ್ ರೆಡ್ಡಿ ಅಮೆರಿಕ ಪ್ರವಾಸ ರದ್ದಾಗಿದ್ದಕ್ಕೆ ಕೇಂದ್ರದ ಸ್ಪಷ್ಟನೆ ಹೀಗಿದೆ | Revanth Reddy

Revanth Reddy
Revanth Reddy
Published on

ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ (Revanth Reddy) ಅವರ ಅಮೆರಿಕ ಪ್ರವಾಸಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ರಾಜಕೀಯ ಅನುಮತಿ ನಿರಾಕರಿಸಿದೆ. ಅವರು ಸಲ್ಲಿಸಿದ್ದ ಪ್ರವಾಸದ ಕಾರ್ಯಕ್ರಮಗಳ ಪಟ್ಟಿಯು ಮುಖ್ಯಮಂತ್ರಿ ಹುದ್ದೆಗೆ ಸೂಕ್ತವಾಗಿರಲಿಲ್ಲ ಮತ್ತು ಭೇಟಿಯ ಉದ್ದೇಶಕ್ಕೆ ಹೊಂದಿಕೆಯಾಗುತ್ತಿರಲಿಲ್ಲ ಎಂಬ ಕಾರಣ ನೀಡಿ ಈ ಪ್ರವಾಸಕ್ಕೆ ತಡೆ ಒಡ್ಡಲಾಗಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಅವರು ಮಾತನಾಡಿ, ಮುಖ್ಯಮಂತ್ರಿಗಳು ಹಾಗೂ ಇತರ ಗಣ್ಯರ ವಿದೇಶ ಪ್ರವಾಸಗಳಿಗೆ ರಾಜಕೀಯ ಅನುಮತಿ ನೀಡುವ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅದನ್ನು ಪರಿಶೀಲಿಸುತ್ತದೆ. ಪ್ರಸ್ತಾಪಿತ ಕಾರ್ಯಕ್ರಮವು ಅವರು ಹೊಂದಿರುವ ಹುದ್ದೆಗೆ ಮತ್ತು ಪ್ರವಾಸದ ಉದ್ದೇಶಕ್ಕೆ ಸೂಕ್ತವಾಗಿರಬೇಕು. ಆದರೆ ಈ ನಿರ್ದಿಷ್ಟ ಪ್ರಕರಣದಲ್ಲಿ ಅಮೆರಿಕ ಪ್ರವಾಸದ ಕಾರ್ಯಕ್ರಮವು ಸೂಕ್ತವಾಗಿ ಕಂಡುಬರದ ಕಾರಣ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ರೇವಂತ್ ರೆಡ್ಡಿ ಅವರ ಲಂಡನ್​ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂಬುದನ್ನು ಅವರು ದೃಢಪಡಿಸಿದ್ದಾರೆ.

ಕೇಂದ್ರದ ನಿರ್ಧಾರದಿಂದಾಗಿ ತೆಲಂಗಾಣ ರೈಸಿಂಗ್ ನಿಯೋಗದ ಭಾಗವಾಗಿದ್ದ ಮುಖ್ಯಮಂತ್ರಿಗಳ ಅಮೆರಿಕ ಪ್ರವಾಸ ರದ್ದಾಗಿದೆ ಎಂದು ತೆಲಂಗಾಣ ಸರ್ಕಾರ ತಿಳಿಸಿದೆ. ಲಂಡನ್‌ನಿಂದ ಬೋಸ್ಟನ್ ಹಾಗೂ ನ್ಯೂಯಾರ್ಕ್ ಸೇರಿದಂತೆ ಇತರ ಅಮೆರಿಕನ್ ನಗರಗಳಿಗೆ ತೆರಳಲು ರೇವಂತ್ ರೆಡ್ಡಿ ಯೋಜಿಸಿದ್ದರು. ಈ ಪ್ರವಾಸದ ಪ್ರಮುಖ ಉದ್ದೇಶ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ತಂತ್ರಜ್ಞಾನ ಮತ್ತು ಜಾಗತಿಕ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಏರ್ಪಡಿಸುವುದಾಗಿತ್ತು. ಪ್ರವಾಸದ ವೇಳೆ ಹಾರ್ವರ್ಡ್ ವಿಶ್ವವಿದ್ಯಾಲಯ, ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾಲಯ ಮತ್ತು ವರ್ಜೀನಿಯಾ ಟೆಕ್‌ನಂತಹ ಪ್ರಮುಖ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಒಪ್ಪಂದಗಳಿಗೆ ಸಹಿ ಹಾಕಲು ನಿರ್ಧರಿಸಲಾಗಿತ್ತು.

ಅನುಮತಿ ನಿರಾಕರಣೆಯ ಬಗ್ಗೆ ರೇವಂತ್​ ರೆಡ್ಡಿ ಹೇಳಿದ್ದೇನು..?

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೇಂದ್ರದ ಹೊಸ ಶಿಕ್ಷಣ ನೀತಿಯ ಭಾಗವಾಗಿ, ಜಾಗತಿಕ ಮಟ್ಟದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಭಾರತಕ್ಕೆ, ತೆಲಂಗಾಣ ಹಾಗೂ ಹೈದರಾಬಾದ್‌ಗೆ ತರುವುದೇ ಈ ಪ್ರವಾಸದ ಏಕೈಕ ಉದ್ದೇಶವಾಗಿತ್ತು. ಪ್ರಮುಖ ವಿಶ್ವವಿದ್ಯಾಲಯಗಳೊಂದಿಗಿನ ಸಹಭಾಗಿತ್ವವು ಜಾಗತಿಕ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ಬಯಸುವ ಯುವಕರ ಆಕಾಂಕ್ಷೆಗಳನ್ನು ಈಡೇರಿಸಲು ನೆರವಾಗುತ್ತದೆ. ರಾಷ್ಟ್ರ ನಿರ್ಮಾಣ ಮತ್ತು ಯುವಜನರ ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಲೆಕ್ಕಾಚಾರಗಳು ಬರಬಾರದು ಎಂದು ಹೇಳಿದರು. ಅನುಮತಿ ಸಿಗದ ಹಿನ್ನೆಲೆಯಲ್ಲಿ, ರೇವಂತ್ ರೆಡ್ಡಿ ಅವರು ಅಮೆರಿಕಕ್ಕೆ ತೆರಳುವ ಬದಲು ಆಗಸ್ಟ್ 23 ರಂದು ಲಂಡನ್‌ನಿಂದ ನೇರವಾಗಿ ಹೈದರಾಬಾದ್‌ಗೆ ಹಿಂತಿರುಗಲು ನಿರ್ಧರಿಸಿದ್ದಾರೆ.
ತಮ್ಮ ಪ್ರವಾಸ ರದ್ದಾಗಿದ್ದರೂ, ತಮ್ಮೊಂದಿಗೆ ಬಂದಿರುವ ಅಧಿಕಾರಿಗಳ ನಿಯೋಗವು ಅಮೆರಿಕ ಪ್ರವಾಸವನ್ನು ಮುಂದುವರಿಸಿ, ಯೋಜಿತ ಒಪ್ಪಂದಗಳು ಮತ್ತು ಸಹಭಾಗಿತ್ವದ ಮಾತುಕತೆಗಳನ್ನು ನಡೆಸುವಂತೆ ಅವರು ಸೂಚಿಸಿದ್ದಾರೆ. ಕೇಂದ್ರದ ರಾಜಕೀಯ ನಿರಾಕರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ತಮ್ಮ ಪ್ರವಾಸದ ಉದ್ದೇಶ ಜಾಗತಿಕ ಶಿಕ್ಷಣ ಸಂಸ್ಥೆಗಳನ್ನು ತೆಲಂಗಾಣಕ್ಕೆ ತರುವುದಾಗಿತ್ತು ಎಂದಿದ್ದಾರೆ.
ಪ್ರಸ್ತುತ ರೇವಂತ್ ರೆಡ್ಡಿ ಯುಕೆಯಲ್ಲಿ ತಮ್ಮ ನಿಗದಿತ ಕಾರ್ಯಕ್ರಮಗಳನ್ನು ಮುಂದುವರಿಸಿದ್ದಾರೆ. ಅವರು ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಲಂಡನ್ ಬಿಸಿನೆಸ್ ಸ್ಕೂಲ್ ಮತ್ತು ಲಂಡನ್ ವಿಶ್ವವಿದ್ಯಾಲಯದ ಶೈಕ್ಷಣಿಕ ಗಣ್ಯರನ್ನು ಭೇಟಿಯಾಗುತ್ತಿದ್ದಾರೆ. ಜತೆಗೆ ತೆಲಂಗಾಣದೊಂದಿಗೆ ಸಹಭಾಗಿತ್ವ ಬೆಳೆಸಲು ಕ್ರೀಡೆ ಮತ್ತು ಕೌಶಲ್ಯ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ. ಹೈದರಾಬಾದ್ ಅನ್ನು ಜಾಗತಿಕ ಜ್ಞಾನ ಮತ್ತು ಶಿಕ್ಷಣದ ಕೇಂದ್ರವನ್ನಾಗಿ ಮಾಡುವುದು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಆಕರ್ಷಿಸುವುದು ತಮ್ಮ ಸರ್ಕಾರದ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net