ಡಾರ್ಲಿಂಗ್... ಪೇಪರ್ ರೆಡಿ ಇದೆ ಬಾ! ವಿದ್ಯಾರ್ಥಿನಿಗೆ ಅಶ್ಲೀಲ ಆಮಿಷ ಒಡ್ಡಿದ ಪ್ರಾಧ್ಯಾಪಕನಿಗೆ ಜೈಲು ಭಾಗ್ಯ Professor Arrested

Professor Arrested (ಚಿತ್ರ X)
Professor Arrested (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿನಿಯೊಬ್ಬಳ ಜೊತೆ ಅಶ್ಲೀಲವಾಗಿ ಫೋನ್ ಸಂಭಾಷಣೆ ನಡೆಸಿದ ಪ್ರಾಣಿಶಾಸ್ತ್ರ ವಿಭಾಗದ ಪ್ರಾದ್ಯಾಪಕ
  • ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದಾಗಿ ಆಮಿಷ ಒಡ್ಡಿದ ಆರೋಪದ ಅಡಿಯಲ್ಲಿ ಕೇಸು ದಾಖಲು
  • ವಿದ್ಯಾರ್ಥಿಗಳಿಗೆ ಜ್ಞಾನದ ದೀವಿಗೆಯಾಗಬೇಕಿದ್ದ ಶಿಕ್ಷಕರೇ ಸ್ಥಾನದ ಘನತೆ ಮರೆತು ಈ ಕೃತ್ಯ ಎಸಗಿರುವುದು ಆಘಾತ
  • ಪ್ರಾಧ್ಯಾಪಕ ಪರಮಜೀತ್ ಸಿಂಗ್ ಕೆಲವು ದಿನಗಳಿಂದ ತನ್ನದೇ ವಿಭಾಗದ ವಿದ್ಯಾರ್ಥಿನಿಯೊಬ್ಬಳಿಗೆ ನಿತಂತರವಾಗಿ ಫೋನ್ ಮಾಡುತ್ತಿದ್ದನು
ಲಕ್ನೋ: ವಿದ್ಯಾರ್ಥಿನಿಯೊಬ್ಬಳ ಜೊತೆ ಅಶ್ಲೀಲವಾಗಿ ಫೋನ್ ಸಂಭಾಷಣೆ ನಡೆಸಿ, ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದಾಗಿ ಆಮಿಷ ಒಡ್ಡಿದ ಆರೋಪದ ಮೇಲೆ ಲಕ್ನೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಶನಿವಾರ (ಮೇ 16) (Professor Arrested) ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಗಳಿಗೆ ಜ್ಞಾನದ ದೀವಿಗೆಯಾಗಬೇಕಿದ್ದ ಶಿಕ್ಷಕರೇ ಸ್ಥಾನದ ಘನತೆ ಮರೆತು ಈ ಕೃತ್ಯ ಎಸಗಿರುವುದು ಆಘಾತ ಮೂಡಿಸಿದೆ.

ಘಟನೆ ಏನು?

ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪರಮಜೀತ್ ಸಿಂಗ್ ಕೆಲವು ದಿನಗಳಿಂದ ತನ್ನದೇ ವಿಭಾಗದ ವಿದ್ಯಾರ್ಥಿನಿಯೊಬ್ಬಳಿಗೆ ನಿತಂತರವಾಗಿ ಫೋನ್ ಮಾಡುತ್ತಿದ್ದನು ಎನ್ನಲಾಗಿದೆ. ಆರಂಭದಲ್ಲಿ ಪರೀಕ್ಷೆ ಮತ್ತು ಅಧ್ಯಯನದ ವಿಷಯವಾಗಿ ಮಾತನಾಡುತ್ತಿದ್ದ ಪ್ರಾಧ್ಯಾಪಕ, ದಿನಕಳೆದಂತೆ ತನ್ನ ಅಸಲಿ ರೂಪವನ್ನು ಪ್ರದರ್ಶಿಸಲು ಆರಂಭಿಸಿದ್ದಾನೆ.
ವೈರಲ್ ಆಗಿರುವ ಆಡಿಯೋ ಕ್ಲಿಪ್‌ನಲ್ಲಿ, ಪ್ರಾಧ್ಯಾಪಕ ವಿದ್ಯಾರ್ಥಿನಿಗೆ ಕರೆ ಮಾಡಿ ಡಾರ್ಲಿಂಗ್​ ನಾನು ನಿನಗಾಗಿ ಪರೀಕ್ಷಾ ಪತ್ರಿಕೆಯನ್ನು ಸಿದ್ಧಪಡಿಸಿದ್ದೇನೆ. ಪರೀಕ್ಷೆಗಿಂತ ಮುಂಚಿತವಾಗಿ ಇಲ್ಲಿಗೆ ಬಾ, ನಾನು ಅದನ್ನು ನಿನಗೆ ಕೊಡುತ್ತೇನೆ ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಬಂದಿದೆ ಎಂದು ವರದಿಯಾಗಿದೆ.
ಈ ಘಟನೆಯಿಂದ ವಿದ್ಯಾರ್ಥಿನಿ ತೀವ್ರ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು, ಈ ವಿಷಯದ ಬಗ್ಗೆ ವಿಶ್ವವಿದ್ಯಾಲಯದ ಆಡಳಿತಕ್ಕೆ ತಿಳಿಸಿದ್ದಾರೆ. ನಂತರ ಪರೀಕ್ಷಾ ನಿಯಂತ್ರಕ ವಿದ್ಯಾನಂದ್​ ತ್ರಿಪಾಠಿ ಪೊಲೀಸರಿಗೆ ಔಪಚಾರಿಕ ದೂರು ದಾಖಲಿಸಿದ್ದರು. ಈ ಸಂಬಂಧ ಹಸಂಗಂಜ್ ಪೊಲೀಸ್ ಠಾಣೆ ಪೊಲೀಸರು ಪ್ರಾದ್ಯಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಪ್ರಸ್ತುತ ವಿಚಾರಣೆ ನಡೆಸುತ್ತಿದ್ದಾರೆ.
ಆದಾಗ್ಯೂ, ವಿಚಾರಣೆಯ ಸಂದರ್ಭದಲ್ಲಿ ಸಿಂಗ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ವಿಶ್ವವಿದ್ಯಾಲಯದೊಳಗೆ ಆಂತರಿಕ ರಾಜಕೀಯದಿಂದಾಗಿ ತನ್ನ ಮೇಲೆ ಆರೋಪ ಹೊರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಉಪಕುಲಪತಿ ಜೆ.ಪಿ. ಸೈನಿ ಅವರು ಆಂತರಿಕ ದೂರು ಸಮಿತಿಗೆ ಈ ವಿಷಯದ ಬಗ್ಗೆ ತನಿಖೆ ನಡೆಸಿ 24 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ. ಸಂಸ್ಥೆಯ ಘನತೆ ಮತ್ತು ಶೈಕ್ಷಣಿಕ ಪರಿಸರಕ್ಕೆ ಹಾನಿ ಮಾಡುವ ಯಾವುದೇ ಕೃತ್ಯವನ್ನು ಸಹಿಸಲಾಗುವುದಿಲ್ಲ ಎಂದು ವಿಶ್ವವಿದ್ಯಾಲಯ ಆಡಳಿತವು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಇಂತಹ ವಿಚಾರಗಳಲ್ಲಿ ವಿಶ್ವವಿದ್ಯಾಲಯ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net