ಭಾರತೀಯ ನೌಕಾಪಡೆಯ ಹೆಮ್ಮೆ : ಕೌಂಡಿನ್ಯ ಕರಾಮತ್ತು

Kaundinya Karavan
Kaundinya Karavan
Published on
ಅಜಂತಾ ಗುಹೆಯಲ್ಲಿರುವ ಕಲಾಕೃತಿಯಿಂದ ಪ್ರೇರಣೆ ಪಡೆದು ಭಾರತೀಯ ನೌಕಾಪಡೆ ‘ಕೌಂಡಿನ್ಯ’ ಹಡಗನ್ನು ಸಿದ್ಧಪಡಿಸಿದೆ. ಪ್ರಾಚೀನ ಭಾರತವು ತಂತ್ರಜ್ಞಾನ ಮತ್ತು ನೌಕಾಯಾನದಲ್ಲಿ ಎಷ್ಟು ಮುಂದಿತ್ತೆಂದು ಇಂದಿನವರಿಗೆ ಪರಿಚಯಿಸುವ ಉದ್ದೇಶ ಇದರ ಹಿಂದಿದೆ. ಐದನೇ ಶತಮಾನದಷ್ಟು ಹಳೆಯ ವ್ಯಾಪಾರಿ ನೌಕೆಯೊಂದರ ಪ್ರತಿರೂಪವಾದ ಕೌಂಡಿನ್ಯ, ಡಿಸೆಂಬರ್ 29ರಿಂದ ಸಂಚಾರ ಆರಂಭಿಸಿದೆ. ಈ ಹಡಗಿನ ವೈಶಿಷ್ಟ್ಯ, ಪ್ರಾಚೀನ ಹಡಗಿನ ವಿನ್ಯಾಸ ಮತ್ತೆ ಜೀವ ಪಡೆದುಕೊಂಡ ಬಗೆ ಈ ಕುರಿತಾದ ವಿವರ ಇಲ್ಲಿದೆ.
ಐಎನ್​ಎಸ್​ವಿ (Indian Naval Sailing Vessel) ಕೌಂಡಿನ್ಯ! ಮರದಿಂದ ತಯಾರಿಸಿದ ಬೃಹತ್ ಹಡಗು. ವೇಗ ಹೆಚ್ಚಿಸುವ ಮತ್ತು ತಗ್ಗಿಸುವ, ದಿಕ್ಕು ನಿರ್ಧರಿಸಲು ಎತ್ತರದ ಹಾಗೂ ಬೃಹದಾಕಾರದ ಬಟ್ಟೆಗಳಿಂದ ತಯಾರಿಸಿದ ನೌಕಾಪಟ, ಅವುಗಳನ್ನು ಕಟ್ಟಲು ಕತ್ತದ ಹಗ್ಗ... ಇದರ ವೈಶಿಷ್ಟ್ಯಗಳು. 5ನೇ ಶತಮಾನದಲ್ಲಿ ಭಾರತದ ಸಮುದ್ರಯಾನದಲ್ಲಿ ಇದೇ ರೀತಿಯ ವಿನ್ಯಾಸ ಮಾಡಲಾಗುತ್ತಿತ್ತು. ಅದೇ ಪ್ರಾಚೀನ ತಂತ್ರಜ್ಞಾನವನ್ನು ಬಳಸಿ ಭಾರತೀಯ ನೌಕಾಪಡೆ ಕೌಂಡಿನ್ಯ ಹಡಗನ್ನು ನಿರ್ವಿುಸಿದೆ. ಈ ಮೂಲಕ
ಪ್ರಾಚೀನ ಜ್ಞಾನ ಮತ್ತು ನೌಕಾಶಾಸ್ತ್ರದ ಪರಂಪರೆಯನ್ನು ಮತ್ತೆ ಮೆಲುಕು ಹಾಕಿದೆ. ಈ ಹಡಗಿನಲ್ಲಿ ಇಂಜಿನ್ ಇಲ್ಲ. ಲೋಹದ ಮೊಳೆಗಳಿಲ್ಲ. ಅಂದರೆ ಯಾವುದೇ ಕಬ್ಬಿಣ ಅಥವಾ ಲೋಹ ಬಳಕೆಯಾಗಿಲ್ಲ. ಹಡಗಿನ ದಿಕ್ಕು ತೋರಿಸಲು ಜಿಪಿಎಸ್​ನಂಥ ಆಧುನಿಕ ಸಾಧನಗಳಿಲ್ಲ. ಕೌಂಡಿನ್ಯಕ್ಕೆ ಗಾಳಿಯೇ ಇಂಧನ, ದಿಕ್ಸೂಚಿ. ಈಗ ಇದರ ಸಂಚಾರವೂ ಆರಂಭವಾಗಿದೆ.
ಹೌದು, ಭಾರತವು ವಿಜ್ಞಾನ-ತಂತ್ರಜ್ಞಾನ, ನೌಕೆ, ಖಗೋಳಶಾಸ್ತ್ರ ಸೇರಿದಂತೆ ಹಲವು ರಂಗಗಳಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಮಾಡಿದ ಸಾಧನೆ ಅಸಾಧಾರಣವಾದದ್ದು. ಆದರೆ, ಭಾರತದ ನೈಜ ಮತ್ತು ಉಜ್ವಲವಾದ ಇತಿಹಾಸವನ್ನು ಮರೆಮಾಚಿ ಸುಳ್ಳುಗಳನ್ನೇ ದೀರ್ಘಕಾಲದವರೆಗೆ ವಿಜೃಂಭಿಸಲಾಯಿತು. ಭಾರತಕ್ಕೆ ನೌಕಾಯಾನವನ್ನು ವಾಸ್ಕೋ-ಡಿ-ಗಾಮ ಪರಿಚಯಿಸಿದನು ಎಂದು ಹೇಳಿಕೊಂಡು ಬರಲಾಯಿತು. ವಾಸ್ತವವೆಂದರೆ ಭಾರತೀಯ ನಾವಿಕರು ಹಾಗೂ ವರ್ತಕರು ಸಾವಿರಾರು ವರ್ಷಗಳ ಹಿಂದೆಯೇ ವ್ಯಾಪಾರ ಮತ್ತು ಅನ್ವೇಷಣೆಗಾಗಿ ಹಿಂದೂ ಮಹಾಸಾಗರದ ಮೂಲಕ ಮಧ್ಯಪ್ರಾಚ್ಯವಲ್ಲದೆ ಹಲವು ರಾಷ್ಟ್ರಗಳನ್ನು ತಲುಪಿದ್ದರು. ಮಾತ್ರವಲ್ಲ, ಹಡಗು ತಯಾರಿಕೆ, ಅದರ ವಿನ್ಯಾಸ, ನೌಕಾ ಸಂಚಾರದಲ್ಲಿ ಭಾರತದ ಸಾಧನೆ ಅದ್ವಿತೀಯವಾಗಿತ್ತು. ಅದೇ ಪ್ರಾಚೀನ ವಿನ್ಯಾಸವನ್ನು ಮತ್ತು ಸರಿಸುಮಾರು 5ನೇ ಶತಮಾನದ ತಂತ್ರಜ್ಞಾನವನ್ನು ಬಳಸಿಕೊಂಡು ‘ಕೌಂಡಿನ್ಯ’ವನ್ನು ಸಿದ್ಧಪಡಿಸಲಾಗಿದೆ.

ಯೋಜನೆ ಸಾಗಿಬಂದ ಹಾದಿ

ಕೌಂಡಿನ್ಯದ ನಿರ್ಮಾಣ ಕಾರ್ಯ 2023ರ ಜುಲೈನಲ್ಲಿ ಆರಂಭವಾಯಿತು. ಕೇಂದ್ರ ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಹೊದಿ ಇನ್ನೋವೇಷನ್ಸ್- ಇವುಗಳ ತ್ರಿಪಕ್ಷೀಯ ಒಪ್ಪಂದದ ಮೂಲಕ ಈ ಯೋಜನೆ ಸಾಕಾರಗೊಂಡಿದೆ. ಸ್ವದೇಶಿ ಜ್ಞಾನ ಮತ್ತು ಸಂಶೋಧನೆಯನ್ನು ಮುನ್ನಲೆಗೆ ತರುವ ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿ ಸಿದ್ಧಗೊಂಡ ಈ ಯೋಜನೆಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ಅನುದಾನವನ್ನು ಒದಗಿಸಿದೆ. ಕೇರಳದ ಸಾಂಪ್ರದಾಯಿಕ ಹಡಗು ತಯಾರಕರ ತಂಡವನ್ನು ಇದಕ್ಕಾಗಿ ಸಜ್ಜುಗೊಳಿಸಲಾಯಿತು. ಈ ತಂಡದ ನೇತೃತ್ವವನ್ನು ಕುಶಲಕರ್ವಿು ಬಾಬು ಶಂಕರನ್ ವಹಿಸಿದ್ದರು. ಹಡಗು ತಯಾರಿಕೆಗೆ ನೌಕಾಪಡೆ ತನ್ನ ಜ್ಞಾನ ಮತ್ತು ತಾಂತ್ರಿಕ ಮಾಹಿತಿಗಳನ್ನು ನೀಡಿತು. ಐಐಟಿ ಮದ್ರಾಸ್​ನ ಹೈಡ್ರೊಡೈನಾಮಿಕ್ಸ್ ಅಧ್ಯಯನ ವಿಭಾಗವೂ ಕೌಂಡಿನ್ಯ ನಿರ್ವಣಕ್ಕೆ ಕೈಜೋಡಿಸಿತ್ತು. ಪ್ರಾಚೀನ ಭಾರತವು ತಂತ್ರಜ್ಞಾನ ಮತ್ತು ನೌಕಾಯಾನದಲ್ಲಿ ಸಾಧಿಸಿದ ಹೆಗ್ಗುರುತನ್ನು ಈಗಿನವರಿಗೆ ಪರಿಚಯಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ.
2025ರ ಫೆಬ್ರವರಿಯಲ್ಲಿ ಇದನ್ನು ಗೋವಾದ ಹಡಗುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಕಾರವಾರದ ನೌಕಾನೆಲೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿತು. ಡಿಸೆಂಬರ್ 29ರಂದು ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ಪ್ರಯಾಣ ಆರಂಭಿಸಿದ ಕೌಂಡಿನ್ಯಕ್ಕೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಒಮಾನ್​ನ ಭಾರತದ ರಾಯಭಾರಿ ಹಾಜರಿದ್ದರು.

ಹೀಗಿದೆ ಕೌಂಡಿನ್ಯ

19.6 ಮೀಟರ್ ಉದ್ದ.
6.5 ಮೀಟರ್ ಅಗಲ.
ಹಡಗು ತೇಲಲು ಅಗತ್ಯವಿರುವ ಕೆಳಭಾಗವು 3.3 ಮೀಟರ್ ಇದೆ.
15 ನಾವಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ.

ಪ್ರಬಲ ಸಂದೇಶ

ಭಾರತ-ಒಮಾನ್-ಆಗ್ನೇಯ ಏಷ್ಯಾ ಕಾರಿಡಾರ್ ಒಂದು ಕಾಲದಲ್ಲಿ ಜವಳಿ, ಸಾಂಬಾರ ಪದಾರ್ಥಗಳು ಮತ್ತು ಇತರ ವಸ್ತುಗಳ ಪ್ರಮುಖ ವ್ಯಾಪಾರ ಮಾರ್ಗವಾಗಿತ್ತು. ಆ ಕಾಲದಲ್ಲಿ ಹಡಗುಗಳು ತಾಮ್ರ, ಮಣಿಗಳು, ಮರ ಮತ್ತು ಸುಗಂಧದ್ರವ್ಯಗಳನ್ನು ಒಯ್ಯುತ್ತಿದ್ದವು. ಭಾರತದ ವರ್ತಮಾನದ ಸಮುದ್ರಯಾನವು ಭೂತಕಾಲವನ್ನು ಕಡೆಗಣಿಸುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ನೌಕಾಪಡೆ ನೀಡಿದೆ.

ಸಂಚಾರ

ಗುಜರಾತಿನ ಪೋರಬಂದರ್​ನಿಂದ ಒಮಾನ್ ಸಮುದ್ರಮಾರ್ಗ ಅಂತರ: 1,400 ಕಿ.ಮೀ.
ಪ್ರಯಾಣದ ಅವಧಿ: 15 ದಿನಗಳು
ನಾವಿಕರ ಸಂಖ್ಯೆ: 15

ವೈಶಿಷ್ಟ್ಯಗಳು...

1.‘ಟಂಕೈ’ ಎಂಬ ನಿರ್ಮಾಣ ತಂತ್ರವನ್ನು ಬಳಸಿ ಕೌಂಡಿನ್ಯವನ್ನು ನಿರ್ವಿುಸಲಾಗಿದೆ.
2.ಮೊದಲಿಗೆ ಹಡಗಿನ ಒಡಲನ್ನು ನಿರ್ವಿುಸಲಾಗಿದೆ. ನಂತರದ ಹಂತದಲ್ಲಿ ಇಕ್ಕೆಲುಗಳ ಪಟ್ಟಿಯನ್ನು ಕಟ್ಟಲಾಗಿದೆ. ಇದರಿಂದ ಹಡಗಿನ ಸಂರಚನೆ ಹೆಚ್ಚು ಸದೃಢವಾಗುತ್ತದೆ.
3.ಮೌರ್ಯ ಹಾಗೂ ಸಂಗಮ ರಾಜರ ಅವಧಿಯಲ್ಲಿನ ಹಡಗು ನಿರ್ವಣ, ಗುಪ್ತ ಹಾಗೂ ಚೋಳರ ಕಾಲದಲ್ಲಿದ್ದ ಹಡಗುಗಳಿಂದ ಹಿಡಿದು 16ನೇ ಶತಮಾನದವರೆಗಿನ ಆಧುನಿಕ ಹಡಗುಗಳವರೆಗೂ ಇದ್ದ ಅತ್ಯುತ್ತಮ ತಂತ್ರಜ್ಞಾನವನ್ನು ಕೌಂಡಿನ್ಯದಲ್ಲಿ ಅಳವಡಿಸಲಾಗಿದೆ.
4.ಅಜಂತಾ ಗುಹೆಯಲ್ಲಿ ಇರುವ ಕಲಾಕೃತಿಗಳಲ್ಲಿ ಬಳಕೆಯಾಗಿರುವ ಹಡಗುಗಳ ವಿನ್ಯಾಸವನ್ನೇ ಕೌಂಡಿನ್ಯ ತಯಾರಿಯಲ್ಲಿ ಬಳಸಲಾಗಿದೆ. ಇದರೊಂದಿಗೆ ಭಾರತದ ಹಲವು ಪ್ರಾಚೀನ ಸಾಹಿತ್ಯಗಳಿಂದಲೂ ಮತ್ತು ಭಾರತಕ್ಕೆ ಭೇಟಿ ನೀಡಿದ ವಿದೇಶಿಯರು ದಾಖಲಿಸಿದ್ದ ಮಾಹಿತಿಯಿಂದಲೂ ಅಂದಿನ ಕಾಲದ ಹಡಗನ್ನು ಇಂದು ನಿರ್ವಿುಸಲಾಗಿರುವುದು ವಿಶೇಷ.
5.ಈ ಹಡಗು ನಿರ್ವಣದಲ್ಲಿ ಬಳಸಲಾದ ಮರದ ಹಲಗೆಗಳನ್ನು ಪರಸ್ಪರ ಒಂದರ ಪಕ್ಕ ಒಂದನ್ನು ಜೋಡಿಸಲಾಗಿದೆ. ಅವುಗಳನ್ನು ತೆಂಗಿನ ನಾರಿನಿಂದ ಮಾಡಲಾದ ಹಗ್ಗದಿಂದ ಬಿಗಿಯಲಾಗಿದೆ.
6.ಹಡಗಿನ ಒಡಲು ತುಂಬಲು ನೈಸರ್ಗಿಕ ರಾಳ, ಹತ್ತಿ ಮತ್ತು ಎಣ್ಣೆಯನ್ನು ಬಳಸಲಾಗಿದೆ.
7.ಈ ಹಡಗಿನಲ್ಲಿ ಗಂಡಭೇರುಂಡ, ಸೂರ್ಯನ ಕಸೂತಿಯಲ್ಲಿ ನೌಕಾಪಟದ ಮೇಲೆ ರಚಿಸಲಾಗಿದೆ. ಡೆಕ್ ಮೇಲೆ ಹರಪ್ಪ ವಿನ್ಯಾಸದಲ್ಲಿ ಆಂಕರ್ ಸಿದ್ಧಪಡಿಸಲಾಗಿದೆ.
8.ಭಾರತದಿಂದ ಆಗ್ನೇಯ ಏಷ್ಯಾಕ್ಕೆ ಸಮುದ್ರ ಮೂಲಕ ಪ್ರಯಾಣ ಬೆಳೆಸಿದ್ದ ಭಾರತದ ನಾವಿಕ ಕೌಂಡಿನ್ಯ ಹೆಸರನ್ನು ಹಡಗಿಗೆ ಇಡಲಾಗಿದೆ.
9.ಡಿಸೆಂಬರ್ 29ರಂದು ಗುಜರಾತ್​ನ ಪೋರಬಂದರ್​ನಿಂದ ಹೊರಟಿದ್ದು, ಅರಬ್ಬೀ ಸಮುದ್ರದ ಮೂಲಕ ಕೊಲ್ಲಿ ರಾಷ್ಟ್ರ ಒಮಾನ್​ನ ಮಸ್ಕತ್​ಗೆ ತಲುಪಲಿದೆ. ಭಾರತ ಮತ್ತು ಒಮಾನ್ ನಡುವೆ ಇದ್ದ ಪ್ರಾಚೀನ ಸಮುದ್ರ ಮಾರ್ಗದಲ್ಲಿ ಹಡಗು ಸಾಗುತ್ತಿದೆ. ತನ್ಮೂಲಕ ಹಿಂದೂ ಮಹಾಸಾಗರದಲ್ಲಿ ಭಾರತದ ನಾಗರಿಕ ಸಂಪರ್ಕ ಮತ್ತು ಪ್ರಾಚೀನ ಕಡಲ ಪರಂಪರೆಗೆ ಕನ್ನಡಿ ಹಿಡಿದಿದೆ.
10.ನೌಕಾಪಡೆಯೇ ಇದನ್ನು ನಿರ್ವಿುಸಿದ್ದರೂ ಇದು ಯುದ್ಧನೌಕೆಯಲ್ಲ.

ಪ್ರಧಾನಿ ಶ್ಲಾಘನೆ

ಐಎನ್​ಎಸ್​ವಿ (Indian Naval Sailing Vessel) ಕೌಂಡಿನ್ಯದ ವಿನ್ಯಾಸ, ಕಲಾಕೃತಿ, ನಿರ್ಮಾಣ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ದುಡಿದವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಈ ಕುರಿತಂತೆ ಡಿಸೆಂಬರ್ 29ರಂದು ‘ಎಕ್ಸ್’ನಲ್ಲಿ ಬರೆದಿರುವ ಅವರು, ನೌಕಾಪಟವುಳ್ಳ ಹಡಗಿನ ವಿನ್ಯಾಸಕ್ಕೆ ಮರುಜೀವ ನೀಡಿರುವುನ್ನು ಹೊಗಳಿದ್ದಾರೆ. ಅಲ್ಲದೆ, ನಾವಿಕರಿಗೆ ಶುಭ ಕೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net