ಪಶ್ಚಿಮ ಬಂಗಾಳದ ವಿಶ್ವ ವಿದ್ಯಾಲಯ, ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ಸಿದ್ದತೆ: ಸಿಎಂ ಸುವೇಂದು ಅಧಿಕಾರಿ ಹೇಳಿದ್ದೇನು? | Student union elections

ಸಿಎಂ ಸುವೇಂದು ಅಧಿಕಾರಿ
ಸಿಎಂ ಸುವೇಂದು ಅಧಿಕಾರಿ
Published on
ಕೋಲ್ಕತ್ತಾ: ಕಳೆದ ಕೆಲವು ವರ್ಷಗಳಿಂದ ನಿಂತು ಹೋಗಿದ್ದ ಪಶ್ಚಿಮ ಬಂಗಾಳದ ಎಲ್ಲಾ ವಿಶ್ವ ವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಸಂಘದ ಚುನಾವಣೆ(Student union elections) ನಡೆಸಲು ಬಿಜೆಪಿ ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲೇ ಎಲ್ಲಾ ಕಡೆ ಚುನಾವಣೆಗಳನ್ನು ನಡೆಸಲಾಗುವುದು ಎಂದು ಹೇಳಿದೆ.
ಈ ಕುರಿತು ಶುಕ್ರವಾರ(ಆ. 28) ಜಾದವ್‌ಪುರ ವಿಶ್ವವಿದ್ಯಾಲಯದ ಹೊರಗೆ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರಿಗೆ ಮಾತನಾಡಿರುವ ಸಿಎಂ ಸುವೇಂದು ಅಧಿಕಾರಿ, ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸುವಂತೆ ಪ್ರತಿಪಕ್ಷಗಳು ಮತ್ತು ಇತರ ಭಾಗಗಳಿಂದ ಬೇಡಿಕೆಗಳಿವೆ ಎಂದು ತಿಳಿಸಿದ್ದಾರೆ.
ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರದ 15 ವರ್ಷಗಳ ಅವಧಿಯಲ್ಲಿ ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದ ಹೆಚ್ಚಿನ ಭಾಗಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳು ನಡೆದಿಲ್ಲ. ಆದರೆ ಈ ಬಾರಿ ವಿದ್ಯಾರ್ಥಿ ಸಂಘದ ಚುನಾವಣೆಗಳು ಶೀಘ್ರದಲ್ಲೇ ನಡೆಯಲಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಎಲ್ಲೆಡೆ ಗೆಲ್ಲುತ್ತದೆ ಎಂದು ನನಗೆ ವಿಶ್ವಾಸವಿದೆ. ಕಾಲೇಜುಗಳಲ್ಲಿ ಕೇಸರಿ ಧ್ವಜಗಳು ಹಾರಾಡಲಿವೆ ಎಂದು ಹೇಳಿದ್ದಾರೆ.
ಎಬಿವಿಪಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವಿದ್ಯಾರ್ಥಿ ಸಂಘಟನೆಯಾಗಿದೆ. ವಿಪಕ್ಷಗಳು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಬೇಕೆಂದು ಪದೇ-ಪದೇ ಒತ್ತಾಯಿಸುತ್ತಿವೆ ಎನ್ನಲಾಗಿದೆ. ಇತ್ತೀಚೆಗೆ ಜೆಯು ಸೇರಿದಂತೆ ಹಲವಾರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಘರ್ಷಣೆಗಳ ಬಳಿಕ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ.
ಇತ್ತೀಚೆಗೆ ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ, ಬಿಜೆಪಿ ಸರ್ಕಾರ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ನಡೆಸಲು ಯಾವುದೇ ಉಪಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ರಾಜ್ಯದ ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ತಕ್ಷಣ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net