ಹೊಸ ಆರ್ಥಿಕ ವರ್ಷದ ಮೊದಲ ದಿನವೇ ಇಂಧನ ಬರೆ: ಪ್ರೀಮಿಯಂ ಪೆಟ್ರೋಲ್ ಮತ್ತು ಎಟಿಎಫ್ ದರ ಜಿಗಿತ! Premium Petrol

Premium Petrol (ಸಾಂದರ್ಭಿಕ ಚಿತ್ರ)
Premium Petrol (ಸಾಂದರ್ಭಿಕ ಚಿತ್ರ)
Published on
ನವದೆಹಲಿ: ದೇಶದ ಪ್ರಮುಖ ತೈಲ ಮಾರಾಟ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಇದರ ಬೆನ್ನಲ್ಲೇ ವಿಮಾನ ಇಂಧನ ಮತ್ತು ವಾಣಿಜ್ಯ ಎಲ್​ಪಿಜಿ ದರಗಳು ಗಗನಕ್ಕೇರಿದ್ದು, ಸಾರಿಗೆ ಮತ್ತು ವಾಣಿಜ್ಯ ವಲಯದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ.

ಪ್ರೀಮಿಯಂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಈ ಮೊದಲು ರಾಜಧಾನಿಯಲ್ಲಿ XP100 ಪೆಟ್ರೋಲ್ 149 ರೂ ಆಗಿದ್ದು, ಇಂದಿನಿಂದ 160 ರೂ. ಏರಿಕೆ ಕಂಡಿದೆ. ಅದೇ ರೀತಿ ಡೀಸೆಲ್​ ಲೀಟರ್​ಗೆ 92.99 ರೂ ಆಗಿದೆ. ಈ ಇಂಧನವನ್ನು ವಿಶೇಷವಾಗಿ ಸ್ಪೋರ್ಟ್ಸ್ ಕಾರ್‌ಗಳು, ಐಷಾರಾಮಿ ಸೆಡಾನ್‌ಗಳು ಮತ್ತು ಹೈ-ಸಿಸಿ ಸೂಪರ್‌ಬೈಕ್‌ಗಳ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.
ಸಾಮಾನ್ಯವಾಗಿ ಬೆಲೆ ಪರಿಷ್ಕರಣೆ ಮಾಡುವಾಗ ತೈಲ ಕಂಪನಿಗಳು ಅಂತರರಾಷ್ಟ್ರೀಯ ದರಗಳ ಏರಿಳಿತವನ್ನು ಉಲ್ಲೇಖಿಸುತ್ತವೆ. ಆದರೆ, ಈ ಬಾರಿ ಐಒಸಿಎಲ್​ ಮೌನ ವಹಿಸಿರುವುದು ಹಲವಾರು ಜನರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದಾಗ್ಯೂ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಉಂಟಾಗುತ್ತಿರುವ ಸಂಘರ್ಷ ಮತ್ತು ಪೂರೈಕೆಯಲ್ಲಿನ ಅಡಚಣೆಗಳಿಂದಾಗಿ ಕಂಪನಿಯು ಮಾರುಕಟ್ಟೆಯ ಸ್ಥಿತಿಗತಿಗಳನ್ನು ಅವಲೋಕಿಸಿ ಈ ಹೆಜ್ಜೆ ಇಟ್ಟಿದೆ ಎಂದು ಊಹಿಸಲಾಗುತ್ತಿದೆ.
ಇದಕ್ಕೂ ಮೊದಲು, ಮಾರ್ಚ್ 27 ರಂದು ಕೇಂದ್ರ ಸರ್ಕಾರವು ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂಗಳಷ್ಟು ಕಡಿತಗೊಳಿಸಿತು. ಇದು ಜಾಗತಿಕ ವೆಚ್ಚಗಳು ಏರಿಕೆ ಕಂಡುಬಂದರೂ ಕೂಡಾ ಸಾಮಾನ್ಯ ಪಂಪ್​ಗಳ ಬೆಲೆಯನ್ನು ಸ್ಥಿರವಾಗಿಡಲು ಸಹಾಯ ಮಾಡಿತು.

ದುಪ್ಪಟ್ಟಾದ ಎಟಿಎಫ್ ಬೆಲೆಗಳು

ದೆಹಲಿಯಲ್ಲಿ ವಿಮಾನಯಾನ ಟರ್ಬೈನ್ ಇಂಧನ (ATF) ದರವನ್ನು ಮೊದಲು ಪ್ರತಿ ಕಿಲೋಲೀಟರ್‌ಗೆ 96,638.14 ರೂ.ಗಳಿಂದ ನೇರವಾಗಿ 2,07,341.22 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಆದಾಗ್ಯೂ, ಕೆಲವೇ ಗಂಟೆಗಳಲ್ಲಿ ದೇಶೀಯ ವಿಮಾನಯಾನ ಸಂಸ್ಥೆಗಳ ದರವನ್ನು ಪ್ರತಿ ಕಿಲೋಲೀಟರ್​ಗೆ 1,04,927 ರೂ.ಗಳಿಗೆ ಏರಿಕೆ ಮಾಡಿರುವುದು ವಿಮಾನಯಾನ ಸಂಸ್ಥೆಗಳಿಗೆ ದೊಡ್ಡ ಆಘಾತ ನೀಡಿದೆ.
ಹಾರ್ಮುಜ್​ ಜಲಸಂಧಿಯಂತಹ ಪ್ರಮುಖ ಹಡಗು ಮಾರ್ಗಗಳಲ್ಲಿನ ಅಡಚಣೆ ಸೇರಿದಂತೆ ಜಾಗತಿಕ ಅಂಶಗಳಿಂದಾಗಿ ತೈಲಗಳ ಬೆಲೆಗಳಲ್ಲಿ ಶೇ. 100 ಕ್ಕೂ ಹೆಚ್ಚು ಏರಿಕೆ ಕಂಡುಬರುವ ನಿರೀಕ್ಷೆ ಇದೆ ಎಂದು ತೈಲ ಸಚಿವಾಲಯ ಅಧೀಕೃತ ಮಾಹಿತಿ ನೀಡಿದೆ.

ಇಂದಿನಿಂದ ಏರಿಕೆಯಾದ ವಾಣಿಜ್ಯ ಎಲ್​ಪಿಜಿ ಬೆಲೆ

ಬುಧವಾರ (ಏ.01) 19 ಕೆಜಿ ತೂಕದ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯನ್ನು 195.50 ರೂ. ಹೆಚ್ಚಿಸಲಾಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ 2,078.50 ರೂ. ಗೆ ತಲುಪಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net