ಕೊಚ್ಚಿಯಿಂದ ವಂತಾರಕ್ಕೆ ಮರಿಯಾನೆ ಏರ್‌ಲಿಫ್ಟ್: ಈ ಮುದ್ದು ಮರಿಗೆ ಬೇಕಿದೆ ನಿಮ್ಮ ಪ್ರಾರ್ಥನೆ, ಸಾವು ಗೆದ್ದು ಬಾ ಮಾಯಾ! Pray for Maya

Pray for Maya
ಕೊಚ್ಚಿಯಿಂದ ವಂತಾರಕ್ಕೆ ಮರಿಯಾನೆ ಏರ್‌ಲಿಫ್ಟ್: ಈ ಮುದ್ದು ಮರಿಗೆ ಬೇಕಿದೆ ನಿಮ್ಮ ಪ್ರಾರ್ಥನೆ, ಸಾವು ಗೆದ್ದು ಬಾ ಮಾಯಾ!
Published on: 

ಜಾಮ್​ನಗರ (ಗುಜರಾತ್​): ಹುಟ್ಟಿದ ದಿನವೇ ತಾಯಿಯಿಂದ ಬೇರ್ಪಟ್ಟು, ತೀವ್ರ ಅನಾರೋಗ್ಯ ಮತ್ತು ಮೂಳೆ ರೋಗದಿಂದ ಬಳಲುತ್ತಿರುವ 18 ತಿಂಗಳ ಮರಿಯಾನೆಯನ್ನು ರಕ್ಷಿಸಲು ಕೇರಳ ಅರಣ್ಯ ಇಲಾಖೆ ಹಾಗೂ ಗುಜರಾತ್‌ನ ಜಾಮ್‌ನಗರದಲ್ಲಿರುವ ಪ್ರಸಿದ್ಧ 'ವಂತಾರ' ( Vantara ) ವನ್ಯಜೀವಿ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿವೆ. ಮಲಗಿದಲ್ಲೇ ಸಾವಿನೊಡನೆ ಹೋರಾಡುತ್ತಿರುವ ಈ ಮುದ್ದಾದ ಮರಿಯಾನೆ 'ಮಾಯಾ'ಳನ್ನು ( Pray for Maya ) ಏರ್‌ಲಿಫ್ಟ್ (Airlift) ಮೂಲಕ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಆಸ್ಪತ್ರೆಗೆ ರವಾನಿಸಲಾಗುತ್ತಿದ್ದು, ಪ್ರತಿಯೊಂದು ಜೀವವೂ ಅಮೂಲ್ಯ ಎಂಬುದಕ್ಕೆ ಈ ಘಟನೆ ಜ್ವಲಂತ ನಿದರ್ಶನವಾಗಿದೆ.

'ಮಾಯಾ' ಎಂಬ ಹೆಸರಿನ ಈ ಕುಟ್ಟಿ ಆನೆಯ ಕಥೆ ಕರುಣಾಜನಕವಾಗಿದೆ. 2025 ರ ಏಪ್ರಿಲ್ 19 ರಂದು ಹುಟ್ಟಿದ ಕೆಲವೇ ಸಮಯದಲ್ಲಿ ಮಲಯಾಟೂರ್ ವಿಭಾಗದ ಕಪ್ರಿಕ್ಕಾಡ್ ಬಳಿ ಆನೆಗಳ ಹಿಂಡು ನದಿ ದಾಟುವಾಗ ಈ ಮರಿ ಆನೆ ಬೇರ್ಪಟ್ಟು ಅನಾಥವಾಗಿ ಬಿದ್ದಿತ್ತು. ತಾಯಿಯ ಹಾಲಿನಿಂದ ವಂಚಿತವಾಗಿ ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಈ ಮರಿಯನ್ನು ಕೇರಳ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿ 'ಅಭಯಾರಣ್ಯಂ' ಆನೆಗಳ ಪುನರ್ವಸತಿ ಕೇಂದ್ರಕ್ಕೆ ಕರೆತಂದರು. ಅಂದಿನಿಂದ ಸಹಾಯಕ ಅರಣ್ಯ ಪಶುವೈದ್ಯಾಧಿಕಾರಿ ಡಾ. ಬಿನೋಯ್ ಸಿ. ಬಾಬು ಮತ್ತು ಅವರ ತಂಡ ದಿನದ 24 ಗಂಟೆಯೂ ನಿರಂತರ ಆರೈಕೆ ಮಾಡಿ, ಕೈಯಿಂದಲೇ ಹಾಲು ಹಾಗೂ ಆಹಾರ ನೀಡುತ್ತಾ ಮಗುವಿನಂತೆ ಸಾಕ ಬೆಳೆಸಿದ್ದರು.

Also Read
ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ 'ಜೋಯ್‌ಮೋತಿ' ಆನೆಗೆ ಮರುಜೀವ ಕೊಟ್ಟ 'ವಂತಾರ': ಏರ್‌ಲಿಫ್ಟ್ ಮೂಲಕ ಆಸ್ಪತ್ರೆಗೆ ರವಾನೆ! Vantara Airlifts Elephant Joymoti
Pray for Maya

ಆದರೆ, 2026 ರ ಜುಲೈ 2 ರಂದು ತನ್ನ 15ನೇ ತಿಂಗಳಿನಲ್ಲಿ ಆಟವಾಡುತ್ತಿದ್ದಾಗ ಮಾಯಾ ಆಕಸ್ಮಿಕವಾಗಿ ಜಾರಿ ಬಿದ್ದು ಬಲ ಹೆಗಲಿಗೆ ಗಾಯ ಮಾಡಿಕೊಂಡಳು. ವೈದ್ಯಕೀಯ ಮಂಡಳಿಯ ನಿರಂತರ ಚಿಕಿತ್ಸೆ, ಫಿಸಿಯೋಥೆರಪಿ ಹಾಗೂ ಕ್ಯಾಲ್ಸಿಯಂ-ವಿಟಮಿನ್ ಡಿ ಪೂರಕಗಳನ್ನು ನೀಡಿದರೂ ಆಕೆಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಯಿತು. ಅಕ್ಟೋಬರ್ ವೇಳೆಗೆ ಮಾಯಾ ಸಂಪೂರ್ಣವಾಗಿ ಎದ್ದು ನಿಲ್ಲಲಾಗದೆ ಕೇವಲ ದ್ರವ ಆಹಾರವನ್ನು ಮಾತ್ರ ಸೇವಿಸುವ ಹಂತಕ್ಕೆ ತಲುಪಿದಳು. ಅಷ್ಟೇ ಅಲ್ಲದೆ ನಿರಂತರವಾಗಿ ಮಲಗಿದ್ದರಿಂದ ಹೊಟ್ಟೆ ಮತ್ತು ದೇಹದ ಮೇಲೆ ಗಾಯಗಳಾಗಿ, ಶ್ವಾಸಕೋಶದ ಸೋಂಕು ಕೂಡ ಕಾಣಿಸಿಕೊಂಡಿತು.

ಅಕ್ಟೋಬರ್ ಅಂತ್ಯದಲ್ಲಿ ನಡೆದ ಸುಧಾರಿತ ವೈದ್ಯಕೀಯ ತಪಾಸಣೆಯಲ್ಲಿ ಮಾಯಾಳ ಎಡಗೈ ಮೂಳೆ ಮತ್ತು ಬಲಗೈ ಮೂಳೆಗಳು ಮುರಿದಿರುವುದು ಹಾಗೂ ಆಕೆಯ ಮೂಳೆಗಳು ತೀವ್ರವಾಗಿ ದುರ್ಬಲಗೊಂಡಿರುವುದು ಪತ್ತೆಯಾಯಿತು. ಬಹುಶಃ ಇದು ಹುಟ್ಟಿನಿಂದ ಬಂದ ಅನುವಂಶಿಕ ಲೋಪವಿರಬಹುದು ಎಂದು ಶಂಕಿಸಿದ ವೈದ್ಯಕೀಯ ಮಂಡಳಿಯು, ಮರಿಯು ಚೇತರಿಸಿಕೊಳ್ಳುವ ಸಾಧ್ಯತೆ ತೀರ ವಿರಳವಾಗಿದೆ ಎಂದು ಅಭಿಪ್ರಾಯಪಟ್ಟಿತು. ಆಕೆಗೆ ಅನಗತ್ಯ ನೋವು ಮತ್ತು ಯಾತನೆಯನ್ನು ತಪ್ಪಿಸುವ ಉದ್ದೇಶದಿಂದ ದಯಾಮರಣ ನೀಡುವುದು ಸೂಕ್ತ ಎಂಬ ಸವಾಲಿನ ಹಾಗೂ ಕಠಿಣ ಶಿಫಾರಸನ್ನು ವೈದ್ಯರ ತಂಡ ಕೇರಳ ಅರಣ್ಯ ಇಲಾಖೆಗೆ ಸಲ್ಲಿಸಿತು.

ಆದರೆ, ಕೇರಳದ ಮುಖ್ಯ ವನ್ಯಜೀವಿ ವಾರ್ಡನ್ ಡಾ. ಪಿ. ಪುಗಜೇಂಧಿ ಅವರು ಭರವಸೆ ಕಳೆದುಕೊಳ್ಳದೆ, ಕೊನೆಯ ಹಂತದವರೆಗೂ ಪ್ರಯತ್ನಿಸಲು ನಿರ್ಧರಿಸಿ ದೇಶದ ಶ್ರೇಷ್ಠ ಪಶುವೈದ್ಯರ ಸಲಹೆ ಪಡೆದರು. ಅಸ್ಸಾಂನ ಹೆಸರಾಂತ ಆನೆ ತಜ್ಞ ಪದ್ಮಶ್ರೀ ಡಾ. ಕುಶಾಲ್ ಕೊನ್ವರ್ ಶರ್ಮಾ ಮತ್ತು ವಂತಾರ ಸಂಸ್ಥೆಯ ಮುಖ್ಯ ಪಶುವೈದ್ಯ ಡಾ. ಯದುರಾಜ್ ಖಾಡ್ಪೇಕರ್ ಅವರನ್ನೊಳಗೊಂಡ ಉನ್ನತ ಸಮಿತಿಯು ನವೆಂಬರ್ 4 ರಂದು ಸಭೆ ನಡೆಸಿ ಚರ್ಚಿಸಿತು. ಮಾಯಾಗೆ ಪ್ಯಾರಾಥೈರಾಯ್ಡ್‌ಗೆ ಸಂಬಂಧಿಸಿದ ಸಮಸ್ಯೆ ಇರಬಹುದು ಹಾಗೂ ಸೂಕ್ತ ಐಸಿಯು (ICU) ಚಿಕಿತ್ಸೆಯಿಂದ ಗುಣಮುಖಳಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟು, ಜಾಮ್‌ನಗರದ 'ವಂತಾರ' ಆಸ್ಪತ್ರೆಗೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು.

Also Read
'ವಂತಾರ' ವಿಶ್ವದ ಅತ್ಯಂತ ವಿಶ್ವಾಸಾರ್ಹ ವನ್ಯಜೀವಿ ಸಂರಕ್ಷಣಾ ಕೇಂದ್ರಗಳಲ್ಲಿ ಒಂದು : ಸಿಐಟಿಇಎಸ್ ವರದಿ
Pray for Maya

ನವೆಂಬರ್ 5, 2026 ರಂದು ಕೇರಳ ಅರಣ್ಯ ಇಲಾಖೆಯು ಮಾಯಾಳನ್ನು ವಂತಾರಕ್ಕೆ ಸ್ಥಳಾಂತರಿಸಲು ಅಧಿಕೃತ ಆದೇಶ ಹೊರಡಿಸಿತು. ಅತ್ಯಾಧುನಿಕ ಜೀವ ರಕ್ಷಕ ವ್ಯವಸ್ಥೆಗಳು, ಚಿಕಿತ್ಸಾ ಉಪಕರಣಗಳು ಹಾಗೂ ಮೂವರು ಅನುಭವಿಕ ಪಶುವೈದ್ಯರನ್ನೊಳಗೊಂಡ ವಿಶೇಷ ವಿಮಾನದಲ್ಲಿ ಮಾಯಾಳನ್ನು ಜಾಮ್‌ನಗರಕ್ಕೆ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಹೊಸ ವಾತಾವರಣದಲ್ಲಿ ಮಾಯಾಗೆ ಭಯವಾಗದಿರಲಿ ಎಂಬ ಕಾರಣಕ್ಕೆ ಆಕೆಯನ್ನು ಬಾಲ್ಯದಿಂದ ಪ್ರೀತಿಯಿಂದ ನೋಡಿಕೊಂಡ ಸಾಕಣೆದಾರ ಶ್ರೀ ನಿಖಿಲ್ ಬಾಬು ಮತ್ತು ವೈದ್ಯ ಡಾ. ಬಿನೋಯ್ ಕೂಡ ಆಕೆಯೊಂದಿಗೆ ವಂತಾರಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ.

ವಂತಾರ ಸಂಸ್ಥೆಯು ಮಾಯಾಗೆ ನಿರಂತರ 24x7 ವೈದ್ಯಕೀಯ ಮೇಲ್ವಿಚಾರಣೆ, ಅತ್ಯಾಧುನಿಕ ನೋವು ಶಮನ ಚಿಕಿತ್ಸೆ, ಸಾಗಿಸಲು ಹೈಡ್ರಾಲಿಕ್ ಲಿಫ್ಟಿಂಗ್ ವ್ಯವಸ್ಥೆ ಹಾಗೂ ಜಲಚಿಕಿತ್ಸೆಯನ್ನು (Hydrotherapy) ನೀಡಲಿದೆ. ಕೇರಳದ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದ ಸಮಿತಿಯು ಈ ಚಿಕಿತ್ಸೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಿದ್ದು, ಮಾಯಾ ಸಂಪೂರ್ಣ ಗುಣಮುಖಳಾದ ನಂತರ ಆಕೆಯನ್ನು ಮತ್ತೆ ಕೇರಳದ ಅಭಯಾರಣ್ಯಂಗೆ ಕರೆತರಲಾಗುವುದು. ಮುಗ್ಧ ಜೀವವೊಂದನ್ನು ಉಳಿಸಲು ನಡೆಯುತ್ತಿರುವ ಈ ಭಗೀರಥ ಪ್ರಯತ್ನ ಯಶಸ್ವಿಯಾಗಲಿ ಹಾಗೂ ಮಾಯಾ ಬೇಗ ಗುಣಮುಖಳಾಗಲಿ ಎಂದು ದೇಶಾದ್ಯಂತ ಸಾರ್ವಜನಿಕರು ಪ್ರಾರ್ಥಿಸುತ್ತಿದ್ದಾರೆ.