ಹಣ್ಣು ಕದ್ದ ರಾಮನ ಮೇಲೆ ಕರುಣೆ ತೋರಿದ ರಾವಣ: ಪ್ರಕಾಶ್​ ರಾಜ್​ ಹೇಳಿಕೆ ಹಿಂದಿದೆ ಈ ಅರ್ಥ, ಭುಗಿಲೆದ್ದ ಆಕ್ರೋಶ! Prakash Raj

ಹಣ್ಣು ಕದ್ದ ರಾಮನ ಮೇಲೆ ಕರುಣೆ ತೋರಿದ ರಾವಣ: ಪ್ರಕಾಶ್​ ರಾಜ್​ ಹೇಳಿಕೆ ಹಿಂದಿದೆ ಈ ಅರ್ಥ, ಭುಗಿಲೆದ್ದ ಆಕ್ರೋಶ! Prakash Raj
ಹಣ್ಣು ಕದ್ದ ರಾಮನ ಮೇಲೆ ಕರುಣೆ ತೋರಿದ ರಾವಣ: ಪ್ರಕಾಶ್​ ರಾಜ್​ ಹೇಳಿಕೆ ಹಿಂದಿದೆ ಈ ಅರ್ಥ, ಭುಗಿಲೆದ್ದ ಆಕ್ರೋಶ! Prakash Raj
Published on

ಪ್ರಮುಖ ಮುಖ್ಯಾಂಶಗಳು

  • ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕುವ ಬಹುಭಾಷಾ ನಟ ಪ್ರಕಾಶ್​ ರಾಜ್​
  • ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡ ದಕ್ಷಿಣ ಭಾರತದ ಖ್ಯಾತ ನಟ
  • ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆಗಳು ನೀಡಿದ್ದು ದೇಶಾದ್ಯಂತ ಭಾರಿ ಕೋಲಾಹಲ ಸೃಷ್ಟಿಸುತ್ತಿದೆ
  • ಪ್ರಕಾಶ್​ ರಾಜ್​ ಮಾತನಾಡಿರುವ ವಿಡಿಯೋ ವೈರಲ್​ ಆಗಿದ್ದು ಪರ-ವಿರೋಧ ಚರ್ಚೆಗೆ ನಾಂದಿಯಾಡಿದೆ
Prakash Raj : ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕುವ ಬಹುಭಾಷಾ ನಟ ಪ್ರಕಾಶ್​ ರಾಜ್​, ಇದೀಗ ಮತ್ತೊಂದು ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಹಿಂದೂ ಧರ್ಮವನ್ನು ಗುರಿಯಾಗಿಸಿಕೊಂಡು ಆಗಾಗ ಅನುಚಿತ ಹೇಳಿಕೆಗಳನ್ನು ನೀಡುವ ಪ್ರಕಾಶ್​ ರಾಜ್​, ಇದೀಗ ಮರ್ಯಾದೆ ಪುರುಷೋತ್ತಮ ಹಾಗೂ ಹಿಂದೂಗಳ ಪ್ರತೀಕ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆಗಳು ನೀಡಿದ್ದು, ದೇಶಾದ್ಯಂತ ಭಾರಿ ಕೋಲಾಹಲ ಸೃಷ್ಟಿಸುತ್ತಿದೆ. 
ಇತ್ತೀಚೆಗೆ ಕೇರಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಪ್ರಕಾಶ್ ರಾಜ್, ಹಿಂದೂಗಳ ಮಹಾಕಾವ್ಯ ರಾಮಾಯಣವನ್ನು ವಿಡಂಬನೆ ಮಾಡಿದರು. ರಾಮ ಮತ್ತು ಲಕ್ಷ್ಮಣರು ಉತ್ತರ ಭಾರತದಿಂದ ವಲಸೆ ಬಂದವರು ಮತ್ತು ಅವರಿಬ್ಬರೂ ದಕ್ಷಿಣ ಭಾರತದ ರಾವಣನ ಹೊಲಗಳಿಂದ ಹಣ್ಣುಗಳನ್ನು ಕದ್ದಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ಚರ್ಚೆಗೆ ನಾಂದಿಯಾಡಿದೆ.

ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರಕಾಶ್ ರಾಜ್​ ಅವರು ಕೇರಳ ಸಾಹಿತ್ಯ ಉತ್ಸವದಲ್ಲಿ ದೊಡ್ಡ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕಂಡುಬಂದಿದೆ. ಶಾಲಾ ಮಕ್ಕಳು ಅಭಿನಯಿಸಿದ ನಾಟಕವೊಂದರ ಬಗ್ಗೆ ವಿವರಿಸಿರುವ ಪ್ರಕಾಶ್​ ರಾಜ್​, ರಾಮಾಯಣದ ಕಥೆಯನ್ನು ಇಂದಿನ ಸಂದರ್ಭಕ್ಕೆ ತಕ್ಕಂತೆ ಮರುಸೃಷ್ಟಿಸಲಾಗಿತ್ತು ಎಂದು ತಿಳಿಸಿದ್ದಾರೆ. ರಾಮ, ಲಕ್ಷ್ಮಣ ಮತ್ತು ಸೀತೆ ದಕ್ಷಿಣಕ್ಕೆ ಬಂದಾಗ ಹಸಿವಿನಿಂದ ಅಲ್ಲಿನ ತೋಟವೊಂದರಲ್ಲಿ ಹಣ್ಣುಗಳನ್ನು ತಿನ್ನುತ್ತಾರೆ. ಆಗ ಅಲ್ಲಿನ ಮಾಲೀಕರಾದ ರಾವಣ ಮತ್ತು ಶೂರ್ಪನಖಿ ಬರುತ್ತಾರೆ. ಶೂರ್ಪನಖಿ ಹಣ್ಣು ತಿಂದಿದ್ದಕ್ಕೆ ಹಣ ಕೇಳಿದಾಗ, ರಾವಣನು "ಅವರು ಹಸಿದಿದ್ದಾರೆ, ತಿನ್ನಲಿ ಬಿಡು" ಎಂದು ಹೇಳಿ ವಿನಾಯಿತಿ ನೀಡುತ್ತಾನೆ. ಹಣವಿಲ್ಲದಿದ್ದಾಗ ರಾವಣನು, "ನೀವು ಇಲ್ಲಿಗೆ ಕೆಲಸ ಹುಡುಕಿಕೊಂಡು ಬಂದಿದ್ದೀರಿ ಎಂದರೆ, ಹಣ್ಣು ತಿಂದ ಮೇಲೆ ಅದರ ಬೀಜಗಳನ್ನು ನೆಟ್ಟು ಮರವನ್ನಾಗಿ ಬೆಳೆಸಿ ಹೋಗಿ" ಎಂದು ಹೇಳುವ ಮೂಲಕ ಉತ್ತರ ಮತ್ತು ದಕ್ಷಿಣದ ನಡುವಿನ ಸಂಬಂಧವನ್ನು ನಾಟಕೀಯವಾಗಿ ವಿವರಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಪ್ರಕಾಶ್​ ರಾಜ್​, ನೀವು ದಕ್ಷಿಣಕ್ಕೆ ಬರುವಾಗ ಇಲ್ಲಿನ ಸಂಸ್ಕೃತಿಯನ್ನು ಗೌರವಿಸಿ ಮತ್ತು ಮಲಯಾಳಂ ಕಲಿಯಿರಿ. ನಮ್ಮ ಆಹಾರ ಪದ್ಧತಿಯಲ್ಲಿ ಹಸ್ತಕ್ಷೇಪ ಮಾಡಬೇಡಿ. ನಾವು ಗೋಮಾಂಸ ತಿನ್ನುತ್ತೇವೆ ಎಂದರೆ ಅದು ನಮ್ಮ ಹಕ್ಕು. ಒಂದೇ ರಾಷ್ಟ್ರ, ಒಂದೇ ಧರ್ಮ ಎಂಬ ಘೋಷಣೆಗಳು ಇಲ್ಲಿ ನಡೆಯುವುದಿಲ್ಲ. ಇದು ನಮ್ಮ ಭೂಮಿ, ಇಲ್ಲಿ ನಮ್ಮ ಸಂಸ್ಕೃತಿಗೆ ತಕ್ಕಂತೆ ನಡೆದುಕೊಳ್ಳಿ, ಇಲ್ಲದಿದ್ದರೆ ಇಲ್ಲಿಂದ ತೊಲಗಿ ಎಂದು ಹೇಳುವ ಮೂಲಕ ಹಿಂದಿ ಹೇರಿಕೆ ಮತ್ತು ಆಹಾರ ಪದ್ಧತಿಯ ಮೇಲಿನ ನಿರ್ಬಂಧಗಳನ್ನು ಪ್ರಕಾಶ್​ ರಾಜ್​ ತೀವ್ರವಾಗಿ ಟೀಕಿಸಿದ್ದಾರೆ.
ಇನ್ನೂ ಪ್ರಕಾಶ್ ರಾಜ್ ಅವರು ನೀಡಿರುವ ಹೇಳಿಕೆಗಳಿಗೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ನಮ್ಮ ಮಹಾಕಾವ್ಯದ ಕಥೆಯನ್ನು ವಿರೂಪಗೊಳಿಸಿದ್ದಕ್ಕಾಗಿ ಅನೇಕ ಮಂದಿ ಅವರನ್ನು ಟೀಕಿಸುತ್ತಿದ್ದಾರೆ. ಅಲ್ಲದೆ, ಅವರಿಗೆ 'ರಾಷ್ಟ್ರವಿರೋಧಿ' ಹಣೆಪಟ್ಟಿ ಕಟ್ಟಲಾಗಿದೆ. ಪ್ರಕಾಶ್​ ರಾಜ್​ ಅವರು ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಬಿರುಕು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೂ ಮುಂಬರುವ ಸಿನಿಮಾಗಳಲ್ಲಿ ಪ್ರಕಾಶ್​ ರಾಜ್​ ಅವರಿಗೆ ಅವಕಾಶ ನೀಡಬಾರದೆಂಬ ಕೂಗುಗಳು ಸಹ ಕೇಳಿಬಂದಿವೆ. ಎಸ್.ಎಸ್. ರಾಜಮೌಳಿ ಮತ್ತು ಸಂದೀಪ್ ರೆಡ್ಡಿ ವಂಗಾ ಅವರಂತಹ ನಿರ್ದೇಶಕರು ವಾರಣಾಸಿ ಹಾಗೂ ಸ್ಪಿರಿಟ್ ಚಿತ್ರಗಳಿಂದ ಅವರನ್ನು ತೆಗೆದುಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ.

ದೂರು ದಾಖಲು

ರಾಮಾಯಣದ ಕುರಿತು ಪ್ರಕಾಶ್ ರಾಜ್​ ಅವರ ವಿದಾತ್ಮಕ ಹೇಳಿಕೆಗಾಗಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ವರದಿಯಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಸಿನಿಮಾ ವಿಚಾರಕ್ಕೆ ಬಂದರೆ, ಪ್ರಕಾಶ್ ರಾಜ್​ ಅವರು ಇತ್ತೀಚಿಗೆ ಬಿಡುಗಡೆಯಾದ ಅಡಿವಿ ಶೇಶ್, ಮೃನಾಲ್ ಠಾಕೂರ್ ಮತ್ತು ಅನುರಾಗ್ ಕಶ್ಯಪ್ ನಟನೆಯ ಡಕಾಯಿತ್​ ಸಿನಿಮಾದಲ್ಲಿ ನಟಿಸಿದ್ದಾರೆ. ಮುಂದೆ ಎಸ್ಎಸ್ ರಾಜಮೌಳಿಯವರ ವಾರಣಾಸಿ ಹಾಗೂ ಸಂದೀಪ್​ ರೆಡ್ಡಿ ವಂಗಾ ಅವರ ಸ್ಪಿರಿಟ್​ ಸಿನಿಮಾದಲ್ಲಿ ನಟಿಸಲಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net