ಅವಮಾನ ಸಹಿಸಿ ಅಲ್ಲಿರಲಾರೆ!...50 ವರ್ಷಗಳ 'ಕೈ' ನಂಟು ಕಡಿದುಕೊಂಡ ಬೋರ್ಡೊಲೊಯ್ ಬಿಜೆಪಿ ಸೇರ್ಪಡೆ | Pradyut Bordoloi Joins BJP

Pradyut Bordoloi Joins BJP | ನಾಗಾಂವ್ ಕ್ಷೇತ್ರದ ಹಾಲಿ ಸಂಸದ ಪ್ರದ್ಯುತ್ ಬೋರ್ಡೊಲೊಯ್  ಬಿಜೆಪಿಗೆ ಸೇರ್ಪಡೆ
Pradyut Bordoloi Joins BJP | ನಾಗಾಂವ್ ಕ್ಷೇತ್ರದ ಹಾಲಿ ಸಂಸದ ಪ್ರದ್ಯುತ್ ಬೋರ್ಡೊಲೊಯ್ ಬಿಜೆಪಿಗೆ ಸೇರ್ಪಡೆ
Published on
ದಿಸ್ಪೂರ್​: ಅಸ್ಸಾಂ ವಿಧಾನಸಭಾ ಚುನಾವಣೆಯ ರಣಕಣ ರಂಗೇರುತ್ತಿರುವಾಗಲೇ ವಿರೋಧ ಪಕ್ಷ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ಬಿದ್ದಿದ್ದು, ನಾಗಾಂವ್ ಕ್ಷೇತ್ರದ ಹಾಲಿ ಸಂಸದ ಪ್ರದ್ಯುತ್ ಬೋರ್ಡೊಲೊಯ್ (Pradyut Bordoloi Joins BJP) ಬುಧವಾರ (ಮಾ.18) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಸುಮಾರು ಐದು ದಶಕಗಳಿಂದ ಕಾಂಗ್ರೆಸ್‌ನೊಂದಿಗೆ ನಂಟು ಹೊಂದಿದ್ದ ನಾಯಕನ ಪಕ್ಷಾಂತರ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಅಲ್ಲಿ ನನಗೆ ಉಸಿರುಗಟ್ಟುತ್ತಿತ್ತು ಎಂದ ಬೋರ್ಡೊಲೊಯ್

1975 ರಿಂದ ಕಾಂಗ್ರೆಸ್​ನಲ್ಲಿದ್ದ ಬೋರ್ಡೊಲೊಯ್, ಪಕ್ಷವನ್ನು ತೊರೆದ ಬಗ್ಗೆ ಮಾತನಾಡಿದ್ದು, ಕಾಂಗ್ರೆಸ್‌ನಲ್ಲಿ ತಮಗಾದ ಅವಮಾನದ ಬಗ್ಗೆ ಕಿಡಿಕಾರಿದ್ದಾರೆ. ನನಗೆ ಅಲ್ಲಿ ಉಸಿರುಗಟ್ಟುವ ವಾತಾವರನ ನಿರ್ಮಾಣವಾಗಿತ್ತು, ಪಕ್ಷದ ಹಿರಿಯ ನಾಯಕರ ಮುಂದೆಯೇ ನನ್ನ ಮಾತಿಗೆ ಬೆಲೆ ಇಲ್ಲದಂತಾಗಿತ್ತು. ಕ್ರಿಮಿನಲ್ ಹಿನ್ನೆಲೆಯುಳ್ಳವರ ಬಗ್ಗೆ ನಾನು ನೀಡಿದ ಪುರಾವೆಗಳನ್ನು ಕಟ್ಟುಕಥೆ ಎಂದು ಜರೆದಾಗಲೂ ಅಧ್ಯಕ್ಷರು ಮೌನವಾಗಿದ್ದರು. ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ಎನ್ನುವ ಕಾರಣದಿಂದ ಪಕ್ಷ ತೊರೆದಿದ್ದೇನೆ ಎಂದರು.

ಟಿಕೆಟ್ ಮುಖ್ಯವಲ್ಲ

ಸಂಸದನಾಗಿ ಇನ್ನೂ ಮೂರು ವರ್ಷಗಳ ಅಧಿಕಾರಾವಧಿ ಬಾಕಿ ಇದ್ದರೂ ಕೂಡ ಅವಮಾನ ಸಹಿಸಿಕೊಂಡು ಅಲ್ಲಿರಲು ನನ್ನಿಂದಾಗಲಿಲ್ಲ ಎಂದಿರುವ ಬೋರ್ಡೊಲೊಯ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿದ ಒಂದು ಸಾಲಿನ ರಾಜೀನಾಮೆ ಪತ್ರದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ವಿದಾಯ ಹೇಳಿದ್ದಾರೆ.

ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದೇನು..?

ಬೋರ್ಡೊಲೊಯ್​​ರನ್ನು ಪಕ್ಷಕ್ಕೆ ಸ್ವಾಗತಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ, ಸ್ವಾಭಿಮಾನವಿರುವ ಯಾರಾದರೂ ಕೂಡ ಕಾಂಗ್ರೆಸ್‌ನಲ್ಲಿ ಉಳಿಯಲು ಸಾಧ್ಯವಿಲ್ಲ, ನಾವು ಇನ್ನೂ ಅನೇಕ ಕೈ ನಾಯಕರನ್ನು ಬಿಜೆಪಿಗೆ ಕರೆತರುವ ಗುರಿ ಹೊಂದಿದ್ದೇವೆ ಎಂದರು. ಇದಷ್ಟೆ ಅಲ್ಲದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೋರ್ಡೊಲೊಯ್​ರನ್ನು ಕಣಕ್ಕಿಳಿಸಲು ಕೇಂದ್ರ ನಾಯಕತ್ವಕ್ಕೆ ಶಿಫಾರಸು ಮಾಡುವುದಾಗಿ ಶರ್ಮಾ ತಿಳಿಸಿದ್ದಾರೆ.
ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ನಡೆದ ಈ ಬೆಳವಣಿಗೆಯು ಕಾಂಗ್ರೆಸ್‌ಗೆ ಅತಿದೊಡ್ಡ ಪೆಟ್ಟು ನೀಡಿದ್ದು, ಎಐಸಿಸಿ ಉಸ್ತುವಾರಿ ಜಿತೇಂದ್ರ ಸಿಂಗ್ ಮತ್ತು ಗೌರವ್ ಗೊಗೊಯ್ ಇದನ್ನು ಕುಟುಂಬದೊಳಗಿನ ಭಿನ್ನಾಭಿಪ್ರಾಯ ಎಂದು ಕರೆದಿದ್ದಾರೆ. ಪಕ್ಷದೊಳಗಿನ ಅಸಮಾಧಾನ ಈಗ ಬೀದಿಗೆ ಬಂದಿದ್ದು, ಅಚ್ಚರಿ ಎಂಬಂತೆ ಬೋರ್ಡೊಲೊಯ್ ಪುತ್ರ ಪ್ರತೀಕ್, ಮಾರ್ಗರಿಟಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net