ಯುಪಿಯಲ್ಲಿ ವಿದ್ಯುತ್ ಬಿಕ್ಕಟ್ಟು: ಯೋಗಿ ವರ್ಸಸ್ ಅಖಿಲೇಶ್ ‘ಪವರ್’ ವಾರ್! 2027ರ ಎಲೆಕ್ಷನ್ ಮೇಲೆ ಕಣ್ಣಿಟ್ಟು ಬಿಜೆಪಿ ವಿರುದ್ಧ ಮುಗಿಬಿದ್ದ ವಿಪಕ್ಷಗಳು! Yogi Vs Akhilesh

ಯುಪಿಯಲ್ಲಿ ವಿದ್ಯುತ್ ಬಿಕ್ಕಟ್ಟು: ಯೋಗಿ ವರ್ಸಸ್ ಅಖಿಲೇಶ್ ‘ಪವರ್’ ವಾರ್! 2027ರ ಎಲೆಕ್ಷನ್ ಮೇಲೆ ಕಣ್ಣಿಟ್ಟು ಬಿಜೆಪಿ ವಿರುದ್ಧ ಮುಗಿಬಿದ್ದ ವಿಪಕ್ಷಗಳು!
ಯುಪಿಯಲ್ಲಿ ವಿದ್ಯುತ್ ಬಿಕ್ಕಟ್ಟು: ಯೋಗಿ ವರ್ಸಸ್ ಅಖಿಲೇಶ್ ‘ಪವರ್’ ವಾರ್! 2027ರ ಎಲೆಕ್ಷನ್ ಮೇಲೆ ಕಣ್ಣಿಟ್ಟು ಬಿಜೆಪಿ ವಿರುದ್ಧ ಮುಗಿಬಿದ್ದ ವಿಪಕ್ಷಗಳು!
Published on
ಲಕ್ನೋ: ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ತೆರೆಮರೆಯಲ್ಲಿ ಚುರುಕುಕೊಳ್ಳುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ ತಲೆದೋರಿರುವ ತೀವ್ರ ವಿದ್ಯುತ್ ಬಿಕ್ಕಟ್ಟು(Yogi Vs Akhilesh) ರಾಜಕೀಯ ಚರ್ಚೆ ಸೃಷ್ಟಿಸಿದೆ. ಭೀಕರ ತಾಪಮಾನದ ನಡುವೆ ಗಂಟೆಗಟ್ಟಲೆ ಸಾಗುತ್ತಿರುವ ಅಘೋಷಿತ ಲೋಡ್ ಶೆಡ್ಡಿಂಗ್ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಮುಗಿಬಿದ್ದಿದ್ದಾರೆ. ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಬೆಚ್ಚಿಬಿದ್ದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಹೊಣೆಗಾರಿಕೆಯ ಎಚ್ಚರಿಕೆ ನೀಡಿದ್ದು, ಇಬ್ಬರು ಹಿರಿಯ ಇಂಜಿನಿಯರ್‌ಗಳನ್ನು ತಕ್ಷಣವೇ ಅಮಾನತುಗೊಳಿಸಿದ್ದಾರೆ.
ಆದರೆ, ಈ ಇಡೀ ಬಿಕ್ಕಟ್ಟಿನಲ್ಲಿ ಬಿಜೆಪಿಗೆ ದೊಡ್ಡ ತಲೆನೋವಾಗಿರುವುದು ಸ್ವಪಕ್ಷದ ಶಾಸಕರು ಮತ್ತು ಮಂತ್ರಿಗಳ ನಡೆಯಾಗಿದೆ. ಮುಂಬರುವ ಚುನಾವಣೆಯಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗುವ ಭೀತಿಯಿಂದ ಸ್ವತಃ ಬಿಜೆಪಿ ಶಾಸಕರಾದ ರಾಜೇಶ್ವರ್ ಸಿಂಗ್, ಡಾ. ನೀರಜ್ ಬೋರಾ ಮತ್ತು ಸಚಿವ ಮನೋಜ್ ಪಾಂಡೆ ಅವರು ತಮ್ಮದೇ ಸರ್ಕಾರದ ಇಂಧನ ಸಚಿವ ಅರವಿಂದ್ ಕುಮಾರ್ ಶರ್ಮಾ ಅವರಿಗೆ ಪತ್ರ ಬರೆದಿದ್ದು, ತಕ್ಷಣವೇ ವಿದ್ಯುತ್ ಸರಬರಾಜು ಸುಧಾರಿಸುವಂತೆ ಸಾರ್ವಜನಿಕವಾಗಿ ಒತ್ತಾಯಿಸಿದ್ದಾರೆ.

ಗ್ರಾಮದಿಂದ ನಗರದವರೆಗೆ ಕರೆಂಟ್ ಕಟ್ ಮಾಡುವಂತಿಲ್ಲ: ಸಿಎಂ ಯೋಗಿ ವಾರ್ನಿಂಗ್

ಭಾನುವಾರ ಇಂಧನ ಇಲಾಖೆ, ಯುಪಿಪಿಸಿಎಲ್ (UPPCL) ಮತ್ತು ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳ (DISCOMs) ಉನ್ನತ ಅಧಿಕಾರಿಗಳೊಂದಿಗೆ ತುರ್ತು ಪರಾಮರ್ಶನಾ ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ವಿದ್ಯುತ್ ಸರಬರಾಜಿನಲ್ಲಿ ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ. ಹಳ್ಳಿಗಳಿಂದ ನಗರಗಳವರೆಗೆ ನಿರಂತರ ವಿದ್ಯುತ್ ಸರಬರಾಜು ಖಚಿತಪಡಿಸಿಕೊಳ್ಳಬೇಕು. ಕೇವಲ ದೂರುಗಳನ್ನು ದಾಖಲಿಸಿಕೊಳ್ಳುವುದು ಸಾಲದು, ಕರೆಂಟ್ ಹೋದರೆ ಅದಕ್ಕೆ ಸೂಕ್ತ ಕಾರಣ ಮತ್ತು ಯಾವಾಗ ಮರಳಿ ಬರುತ್ತದೆ ಎಂಬ ಮಾಹಿತಿಯನ್ನು ಗ್ರಾಹಕರಿಗೆ ತಕ್ಷಣ ತಲುಪಿಸಬೇಕು ಎಂದು ಆದೇಶಿಸಿದ್ದಾರೆ. ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಘಾಜಿಯಾಬಾದ್ ಮತ್ತು ಮೀರತ್‌ನ ಇಬ್ಬರು ಇಂಜಿನಿಯರ್‌ಗಳನ್ನು ಸಭೆಯ ಬೆನ್ನಲ್ಲೇ ಅಮಾನತು ಮಾಡಲಾಗಿದೆ.
ಬೀದಿಗಿಳಿದು ಆಕ್ರೋಶ ಹೊರಹಾಕಿದ ಜನರು; ಪವರ್ ಹೌಸ್‌ನಲ್ಲೇ ಮಲಗಿದ ಯುವಕ!
ರಾಜ್ಯದ ಪ್ರಮುಖ ನಗರಗಳಲ್ಲಿ ಸಾರ್ವಜನಿಕರ ಆಕ್ರೋಶ ತುತ್ತತುದಿಗೆ ತಲುಪಿದೆ. ರಾಜಧಾನಿ ಲಕ್ನೋದ ಬುಧೇಶ್ವರ್, ಫೈಜುಲ್ಲಾಗಂಜ್ ಪ್ರದೇಶಗಳಲ್ಲಿ ಸಾರ್ವಜನಿಕರು ಮಧ್ಯರಾತ್ರಿ ರಸ್ತೆ ತಡೆ ನಡೆಸಿ ಆಂದೋಲನ ನಡೆಸಿದ್ದಾರೆ. ವಾರಣಾಸಿಯಲ್ಲಿ ತೀವ್ರ ಬೇಸಿಗೆಯ ಬೇಗೆ ಹಾಗೂ ನಿರಂತರ ಪವರ್ ಕಟ್‌ನಿಂದ ಬೇಸತ್ತ ಯುವಕನೊಬ್ಬ ತನ್ನ ಹಾಸಿಗೆ-ಹೊದಿಕೆಯನ್ನು ಹಿಡಿದುಕೊಂಡು ನೇರವಾಗಿ ವಿದ್ಯುತ್ ಉಪಕೇಂದ್ರಕ್ಕೆ ನುಗ್ಗಿ, ಅಲ್ಲಿಯೇ ಮಲಗಿ ವಿನೂತನ ಪ್ರತಿಭಟನೆ ನಡೆಸಿದ್ದಾನೆ. ಇತ್ತ ಕಾನ್ಪುರದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಉತ್ತರ ಪ್ರದೇಶದ ವಿದ್ಯುತ್ ವ್ಯವಸ್ಥೆ ಸತ್ತಿದೆ ಎಂದು ಬಿಂಬಿಸುವ ಪೋಸ್ಟರ್‌ಗಳಿಗೆ ಹಾರ ಹಾಕಿ, ಮೇಣದಬತ್ತಿ ಹಚ್ಚಿ ಸಾಂಕೇತಿಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಬಿಕ್ಕಟ್ಟಿಗೆ ಅಸಲಿ ಕಾರಣವೇನು? ತೈಲ ಮತ್ತು ಕಲ್ಲಿದ್ದಲು ಲೆಕ್ಕ ಬಿಚ್ಚಿಟ್ಟ ಅಧಿಕಾರಿಗಳು

ಅಧಿಕಾರಿಗಳ ಅಂಕಿ-ಅಂಶಗಳ ಪ್ರಕಾರ, ಈ ವರ್ಷದ ಭೀಕರ ಬಿಸಿಗಾಳಿಯಿಂದಾಗಿ ಉತ್ತರ ಪ್ರದೇಶದಲ್ಲಿ ವಿದ್ಯುತ್ ಬೇಡಿಕೆ ಊಹಿಸಲಾಗದ ಮಟ್ಟಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಏಪ್ರಿಲ್ 15 ರಿಂದ ಮೇ 22 ರ ಅವಧಿಯಲ್ಲಿ ನಿತ್ಯದ ಸರಾಸರಿ ವಿದ್ಯುತ್ ಬಳಕೆ 501 ಮಿಲಿಯನ್ ಯೂನಿಟ್ ಇತ್ತು, ಆದರೆ ಈ ವರ್ಷ ಅದು 561 ಮಿಲಿಯನ್ ಯೂನಿಟ್‌ಗೆ ಜಿಗಿದಿದೆ. ಗರಿಷ್ಠ ಬೇಡಿಕೆ 30,339 ಮೆಗಾವ್ಯಾಟ್‌ಗೆ ತಲುಪಿದ್ದು, ದೇಶದಲ್ಲೇ ಅತಿ ಹೆಚ್ಚು ವಿದ್ಯುತ್ ಬಳಸುವ 2ನೇ ರಾಜ್ಯವಾಗಿ ಯುಪಿ ಹೊರಹೊಮ್ಮಿದೆ. ಮೇ 15 ರ ನಂತರ ಕೆಲವು ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆ ಕುಂಠಿತಗೊಂಡಿದ್ದರಿಂದ ಈ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಸದ್ಯಕ್ಕೆ 12 ರಾಜ್ಯಗಳೊಂದಿಗೆ ಪವರ್ ಬ್ಯಾಂಕಿಂಗ್ ಒಪ್ಪಂದ ಮಾಡಿಕೊಂಡು ಪರಿಸ್ಥಿತಿ ನಿಭಾಯಿಸಲಾಗುತ್ತಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಬಿಜೆಪಿ ವರ್ಸಸ್ ಅಖಿಲೇಶ್; ಮುಂದುವರಿದ ರಾಜಕೀಯ ವಾಗ್ದಾಳಿ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿ ಸರ್ಕಾರ ಮತ್ತು ಭ್ರಷ್ಟ ಗುತ್ತಿಗೆದಾರರ ಸಾಟಿಯಿಲ್ಲದ ಲೂಟಿಯೇ ಈ ವಿದ್ಯುತ್ ದುರಂತಕ್ಕೆ ಕಾರಣ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಇಂಧನ ಸಚಿವ ಎ.ಕೆ. ಶರ್ಮಾ, ಅಖಿಲೇಶ್ ಯಾದವ್ ಅವರ ಮುಖಂಡತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಕತ್ತಲೆಯ ಸಾಮ್ರಾಜ್ಯವಿತ್ತು, ನಮ್ಮ ಆಡಳಿತದಲ್ಲಿ ಟ್ರಾನ್ಸ್‌ಫಾರ್ಮರ್ ವೈಫಲ್ಯಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಲೆಕ್ಕ ನೀಡಿದ್ದಾರೆ. ಮತ್ತೊಂದೆಡೆ ಬಿಎಸ್ಪಿ ಅಧಿನಾಯಕಿ ಮಾಯಾವತಿ ಮತ್ತು ಕಾಂಗ್ರೆಸ್ ಕೂಡ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಜನರಿಗೆ ಸೂಕ್ತ ಸೌಲಭ್ಯ ನೀಡುವುದು ಸರ್ಕಾರದ ಕರ್ತವ್ಯ ಎಂದು ಎಚ್ಚರಿಸಿದ್ದಾರೆ.
2027 ರ ಪಂಚರಾಜ್ಯ ಚುನಾವಣೆಗಳ ದೃಷ್ಟಿಯಿಂದ ಉತ್ತರ ಪ್ರದೇಶದ ಈ ವಿದ್ಯುತ್ ರಾಜಕೀಯ ಮುಂಬರುವ ದಿನಗಳಲ್ಲಿ ಇನ್ನೆಷ್ಟು ರೋಚಕ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದನ್ನು ಇಡೀ ದೇಶ ಕುತೂಹಲದಿಂದ ಗಮನಿಸುತ್ತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net