ವೈರಲ್ ಪ್ರಪೋಸಲ್, ಶಿಸ್ತು ಕ್ರಮದ ಭೀತಿ: ಹೆಲಿಕಾಪ್ಟರ್ ಮುಂದೆ ಪ್ರೇಮ ನಿವೇದನೆ ಮಾಡಿದ ಸೇನಾ ಅಧಿಕಾರಿಗೆ ಸಂಕಷ್ಟ! Army Officer Proposal

Army Officer Proposal (ಚಿತ್ರ X)
Army Officer Proposal (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಹಾರಾಟ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೆನ್ನಲ್ಲೇ, ತನ್ನ ಗೆಳತಿಗೆ ವಿಶಿಷ್ಟವಾಗಿ ಪ್ರಪೋಸ್ ಮಾಡಿದ್ದ ಭರತ್
  • ನಾಸಿಕ್‌ನ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್‌ನಲ್ಲಿ (CATS) ತರಬೇತಿ ಪೂರ್ಣಗೊಳಿಸಿದ ಕ್ಯಾಪ್ಟನ್ ಭರತ್ ಭಾರದ್ವಾಜ್
  • ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸೇನಾ ಉನ್ನತಾಧಿಕಾರಿಗಳು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ
ಮಹಾರಾಷ್ಟ್ರ: ನಾಸಿಕ್‌ನಲ್ಲಿರುವ ಕಾಂಬ್ಯಾಟ್ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್‌ನಲ್ಲಿ (CATS) ತಮ್ಮ ಹಾರಾಟ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೆನ್ನಲ್ಲೇ, ತನ್ನ ಗೆಳತಿಗೆ ವಿಶಿಷ್ಟವಾಗಿ ಪ್ರಪೋಸ್ ಮಾಡಿದ್ದ ಭಾರತೀಯ ಸೇನೆಯ ಅಧಿಕಾರಿಯೊಬ್ಬರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು. 
ಆದರೆ, ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ಮತ್ತು ಗಮನ ಸೆಳೆದ ಈ ರೋಮ್ಯಾಂಟಿಕ್ ನಡೆ, ಇದೀಗ ಭರತ್​ ಭಾರದ್ವಾಜ್​ರನ್ನು ಸಂಕಷ್ಟಕ್ಕೆ ದೂಡಿದ್ದು, ಸೇನಾ ಶಿಸ್ತು ಮತ್ತು ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಸೇನಾ ನಿಯಮಗಳ ಉಲ್ಲಂಘನೆ ಮತ್ತು ಶೋಕಾಸ್ ನೋಟಿಸ್

ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸೇನಾ ಉನ್ನತಾಧಿಕಾರಿಗಳು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಿಲಿಟರಿ ನಿಯಮಗಳ ಪ್ರಕಾರ, ರಕ್ಷಣಾ ಇಲಾಖೆಯ ಹೆಲಿಕಾಪ್ಟರ್‌ಗಳು, ಸಮವಸ್ತ್ರ ಮತ್ತು ತರಬೇತಿ ಮೈದಾನಗಳು ಕಟ್ಟುನಿಟ್ಟಾದ ಅಧಿಕೃತ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ವೈಯಕ್ತಿಕ ಪ್ರಚಾರ ಅಥವಾ ಇಂತಹ ಸಾರ್ವಜನಿಕ ಪ್ರದರ್ಶನಗಳಿಗೆ ಇವುಗಳನ್ನು ಬಳಸಿಕೊಳ್ಳುವುದು ಮಿಲಿಟರಿ ಶಿಷ್ಟಾಚಾರ ಮತ್ತು ಸಭ್ಯತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದು, ಈ ಹಿನ್ನಲೆಯಲ್ಲಿ ಶೋಕಾಸ್​  ನೋಟಿಸ್​ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. 

ಘಟನೆ ಹಿನ್ನಲೆ ಏನು?

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಕಾಂಬ್ಯಾಟ್ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್‌ನಲ್ಲಿ (CATS) ತಮ್ಮ ಹಾರಾಟ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೆನ್ನಲ್ಲೇ, ಭಾರತೀಯ ಸೇನಾ ವಾಯುಯಾನದ ಕ್ಯಾಪ್ಟನ್ ಭರತ್ ಭಾರದ್ವಾಜ್ ಎಲ್ಲರ ಸಮ್ಮುಖದಲ್ಲೇ ತಮ್ಮ ಗೆಳತಿ ಆರುಷಿ ಎದುರು ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದರು.

ಪೈಲಟ್​ ಭಾರದ್ವಾಜ್​ ಹೇಳಿದ್ದೇನು?

ಈ ಸಂದರ್ಭದಲ್ಲಿ ಮಾತನಾಡಿದ  ಪೈಲಟ್​ ಭಾರದ್ವಾಜ್​, ನಾವೆಲ್ಲರೂ ಇಂದು ಅಧಿಕೃತವಾಗಿ ಪೈಲಟ್​ಗಳು ಮತ್ತು ಭೋಧಕರಾಗಿದ್ದೇವೆ. ಇದು ನಮ್ಮೆಲ್ಲರಿಗೂ ಅತ್ಯಂತ ದೊಡ್ಡ ದಿನವಾಗಿತ್ತು. ನಮ್ಮ ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ. ಕಳೆದ ಐದು ವರ್ಷಗಳಿಂದ ನಾವಿಬ್ಬರೂ ಒಬ್ಬರಿಗೊಬ್ಬರು ಪರಿಚಿತರು. ಅವಳಿಗೆ ಮದುವೆಯ ಪ್ರಸ್ತಾಪ ಮಾಡಲು ಇದಕ್ಕಿಂತ ಉತ್ತಮವಾದ ದಿನ ಇನ್ನೊಂದಿಲ್ಲ ಎಂದು ಭಾವಿಸಿದ್ದೆ. 
ಇದು ಕೇವಲ ನನಗೆ ಮಾತ್ರವಲ್ಲ, ನನ್ನ ಇಡೀ ಕುಟುಂಬಕ್ಕೂ ಒಂದು ಅಪಾರ ಹೆಮ್ಮೆಯ ಮತ್ತು ದೊಡ್ಡ ದಿನವಾಗಿತ್ತು. ಹೀಗಾಗಿ, ನನ್ನ ಪ್ರೇಯಸಿಗೂ ಈ ದಿನವನ್ನು ಜೀವನದಲ್ಲೇ ಮರೆಯಲಾಗದ ಅತ್ಯಂತ ಸ್ಮರಣೀಯ ದಿನವನ್ನಾಗಿ ಮಾಡಬೇಕೆಂಬುದು ನನ್ನ ಆಲೋಚನೆಯಾಗಿತ್ತು ಎಂದು ಕ್ಯಾಪ್ಟನ್​ ಭಾರದ್ಬಾಜ್​ ಸುದ್ದಿ ಮೂಲಗಳಿಗೆ ಹೇಳಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿತು. ಅನೇಕ ಬಳಕೆದಾರರು ಸಾಧನೆ ಮತ್ತು ಅತ್ಯಂತ ಸುಂದರವಾದ ಪ್ರಣಯದ ಈ ವಿಶಿಷ್ಟ ಸಂಯೋಜನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಶಿಸ್ತಿನ ಸಿಪಾಯಿಯೊಬ್ಬನ ಹೃದಯದಲ್ಲಿ ಇಷ್ಟೊಂದು ಅದ್ಭುತ ಪ್ರೀತಿ ಅಡಗಿದೆ ಎಂಬುದನ್ನು ನೋಡುವುದೇ ಚಂದ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net