

ಮಧ್ಯಪ್ರದೇಶ: ವಾಣಿಜ್ಯ ರಾಜಧಾನಿ ಇಂದೋರ್ನಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭವಿಸಿದ ದುರಂತ ದೇಶವನ್ನು ಬೆಚ್ಚಿಬೀಳಿಸಿದೆ. ಕಳೆದೊಂದು ವಾರದಲ್ಲೇ ಐದು ತಿಂಗಳ ಮಗು ಸೇರಿದಂತೆ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಸರ್ಕಾರ ಹೈಕೋರ್ಟಿಗೆ ನೀಡಿರುವ ಮಾಹಿತಿಯಲ್ಲಿ ‘ನಾಲ್ವರು ಮೃತಪಟ್ಟಿದ್ದಾರೆ’ ಎಂದು ಹೇಳಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಾರದೊಳಗೆ ವಿವರವಾದ ವರದಿ ಸಲ್ಲಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. ಕೊಳಚೆ ನೀರಿನಲ್ಲಿದ್ದ ಘಾತಕ ಬ್ಯಾಕ್ಟೀರಿಯಾ ಕುಡಿಯುವ ನೀರಿಗೆ ಸೇರಿರುವುದೇ ಈ ಘಟನೆಗೆ ಕಾರಣ ಎಂದು ಪ್ರಾಥಮಿಕ ಪರೀಕ್ಷೆಗಳು ದೃಢಪಡಿಸಿವೆ.
ದೇಶದ ಸ್ವಚ್ಛ ನಗರಿ ಖ್ಯಾತಿಯ ಇಂದೋರ್ ಈಗ ಕಲುಷಿತ ನೀರಿನ ಸೇವನೆ ದುರಂತದಿಂದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಲುಷಿತ ನೀರಿನ ಸೇವನೆಯಿಂದ ಈವರೆಗೆ 10 ಜನರು ಪ್ರಾಣ ಕಳೆದುಕೊಂಡಿದ್ದು, 150ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಡಿಯುವ ನೀರು ಪೂರೈಕೆಯ ಪೈಪ್ಲೈನ್ನಲ್ಲಿ ಸೋರಿಕೆಯಾಗುತ್ತಿದ್ದರೂ, ಅದನ್ನು ತಡೆಯುವಲ್ಲಿ, ಕೂಡಲೇ ದುರಸ್ತಿಗೊಳಿಸುವಲ್ಲಿ ಸ್ಥಳೀಯ ಆಡಳಿತ ಏಕೆ ನಿರ್ಲಕ್ಷ್ಯ ವಹಿಸಿತು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಸರ್ಕಾರ ಶುಕ್ರವಾರ ಹೈಕೋರ್ಟ್ಗೆ ಸಲ್ಲಿಸಿರುವ ಮಾಹಿತಿಯಲ್ಲಿ ಕಲುಷಿತ ನೀರಿನ ಸೇವನೆಯಿಂದ ನಾಲ್ವರು ಮೃತಪಟ್ಟಿದ್ದಾರೆ ಎಂದು ಹೇಳಿದೆ. ಆದರೆ, ಆಸ್ಪತ್ರೆಗಳ ಹೇಳಿಕೆ ಪ್ರಕಾರ ಮೃತರ ಸಂಖ್ಯೆ 10. ಹೈಕೋರ್ಟ್ನಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ಜ.6ರಂದು ನಡೆಯಲಿದೆ.
ಘಟನೆಯ ಬಗ್ಗೆ ಮುಖ್ಯಮಂತ್ರಿ ಮೋಹನ್ ಯಾದವ್ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಕಲುಷಿತ ನೀರಿನ ಸೇವನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಎಲ್ಲ ರೋಗಿಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದಿದ್ದಾರೆ.
ಕಲುಷಿತ ನೀರಿನಲ್ಲಿ ಬ್ಯಾಕ್ಟೀರಿಯಾ: ಇಂದೋರ್ನಲ್ಲಿ ಅತಿಸಾರ ಮತ್ತು ವಾಂತಿಯಿಂದ ಕಳೆದೊಂದು ವಾರದಲ್ಲಿ ಹತ್ತು ಜನರು ಮೃತಪಟ್ಟಿದ್ದಕ್ಕೆ ಕಲುಷಿತ ನೀರಿನ ಸೇವನೆಯೇ ಕಾರಣ ಎಂಬುದು ಪ್ರಯೋಗಾಲಯದ ಪರೀಕ್ಷೆಯಿಂದ ಖಚಿತವಾಗಿದೆ. ಇಂದೋರ್, ಕಳೆದ ಎಂಟು ವರ್ಷಗಳಿಂದ ದೇಶದ ಅತ್ಯಂತ ಸ್ವಚ್ಛ ನಗರ ಎನಿಸಿದ್ದರೂ, ಹಲವು ಪ್ರದೇಶಗಳಲ್ಲಿ ಕಲುಷಿತ ನೀರು ಸರಬರಾಜಾಗುತ್ತಿದೆ ಎಂಬುದು ಈ ವರದಿಯಿಂದ ಬಹಿರಂಗವಾಗಿದೆ. ಈ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಅದರಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಇದೇ ನೀರಿನ ಸೇವನೆ ಮಾಡಿದ್ದರಿಂದ, ಬ್ಯಾಕ್ಟೀರಿಯಾ ದೇಹದೊಳಗೆ ಪ್ರವೇಶಿಸಿ, ಆರೋಗ್ಯ ಬಿಗಡಾಯಿಸಿದೆ ಎಂದು ಮೂಲಗಳು ಹೇಳಿವೆ.
‘ಭಗೀರಥಪುರ ಪ್ರದೇಶದಲ್ಲಿ ಪೈಪ್ಲೈನ್ ಸೋರಿಕೆಯಿಂದಾಗಿ ಕುಡಿಯುವ ನೀರು ಕಲುಷಿತಗೊಂಡಿದ್ದು, ಆ ನಂತರ ಸೋಂಕು ಹರಡಿತ್ತು ಎಂಬುದು ಇಂದೋರ್ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆ ವೇಳೆ ಖಚಿತವಾಗಿದೆ’ ಎಂದು ಇಂದೋರ್ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್ಒ) ಡಾ. ಮಾಧವ್ ಪ್ರಸಾದ್ ಹಸಾನಿ ಗುರುವಾರ ಹೇಳಿದ್ದಾರೆ. ಆದರೆ, ಪ್ರಯೋಗಾಲಯ ಪರೀಕ್ಷೆಗೆ ಸಂಬಂಧಿಸಿ ಹೆಚ್ಚಿನ ವಿವರವನ್ನು ಹಂಚಿಕೊಂಡಿಲ್ಲ. ಭಗೀರಥಪುರದ ಪೊಲೀಸ್ ಹೊರಠಾಣೆ ಬಳಿಯ ಶೌಚಗೃಹ ನಿರ್ವಿುಸಿರುವ ಸ್ಥಳದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ನಲ್ಲಿ ಸೋರಿಕೆ ಕಂಡುಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದೋರ್ನ ಭಗೀರಥಪುರ ಪ್ರದೇಶದ ಸ್ಥಿತಿ ತೀವ್ರ ಕಳವಳಕಾರಿಯಾಗಿದೆ. ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬರಿಬ್ಬರು, ಕೆಲವೆಡೆ ಕುಟುಂಬದ ಎಲ್ಲ ಸದಸ್ಯರು ಅನಾರೋಗ್ಯ ಪೀಡಿತರಾಗಿದ್ದಾರೆ. ಕಲುಷಿತ ನೀರಿನ ಸಮಸ್ಯೆ ಇಂದು-ನಿನ್ನೆಯದೇನಲ್ಲ. ಕಳೆದೊಂದು ವರ್ಷದಿಂದ ಈ ಸಮಸ್ಯೆಯ ಪ್ರಮಾಣ ಹೆಚ್ಚುತ್ತಲೇ ಇದೆ. ಜನರು ಇದರಿಂದ ಆಗಾಗ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಈ ಕುರಿತಂತೆ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದರೂ, ಮನವಿ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸರ್ಕಾರ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ಘೋಷಿಸಿದ್ದರೂ, ಹಲವು ಆಸ್ಪತ್ರೆಗಳು ಹಣ ನೀಡಿದರಷ್ಟೇ ಚಿಕಿತ್ಸೆ ಎಂದು ಹೇಳುತ್ತಿವೆ ಎಂಬುದಾಗಿ ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಮಧ್ಯಪ್ರದೇಶದ ಖಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ದಂಡೆ ಮೇಲೆ ವಿಷಯುಕ್ತ ಆಹಾರ ಸೇವನೆಯಿಂದ ಕನಿಷ್ಠ 200 ಗಿಳಿಗಳು ಸತ್ತಿವೆಯೆಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಬದ್ವಾ ಪ್ರದೇಶದ ಸೇತುವೆಯ ಬಳಿ ಗಿಳಿಗಳ ದೇಹಗಳು ಪತ್ತೆಯಾಗಿವೆ. ಅವುಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹಕ್ಕಿಜ್ವರದಿಂದ ಮೃತಪಟ್ಟಿರುವ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಕೆಲವು ಹಕ್ಕಿಗಳು ಜೀವಂತವಾಗಿದ್ದು ಒದ್ದಾಡುತ್ತಿದ್ದು ಅವುಗಳನ್ನು ರಕ್ಷಿಸಲು ಪ್ರಯತ್ನಿಸಲಾಯಿತು. ಆದರೆ ವಿಷದ ಪ್ರಭಾವ ಎಷ್ಟಿತ್ತೆಂದರೆ ಪ್ರಯತ್ನ ಫಲಿಸದೆ ಮೃತಪಟ್ಟವು ಎಂದು ಜಿಲ್ಲಾ ವನ್ಯಜೀವಿ ಸಂರಕ್ಷಕ ಟೋನಿ ಶರ್ಮಾ ತಿಳಿಸಿದ್ದಾರೆ.
ಇಂದೋರ್ ಕಲುಷಿತ ನೀರಿನ ಸೇವನೆಯ ದುರಂತಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ‘ಇಂದೋರ್ನಲ್ಲಿ ನೀರಲ್ಲ, ವಿಷವನ್ನು ವಿತರಿಸಲಾಗಿದೆ. ಆದರೂ, ಆಡಳಿತ ಕುಂಭಕರ್ಣನ ನಿದ್ರೆಯಲ್ಲಿದೆ. ಜನರು ಪದೇಪದೆ ಅಶುದ್ಧ ಹಾಗೂ ಕಲುಷಿತ ನೀರಿನ ಬಗ್ಗೆ ದೂರು ನೀಡಿದರೂ ಅವರ ಅಹವಾಲನ್ನು ಏಕೆ ಆಲಿಸಲಾಗಿಲ್ಲ’ ಎಂದು ಪ್ರಶ್ನಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.
‘ದೆಹಲಿಯಲ್ಲಿ ಗಾಳಿ ವಿಷಯುಕ್ತವಾಗಿದೆ. ಇಂದೋರ್ನಲ್ಲಿ ನೀರು ವಿಷಯುಕ್ತವಾಗಿದೆ. ಶುದ್ಧ ಗಾಳಿ ಮತ್ತು ನೀರು ಒದಗಿಸಲು ಸರ್ಕಾರ ವಿಫಲವಾಗಿದೆ. ಜಲಜೀವನ್ ಮಿಷನ್ ಸಾಧನೆಯ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಈ ಸಾವುಗಳ ಕುರಿತಂತೆ ಏಕೆ ಮೌನವಾಗಿದ್ದಾರೆ?’ ಎಂದು ಪ್ರಶ್ನಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಸರ್ಕಾರಿ ಯೋಜನೆಗಳು ಭ್ರಷ್ಟಾಚಾರದಿಂದ ಪೀಡಿತವಾಗಿವೆ’ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಮೋಹನ್ ಯಾದವ್ಗೆ ಇದು ಪರೀಕ್ಷಾ ಸಮಯ. ಜೀವನದ ಬೆಲೆಯನ್ನು ಎರಡು ಲಕ್ಷ ರೂ.ನಲ್ಲಿ ಅಳೆಯಲಾಗುವುದಿಲ್ಲ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಆಗ್ರಹಿಸಿದ್ದಾರೆ.
ಕರ್ನಾಟಕದ ನೂರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಇಂದಿಗೂ ಮರೀಚಿಕೆಯಾಗಿದೆ. ತುಂಬ ದಿನಗಳಿಂದ ಸಂಗ್ರಹಗೊಂಡ ನೀರನ್ನು ಮತ್ತು ಕಲುಷಿತ ಜಲಮೂಲಗಳಿಂದ ಪಡೆದ ನೀರನ್ನು ಸೇವಿಸುವುದರಿಂದ ಜನರು ಪದೇಪದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ವಾಂತಿಭೇದಿ, ಅತಿಸಾರ, ಜ್ವರ, ಕಾಲರಾ, ಅಲರ್ಜಿಯಂಥ ಸಮಸ್ಯೆಗಳು ಹೆಚ್ಚಿದ್ದು, ಕಲುಷಿತ ನೀರು ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಿದೆ.
ಬೀದರ್, ರಾಯಚೂರು, ಯಾದಗಿರಿ, ಚಿತ್ರದುರ್ಗ, ತುಮಕೂರು, ಮಂಡ್ಯ, ದಾವಣಗೆರೆ, ವಿಜಯಪುರ ಮತ್ತು ಮೈಸೂರು ಜಿಲ್ಲೆಗಳ ಗ್ರಾಮಗಳಲ್ಲಿ ಕಲುಷಿತ ನೀರಿನ ಸೇವನೆಯಿಂದ ಅನಾರೋಗ್ಯದ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಕೊಳಚೆ ನೀರು ಮಿಶ್ರಣ, ಪೈಪ್ಲೈನ್ ಸೋರಿಕೆ, ಅಪೂರ್ಣ ನೈರ್ಮಲ್ಯ ವ್ಯವಸ್ಥೆಯಿಂದ ಇಂಥ ಘಟನೆಗಳು ಪದೇಪದೆ ಮರುಕಳಿಸುತ್ತಿವೆ.
ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ರಾಜ್ಯದಲ್ಲಿ 2024ರಲ್ಲಿ ಅತಿಸಾರದ (ಡಯೇರಿಯಾ) 66 ಸಾವಿರ ಪ್ರಕರಣಗಳು ವರದಿಯಾಗಿದ್ದವು. ಪ್ರಾಣಿಗಳ ಮೂಲಕ ಹರಡುವ ಬ್ಯಾಕ್ಟೀರಿಯಾ ಸೋಂಕು (ಲೆಪ್ಟೊಸ್ಪಿರೋಸಿಸ್) ಕೂಡ ಹಲವರಲ್ಲಿ ಕಾಣಿಸಿಕೊಂಡಿತ್ತು.