ನವದೆಹಲಿ: ಕಳೆದ ವರ್ಷ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ್ದ ಅತ್ಯಂತ ಯಶಸ್ವಿ ಆಪರೇಷನ್ ಸಿಂಧೂರ(Rajnath Singh No Casualty Remark) ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ರಾಜಕೀಯ ವಾಕ್ಸಮರ ಶುರುವಾಗಿದೆ. ಈ ಕಾರ್ಯಾಚರಣೆಯಲ್ಲಿ ಯಾವೊಬ್ಬ ಯೋಧನೂ ಮೃತಪಟ್ಟಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ ಎಂದು ವಿಪಕ್ಷಗಳು ಮುಗಿಬಿದ್ದ ಬೆನ್ನಲ್ಲೇ, ರಕ್ಷಣಾ ಸಚಿವಾಲಯವು ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ವಿಪಕ್ಷಗಳು ಮತ್ತು ಕೆಲವು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು ರಕ್ಷಣಾ ಸಚಿವರ ಭಾಷಣವನ್ನು ಉದ್ದೇಶಪೂರ್ವಕವಾಗಿಯೇ ತಪ್ಪಾಗಿ ಅರ್ಥೈಸಿ, ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಸರ್ಕಾರ ಕಿಡಿಕಾರಿದೆ.