ಚಹಾ ತೋಟದಲ್ಲಿ ರಾಜಕೀಯ ಬಿರುಗಾಳಿ

ಚಹಾ ತೋಟದಲ್ಲಿ ರಾಜಕೀಯ ಬಿರುಗಾಳಿ
ಚಹಾ ತೋಟದಲ್ಲಿ ರಾಜಕೀಯ ಬಿರುಗಾಳಿ
Published on
ಅಸ್ಸಾಂನ ಚಹಾದ ತೋಟಗಳಲ್ಲಿ ಈಗ ಮುಂಚಿನಂತೆ ನೆಮ್ಮದಿಯ ತಂಗಾಳಿ ಇಲ್ಲ. ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದ ನುಸುಳುಕೋರರೇ ಈ ಚಹಾ ತೋಟಗಳಲ್ಲಿ ಮತ್ತು ಸ್ಥಳೀಯ ವ್ಯಾಪಾರೋದ್ಯಮಗಳಲ್ಲಿ ಕಾರ್ವಿುಕರಾಗಿ ಕೆಲಸ ಮಾಡುತ್ತಿದ್ದು, ಸ್ಥಳೀಯರ ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಯ ಅವಕಾಶ ವನ್ನು ಕಸಿದುಕೊಳ್ಳುತ್ತಿದ್ದಾರೆ. ಹಾಗಾಗಿ, ಬಾಂಗ್ಲಾದಿಂದ ಬಂದಿರುವ ವಲಸಿಗರ ಬಗ್ಗೆ ಸ್ಥಳೀಯರಲ್ಲಿ ಆಕ್ರೋಶವಿದೆ, ಅಸಹನೆಯಿದೆ. ಹಾಗಂತ, ಎಲ್ಲ ನುಸುಳುಕೋರರನ್ನು ವಾಪಸ್ ಬಾಂಗ್ಲಾದೇಶಕ್ಕೆ ಕಳುಹಿಸಿಕೊಡುವುದು ಸುಲಭದ ಕೆಲಸವೇನಲ್ಲ.
ಏಕೆಂದರೆ, ಇಂಥ ನುಸುಳುಕೋರರು ಸ್ಥಳೀಯ ಏಜೆಂಟ್​ಗಳಿಗೆ ಲಂಚ ನೀಡಿ ಆಧಾರ್ ಕಾರ್ಡ್, ಪಡಿತರ ಚೀಟಿಯನ್ನು ಮಾಡಿಸಿಕೊಂಡಿದ್ದಾರೆ. ಸಮೀಕ್ಷೆಯ ವೇಳೆ ಅಧಿಕಾರಿಗಳು ಪ್ರಶ್ನಿಸಿದರೆ ಇದೇ ದಾಖಲೆಗಳನ್ನು ಮುಂದಿರಿಸಿ, ’ನಾವೂ ಭಾರತೀಯರು’ ಎನ್ನುತ್ತಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ ಒಂದಷ್ಟು ಶುದ್ಧೀಕರಣ ಆಗಿದೆಯಾದರೂ, ಅದು ಪೂರ್ಣಪ್ರಮಾಣದಲ್ಲಿ ನಡೆದಿಲ್ಲ ಎಂಬುದು ವಾಸ್ತವ. ಎನ್​ಆರ್​ಸಿ, ಸಿಎಎ ಮತ್ತು ನುಸುಳುಕೋರರ ವಿಷಯಗಳು ಪ್ರಮುಖ ಚುನಾವಣಾ ಚರ್ಚಾ ವಿಷಯಗಳಾಗಿವೆ. ಸ್ಥಳೀಯ ಸಮಸ್ಯೆಗಳಾದ ಭೂಮಿ ಹಕ್ಕುಗಳು, ಉದ್ಯೋಗ ಮತ್ತು ಬುಡಕಟ್ಟು ಸಮುದಾಯಗಳ ಬೇಡಿಕೆಗಳು ಕೂಡ ಚುನಾವಣೆಯ ಮೇಲೆ ಪ್ರಭಾವ ಬೀರಲಿವೆ. ಹಿಮಂತ ಬಿಸ್ವಾ ಶರ್ಮಾ ಆಡಳಿತ ವೈಖರಿ ಮತ್ತು ಗೌರವ್ ಗೊಗೊಯ್ ನಾಯಕತ್ವದ ನಡುವೆ ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ.
ಈಶಾನ್ಯ ಭಾರತದ ಪ್ರಮುಖ ರಾಜ್ಯ ಅಸ್ಸಾಂನಲ್ಲಿ ಬಿಜೆಪಿ ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದೆ. ಮೂರನೇ ಗೆಲುವಿಗೆ ಸಿದ್ಧತೆ ನಡೆಸಿದ್ದು, ಚುನಾವಣೆ ಘೋಷಣೆಯ ಮುಂಚೆಯೇ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಕಳೆದ ಆರು ತಿಂಗಳಲ್ಲೇ ಮೂರು ಬಾರಿ ಅಸ್ಸಾಂಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ್ದಾರೆ. ಎನ್​ಡಿಎ ಮೈತ್ರಿಕೂಟ 126 ಸ್ಥಾನಗಳ ಪೈಕಿ ಈ ಬಾರಿ 100 ಸ್ಥಾನಗಳಲ್ಲಿ ಗೆಲ್ಲುವ ಗುರಿ ಇರಿಸಿಕೊಂಡಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಏರದಂತೆ ಮಾಡಲು ಪ್ರಯತ್ನ ತೀವ್ರಗೊಳಿಸಿರುವ ಕಾಂಗ್ರೆಸ್ ಹಲವು ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಅಸ್ಸಾಂ ವಿಧಾನಸಭೆಯ ಚುನಾವಣೆ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಫಲಿತಾಂಶವು ಮೇ 4ರಂದು ಪ್ರಕಟವಾಗಲಿದೆ. ರಾಜ್ಯದ 126 ಕ್ಷೇತ್ರಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್​ಡಿಎ) ಮತ್ತು ಅಸೋಮ್ ಸನ್ಮಿಲಿತೋ ಮೋರ್ಚಾ (ಎಎಸ್​ಎಮ್ ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದಲ್ಲಿ ಬಿಜೆಪಿ 89 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಮಿತ್ರಪಕ್ಷ ಅಸೋಮ್ ಗಣ ಪರಿಷತ್ (ಎಜಿಪಿ) 26 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ.
ಮತ್ತೊಂದು ಮಿತ್ರ ಪಕ್ಷ, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) 11 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಈ ಬಾರಿ ಎನ್​ಡಿಎಯಿಂದ ಹೊರ ಬಂದಿರುವ ಯುಪಿಪಿಎಲ್ ಸ್ವತಂತ್ರವಾಗಿ ಸ್ಪರ್ಧಿ ಸಿದೆ. 2023ರ ಕ್ಷೇತ್ರ ಮರುವಿಂಗಡಣೆಯ ನಂತರ ಅಸ್ಸಾಂನಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಮರು ವಿಂಗಡಣೆಯ ಬಳಿಕ ಮುಸ್ಲಿಂ ಬಾಹುಳ್ಯ ಕ್ಷೇತ್ರಗಳ ಸಂಖ್ಯೆ 30ರಿಂದ 22ಕ್ಕೆ ಇಳಿದಿದೆ.
ಅಸ್ಸಾಂ
ಒಟ್ಟು ಜನಸಂಖ್ಯೆ 3.12 ಕೋಟಿ
ಒಟ್ಟು ಮತಗಟ್ಟೆಗಳು 31,486
ಒಟ್ಟು ಮತದಾರರು 2.50 ಕೋಟಿ
ಪುರುಷರು 1.25 ಕೋಟಿ
ಮಹಿಳೆಯರು 1.25 ಕೋಟಿ
ತೃತಿಯ ಲಿಂಗಿಗಳು 343
ಮೊದಲ ಬಾರಿ ಮತದಾನ ಮಾಡಲಿರುವ ಯುವಕ - ಯುವತಿಯರು 5.75 ಲಕ್ಷ
ಅಸೋಮ್ ಸನ್ಮಿಲಿತೋ ಮೋರ್ಚಾ (ವಿರೋಧ ಪಕ್ಷಗಳ ಒಕ್ಕೂಟ)
ಅಸೋಮ್ ಸನ್ಮಿಲಿತೋ ಮೋರ್ಚಾದ ನೇತೃತ್ವ ವಹಿಸಿರುವ ಕಾಂಗ್ರೆಸ್, ಗೌರವ್ ಗೊಗೊಯ್ ನಾಯಕತ್ವದಲ್ಲಿ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಗೌರವ್ ಗೊಗೊಯ್ ಗೆಲುವು ಪಕ್ಷಕ್ಕೆ ಹೊಸ ಉತ್ಸಾಹ ನೀಡಿದೆ. ರೈಜೋರ್ ದಳ ಪಕ್ಷವು ಅಖಿಲ್ ಗೊಗೊಯ್ ನೇತೃತ್ವದಲ್ಲಿ 11 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಅಸ್ಸಾಂ ಜಾತೀಯ ಪರಿಷತ್ (ಎಜೆಪಿ), ಎಡಪಕ್ಷಗಳು, ಸಿಪಿಐ (ಎಂ), ಸಿಪಿಐ ಈ ಮೈತ್ರಿಕೂಟದ ಭಾಗವಾಗಿವೆ.

ಮಹಿಳಾ ಮತಬ್ಯಾಂಕ್

ಬಿಜೆಪಿ ಸರ್ಕಾರವು ಜಾರಿಗೆ ತಂದ ‘ಅರುಣೋದೋಯ್’ (ಆರ್ಥಿಕ ನೆರವು) ನಂತಹ ಯೋಜನೆಗಳು ಮಹಿಳಾ ಮತದಾರರನ್ನು ಸೆಳೆಯುತ್ತಿವೆ. ಪ್ರತಿ ತಿಂಗಳು 1250 ರೂ. ನೆರವು ನೀಡಲಾಗುತ್ತಿದ್ದು, 40 ಲಕ್ಷ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ವಾರ್ಷಿಕವಾಗಿ 3,600 ಕೋಟಿ ರೂಪಾಯಿಗಳನ್ನು ಇದಕ್ಕೆ ವೆಚ್ಚ ಮಾಡಲಾಗುತ್ತಿದೆ. ಈವರೆಗೆ, ಅರುಣೋದೋಯ್ ಯೋಜನೆಯಡಿ ಮಹಿಳೆಯರಿಗೆ 17 ಸಾವಿರ ಕೋಟಿ ರೂ. ನೇರ ಹಣ ವರ್ಗಾವಣೆ ಮಾಡಲಾಗಿದೆ. ಮಧ್ಯಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಲ್ಲಿ ಮಹಿಳೆಯರಿಗೆ ಹಣಕಾಸಿನ ನೆರವು ನೀಡುವ ಯೋಜನೆ ಗೇಮ್ ಚೇಂಜರ್ ಆಗಿ ಸಾಬೀತಾಗಿದ್ದು, ಅಸ್ಸಾಂನಲ್ಲಿ ಯಾವ ಬಗೆಯ ಪರಿಣಾಮ ಬೀರಬಹುದು ಎಂಬುದನ್ನು ಕಾದುನೋಡಬೇಕು. ಅಲ್ಲದೆ, ಚಹಾ ತೋಟದ ಕಾರ್ವಿುಕರಿಗೆ ಭೂಮಿ ಹಕ್ಕು ನೀಡಿರುವುದು ಬಿಜೆಪಿಗೆ ಪೂರಕ ಅಂಶವಾಗಿ ಪರಿಣಮಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿ ಈ ಕಾರ್ವಿುಕರ ಸಂಖ್ಯೆ 10 ಲಕ್ಷದಷ್ಟಿದೆ.

ಇತರ ಪಕ್ಷಗಳು (ತಟಸ್ಥ)

ಬದ್ರುದ್ದೀನ್ ಅಜ್ಮಲ್ ನೇತೃತ್ವದಲ್ಲಿ ಎಐಯುಡಿಎಫ್ 27 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದೆ. ಇದು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಕಾಂಗ್ರೆಸ್ ಮತಬ್ಯಾಂಕ್​ಗೆ ಪೆಟ್ಟು ನೀಡುವ ಸಾಧ್ಯತೆ ಯಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಗಳು ಕೂಡ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಅಭ್ಯರ್ಥಿಗಳ ಸಂಖ್ಯೆ ಇಳಿಮುಖ

ಈ ಬಾರಿ ಒಟ್ಟು 722 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದು ಕಳೆದ 48 ವರ್ಷಗಳಲ್ಲಿ ಅಸ್ಸಾಂ ಚುನಾವಣೆಯಲ್ಲಿ ಕಂಡುಬಂದ ಅತಿ ಕಡಿಮೆ ಅಭ್ಯರ್ಥಿಗಳ ಸಂಖ್ಯೆಯಾಗಿದೆ.
ಪ್ರತಿಪಕ್ಷದ ಅಸ್ತ್ರಗಳು
- ಭ್ರಷ್ಟಾಚಾರ - ನಿರುದ್ಯೋಗ - ಉದ್ಯಮ-ಉದ್ಯಮಿಗಳಿಗೆ ಸರ್ಕಾರ ಬುಡಕಟ್ಟು ಜನರ 40 ಸಾವಿರ ಬಿಗಾ (7.5 ಬಿಗಾ ಎಂದರೆ 1 ಹೆಕ್ಟೇರ್) ಜಮೀನು ಹಸ್ತಾಂತರಿಸುತ್ತಿದೆ ಎಂಬ ಆರೋಪ - ಬೆಲೆ ಏರಿಕೆ - ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)

ಡಬಲ್ ಇಂಜಿನ್ ಸರ್ಕಾರ

ಕಳೆದ 10 ವರ್ಷಗಳಲ್ಲಿ ಅಸ್ಸಾಂ ರಾಜ್ಯವು ಮೂಲಸೌಕರ್ಯ, ಆರ್ಥಿಕತೆ ಮತ್ತು ಸಾಮಾಜಿಕ ವಲಯಗಳಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಬೋಗಿಬೀಲ್ ಸೇತುವೆ (ಭಾರತದ ಅತಿ ಉದ್ದದ ರೈಲು-ರಸ್ತೆ ಸೇತುವೆ) ಮತ್ತು ಧೋಲಾ-ಸಾದಿಯಾ ಸೇತುವೆಯಂತಹ ಬೃಹತ್ ಯೋಜನೆಗಳು ಪೂರ್ಣಗೊಂಡಿವೆ. ದಿನಕ್ಕೆ ಸರಾಸರಿ 13 ಕಿ.ಮೀ ಪಕ್ಕಾ ರಸ್ತೆ ನಿರ್ವಣವಾಗುತ್ತಿದೆ. ರಾಜ್ಯದ ಬಹುತೇಕ ರೈಲು ಮಾರ್ಗಗಳ ವಿದ್ಯುದ್ದೀಕರಣ ಮತ್ತು ಬ್ರಾಡ್-ಗೇಜ್ ಪರಿವರ್ತನೆ ಪೂರ್ಣಗೊಂಡಿದೆ. ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೊರ್ಡೆಲೊಯ್ ವಿಮಾನ ನಿಲ್ದಾಣವನ್ನು ಆಧುನೀಕರಿಸಲಾಗುತ್ತಿದೆ.
ಗುವಾಹಟಿಯಲ್ಲಿ ಏಮ್ಸ್​ ಸ್ಥಾಪಿಸಲಾಗಿದೆ. ರಾಜ್ಯದ ಹಲವೆಡೆ ಹೊಸ ವೈದ್ಯಕೀಯ ಕಾಲೇಜುಗಳು ನಿರ್ವಣಗೊಂಡಿವೆ. 1.76 ಕೋಟಿ ಜನರಿಗೆ ಆಯುಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗಿದೆ. ಜಲ ಜೀವನ್ ಮಿಷನ್ ಅಡಿ 57 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮನೆಗಳಿಗೆ ನಳದ ನೀರು ಸಂಪರ್ಕ ಕಲ್ಪಿಸಲಾಗಿದೆ. ಪಿಎಂ ಆವಾಸ್ ಯೋಜನೆಯಡಿ 12.55 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ವಿುಸಿಕೊಡಲಾಗಿದೆ. ಉಜ್ವಲ ಯೋಜನೆ ಅನ್ವಯ 50 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಎಲ್​ಪಿಜಿ ಸಂಪರ್ಕ ನೀಡಲಾಗಿದೆ.
ಶಾಂತಿ ಒಪ್ಪಂದಗಳು: ಬೋಡೋ, ಕರ್ಬಿ ಮತ್ತು ಉಲ್ಪಾ ಬಂಡುಕೋರ ಗುಂಪುಗಳೊಂದಿಗೆ ಐತಿಹಾಸಿಕ ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ದಶಕಗಳ ಕಾಲದ ಹಿಂಸಾಚಾರಕ್ಕೆ ಅಂತ್ಯ ಹಾಡಿ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ವಿುಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net