ಪ್ರಚಾರದ ಗಿಮಿಕ್ ಅಂತ ಹೇಳ್ಬೇಡಿ! ಪ್ರತಿಭಟನಾಕಾರರ ಮೇಲೆ ಪೊಲೀಸರ ದೌರ್ಜನ್ಯ, 'ಕೇಂದ್ರ'ಕ್ಕೆ ಹೈಕೋರ್ಟ್ ತಪರಾಕಿ

ದೆಹಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ
ದೆಹಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನಾಕಾರರ ಮೇಲೆ ಭೀಕರ ಬಲಪ್ರಯೋಗ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ
  • 110 ವಿಡಿಯೋ ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸಿದ ಅರ್ಜಿದಾರರ ಪರ ವಕೀಲರು
  • ಇದು ಪ್ರಚಾರದ ಗಿಮಿಕ್ ಅಲ್ಲ ಎಂದು ಸರ್ಕಾರ ಪರ ವಕೀಲರಿಗೆ ಹೈಕೋರ್ಟ್​ ತಪರಾಕಿ
  • ಸಿಸಿಟಿವಿ ಫೂಟೇಜ್ ಮತ್ತು ತನಿಖಾ ದಾಖಲೆಗಳನ್ನು ಎಸ್‌ಒಪಿ (SOP) ಪ್ರಕಾರ ಸುರಕ್ಷಿತವಾಗಿಡಲು ನಿರ್ದೇಶನ
ನವದೆಹಲಿ: ಸಂಸತ್ ಭವನದತ್ತ ಸೇರಿದ್ದ ಸಿಜೆಪಿ ನೇತೃತ್ವದ ಪ್ರತಿಭಟನಾಕಾರರ ಮೇಲೆ ಪೊಲೀಸರು ಅತ್ಯಂತ ಭೀಕರ ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್​) ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಖಾಕಿ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ವಿಡಿಯೋ ಸಾಕ್ಷ್ಯಗಳನ್ನು ತಕ್ಷಣವೇ ಸುರಕ್ಷಿತವಾಗಿಡಲು ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ನೀಡಿದೆ.

ಮಹಿಳೆಯರ ಮೇಲೆ ದೌರ್ಜನ್ಯ

ನ್ಯಾಯಾಲಯದಲ್ಲಿ ಪೊಲೀಸರ ಮೇಲೆ ಸಾಲು ಸಾಲು ಗಂಭೀರ ಆರೋಪಗಳನ್ನು ಹೊರಿಸಿದ ಅರ್ಜಿದಾರರ ಪರ ವಕೀಲರು, ಸಂವಿಧಾನಬದ್ಧವಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಊಹಿಗೂ ಮೀರುವಂತೆ ದೆಹಲಿ ಪೊಲೀಸ್​ ಪಡೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲದೇ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪ್ರತಿಭಟನೆಯಲ್ಲಿ ತೊಡಗಿದ್ದ ಮಹಿಳೆಯರ ಖಾಸಗಿ ಅಂಗಗಳಿಗೆ ಲಾಠಿಯಿಂದ ಥಳಿಸಲಾಗಿದೆ ಎಂದಿದ್ದಾರೆ.

ಸಿವಿಲ್ ಉಡುಪಿನಲ್ಲಿ ದಾಳಿ

ಪೊಲೀಸರ ನೇಮ್ ಬ್ಯಾಡ್ಜ್ ಇಲ್ಲದೆ, ಜೀನ್ಸ್ ಮತ್ತು ಟೀ-ಶರ್ಟ್ ಉಡುಪುಗಳಲ್ಲಿ ಕಾಣಿಸಿಕೊಂಡ ಎಷ್ಟೋ ಮಂದಿ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇವರೆಲ್ಲ ಯಾರು? ಸಿವಿಲ್​ ಡ್ರೆಸ್​ನಲ್ಲಿ ಲಾಠಿ ಪ್ರಹಾರ ಹೇಗಾಯಿತು? ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯುಗಳನ್ನು ಬಳಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದ್ದಾರೆ.

110 ವಿಡಿಯೋ ಫೂಟೇಜ್​ ಸಾಕ್ಷಿ

ಈ ಅಟ್ಟಹಾಸಕ್ಕೆ ಸಂಬಂಧಿಸಿದಂತೆ 110 ವಿಡಿಯೋ ಫೂಟೇಜ್​ ಸಾಕ್ಷ್ಯಗಳು ಲಭ್ಯವಿದ್ದು, 90ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ಅರ್ಜಿದಾರರ ಪರ ವಕೀಲರಾದ ಎನ್. ಹರಿಹರನ್ ಹಾಗೂ ವಿಕಾಸ್ ಸಿಂಗ್ ಕೋರ್ಟ್‌ಗೆ ತಿಳಿಸಿದ್ದಾರೆ.

ಇದು ಪ್ರಚಾರದ ಅರ್ಜಿ

ಅರ್ಜಿದಾರರ ವಾದಕ್ಕೆ ಕೌಂಟರ್​ ನೀಡಿದ ದೆಹಲಿ ಪೊಲೀಸರು ಹಾಗೂ ಕೇಂದ್ರ ಸರ್ಕಾರ ಪರವಾಗಿ ಹಾಜರಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ (ASG) ಎಸ್‌. ರಾಜು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. ಉಗ್ರರೂಪ ತಾಳಿದ ಪ್ರತಿಭಟನಾಕಾರರೇ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಮತ್ತು ಇದರಿಂದ ಅನೇಕ ಖಾಕಿ ಪಡೆಯ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದರು.

ರಾಜಕೀಯ ಲಾಭ

ಶಾಂತಿಯುತ ಪ್ರತಿಭಟನೆಯನ್ನು ಕೆಲ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಹೈಜಾಕ್ ಮಾಡಿವೆ. ಸಂತ್ರಸ್ತರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೋಗಿ ಎಫ್‌ಐಆರ್ ದಾಖಲಿಸುವ ಬದಲು, ನೇರವಾಗಿ ಹೈಕೋರ್ಟ್‌ಗೆ ಬಂದಿರುವುದು ಕೇವಲ ಮಾಧ್ಯಮಗಳ ಗಮನ ಸೆಳೆಯಲು ಮತ್ತು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಎಂದು ರಾಜು ಪ್ರತಿಪಾದಿಸಿದರು.

ಇದು ಪಬ್ಲಿಸಿಟಿ ಗಿಮಿಕ್ ಅಲ್ಲ

ಎರಡು ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಇದು ಪಬ್ಲಿಸಿಟಿಯ ಗಿಮಿಕ್​ ಅಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ಪೊಲೀಸ್ ಪರ ವಕೀಲರಿಗೆ ತಪರಾಕಿ ಹಾಕಿತು. ಸರ್ಕಾರದ ವಾದವನ್ನು ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ನೇತೃತ್ವದ ಪೀಠವು ತೀವ್ರವಾಗಿ ಪ್ರಶ್ನಿಸಿತು. ಇದು ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ ಎಂದು ನೀವು ಹೇಗೆ ಹೇಳುತ್ತೀರಿ? ಇಂತಹ ಗಂಭೀರ ಘಟನೆ ನಡೆದಾಗ ಪ್ರತಿಯೊಬ್ಬ ಸಂತ್ರಸ್ತನೂ ಪ್ರತ್ಯೇಕವಾಗಿ ಹೋಗಿ ಎಫ್‌ಐಆರ್ ದಾಖಲಿಸಲು ಸಾಧ್ಯವೇ? ಇದು ಪ್ರತ್ಯೇಕ ಘಟನೆಯಲ್ಲ ಎಂದು ಪೀಠವು ಸರ್ಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.

4 ವಾರಗಳ ಡೆಡ್​ಲೈನ್​

ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ತನಿಖಾ ವರದಿ ಮತ್ತು ಉತ್ತರವನ್ನು ಇನ್ನೂ ನಾಲ್ಕು ವಾರಗಳ ಒಳಗಾಗಿ ಸಲ್ಲಿಸುವಂತೆ ದೆಹಲಿ ಪೊಲೀಸ್ ಮತ್ತು ಕೇಂದ್ರ ಸರ್ಕಾರಕ್ಕೆ ಆದೇಶಿಸಿತು. ಇದರ ಜತೆಗೆ ಸಿಸಿಟಿವಿ ಫೂಟೇಜ್​ಗಳನ್ನು ಕಾಯ್ದಿರಿಸಲು ಸೂಚಿಸಿತು. ಘಟನೆ ನಡೆದ ದಿನದ ಎಲ್ಲಾ ಸಿಸಿಟಿವಿ ದೃಶ್ಯಗಳು ಹಾಗೂ ತನಿಖಾ ದಾಖಲೆಗಳನ್ನು ಯಾವುದೇ ಕಾರಣಕ್ಕೂ ನಾಶಪಡಿಸದೆ, ಎಸ್‌ಒಪಿ (SOP) ಪ್ರಕಾರ ಸುರಕ್ಷಿತವಾಗಿಡಲು ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net